ಹಾಸನ: ಕೆಲದಿನಗಳಿಂದ ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿರುವ ಶಾಸಕ ಶಿವಲಿಂಗೇಗೌಡ, ಬಿಜೆಪಿ ಮುಖಂಡ, ಸಿಎಂ ಮಾಜಿ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ವಿರುದ್ಧ ʼಸಂತೋಷ್ ಹಠಾವೊ ಅರಸೀಕೆರೆ ಬಚಾವೊʼ ಹೆಸರಿನಲ್ಲಿʼ ಬೃಹತ್ ಪ್ರತಿಭಟನಾ ಸಭೆ ನಡೆಸಿ ಶಕ್ತಿಪ್ರದರ್ಶನ ಮಾಡಿದ್ದಾರೆ. ಆ ಮೂಲಕ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಅರಸೀಕೆರೆ ಕ್ಷೇತ್ರದಲಿ ತಾವಿನ್ನೂ ಪ್ರಬಲ ನಾಯಕ ಎಂಬ ಸಂದೇಶವನ್ನು ರವಾನಿಸಿದ್ದಾರೆ.
ಅರಸೀಕೆರೆ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಎನ್.ಆರ್.ಸಂತೋಷ್, ಎರಡು ವಾರಗಳ ಹಿಂದೆ ಅರಸೀಕೆರೆಯಲ್ಲಿ ಶಾಸಕ ಶಿವಲಿಂಗೇಗೌಡ ವಿರುದ್ಧ ಹೋರಾಟ ನಡೆಸಿದ್ದ ಬಿಜೆಪಿ ಕಾರ್ಯಕರ್ತರು, ಶಿವಲಿಂಗೇಗೌಡ ʼರಾಗಿಕಳ್ಳʼ ಎಂದು ಎಂದು ಆಕ್ರೋಶ ಹೊರಹಾಕಿದ್ದರು. ಇದಕ್ಕೆ ಪ್ರತಿಯಾಗಿ ಜೆಡಿಎಸ್ ಶಾಸಕರಾದರೂ ಪಕ್ಷದಿಂದ ಅಂತರ ಕಾಯ್ದುಕೊಂಡು ಶಿವಲಿಂಗೇಗೌಡ ತಮ್ಮ ಅಭಿಮಾನಿಗಳ ಅರಸೀಕೆರೆಯಲ್ಲಿ ಮೂಲಕ ಬೃಹತ್ ಹೋರಾಟ ಆಯೋಜಿಸಿದ್ದರು.
ಇದನ್ನೂ ಓದಿ | ಮಾಜಿ ಸಿಎಂ ಸಿದ್ದರಾಮಯ್ಯ ಮನೆಯಲ್ಲಿ ಅಪ್ಪ ಮಾಂಸಾಹಾರಿ, ಮಗ ಸಸ್ಯಾಹಾರಿ
ಕೆಲ ದಿನಗಳಿಂದ ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿರುವ ಶಾಸಕ ಶಿವಲಿಂಗೇಗೌಡ ಅವರು ಕಾಂಗ್ರೆಸ್ ಸೇರುತ್ತಾರೆಂಬ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆಯಾಗಿತ್ತು. ಈಗ ಸಂತೋಷ್ ವಿರುದ್ಧದ ಹೋರಾಟದ ಮೂಲಕ ಶಕ್ತಿ ಪ್ರದರ್ಶನ ನಡೆಸಿದ ಶಿವಲಿಂಗೇಗೌಡ, ಕ್ಷೇತ್ರ ಇನ್ನೂ ತಮ್ಮ ಹಿಡಿತದಲ್ಲೇ ಇದೆ ಎಂಬುದನ್ನು ಈ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದೇ ಚರ್ಚೆಯಾಗುತ್ತಿದೆ. ಭಾರಿ ಸಂಖ್ಯೆಯಲ್ಲಿ ಜನ ಸೇರಿಸಿ ಬೃಹತ್ ಹೋರಾಟದ ಮೂಲಕ ಜೆಡಿಎಸ್, ಬಿಜೆಪಿ ಹಾಗೂ ಕೈ ನಾಯಕರಿಗೆ ಪರೋಕ್ಷ ಸಂದೇಶ ರವಾನಿಸಿದ್ದಾರೆ.
ಎಲ್ಲೋ ಹುಟ್ಟಿ ಇಲ್ಲಿ ಬಂದಿದ್ದೀರಾ?
ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಇಲ್ಲಿ ರಾಜಕೀಯ ನೆಲೆ ಕಂಡುಕೊಳ್ಳಲು ಬಂದಿದ್ದೀರಾ? ನಮ್ಮ ಮುಖಂಡರನ್ನು ಬಾಯಿಗೆ ಬಂದಂತೆ ಬೈಯುತ್ತೀರಾ? ಇದೇ ಕಾರಣಕ್ಕಾಗಿ ಅಭಿಮಾನಿಗಳು ನಿಮಗೆ ತಕ್ಕ ಉತ್ತರ ನೀಡಲು ಕಾರ್ಯಕ್ರಮ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ ಎನ್.ಆರ್.ಸಂತೋಷ್ ವಿರುದ್ಧ ಶಾಸಕ ಶಿವಲಿಂಗೇಗೌಡ ವಾಗ್ದಾಳಿ ನಡೆಸಿದರು.
ಕ್ಷೇತ್ರದ 580 ಹಳ್ಳಿಗಳ ಮನೆ ಮನೆಗೆ ಕುಡಿಯುವ ನೀರು ಹೋಗಿದೆ. ಹಿಂದಿನ ಸರ್ಕಾರದಲ್ಲಿ ಈ ಕುಡಿಯುವ ನೀರಿನ ಯೋಜನೆ ಜಾರಿಗಾಗಿ ಹೋರಾಟ ಮಾಡಿ ಆಸ್ಪತ್ರೆ ಸೇರಿದ್ದೆ. ಅಂದಿನ ಸಿಎಂ ಸಿದ್ದರಾಮಯ್ಯ ಕುಡಿಯುವ ನೀರಿನ ಯೋಜನೆಗೆ ಅನುದಾನ ಮಂಜೂರು ಮಾಡಿದ್ದರು. ಯಾರದೋ ಮೂರು ಜನರದ್ದು ಸಿ.ಡಿ. ಮಾಡಿ ಬಿಟ್ಟರೆ ನೀವು ನಾಯಕರಲ್ಲ. ಅರಸೀಕೆರೆ ಜನರನ್ನು ದಿಕ್ಕು ತಪ್ಪಿಸಲು ಹೊರಟಿದ್ದೀರಾ ಎಂದು ಕಿಡಿಕಾರಿದರು.
ಯಾವುದೇ ರಾಜ್ಯ ನಾಯಕರಿಲ್ಲದೆ ಐತಿಹಾಸಿಕ ಬೃಹತ್ ಕಾರ್ಯಕ್ರಮ ನಡೆದಿದೆ. ಚುನಾವಣೆಗೆ ನಿಲ್ಲುವೆ ಎಂದು ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿದ್ದೀಯಾ? ಅಧಿಕಾರಿಗಳು ತಿರುಗಿ ಬಿದ್ದರೆ ನಿನ್ನ ಮಾನ ಮರ್ಯಾದೆ ಮೂರು ಕಾಸಿಗೆ ಹರಾಜಾಗುತ್ತದೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ ಶಿವಲಿಂಗೇಗೌಡ, ಈ ಹಿಂದೆ ನಾವು ಯಾವುದೇ ಪಕ್ಷದ ನಾಯಕರು ಘರ್ಷಣೆ ಮಾಡಿಕೊಂಡಿಲ್ಲ, ನೀವು ಬಂದ ಮೇಲೆ ಬರೀ ಹೊಡೆದಾಟ ಮಾಡಿಸುತ್ತಿದ್ದೀರಿ, ಹೆದರಿಸಿ, ಬೆದರಿಸಿ ರಾಜಕಾರಣ ಮಾಡಲು ಸಾಧ್ಯವಿಲ್ಲ. ನಿಮಗೆ ರೈತರ ಬಗ್ಗೆ ಕಾಳಜಿ ಇದ್ದರೆ ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡಿ ಎಂದು ಸವಾಲು ಹಾಕಿದರು.
ಶಿವಲಿಂಗೇಗೌಡ ಮೂರು ಸಾರಿ ಗೆದ್ದಿದ್ದಾರೆ ಇನ್ನು ಸಾಕು ಎಂಬ ಸಂತೋಷ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಇದನ್ನು ಹೇಳಲು ನೀನು ಯಾರು? ಜನ ಗೆಲ್ಲಿಸಿದರೆ ಕೆಲಸ ಮಾಡುತ್ತೇನೆ, ಇಲ್ಲವೆಂದರೆ ಮನೆಗೆ ಹೋಗುತ್ತೇನೆ ಎಂದು ಹಾರಿಹಾಯ್ದರು. ಅಲ್ಲದೆ, ಊರೂರಲ್ಲಿ ಹೊಡೆದಾಟ ಮಾಡಿಸುವವರಿಗೆ ಟಿಕೆಟ್ ಕೊಡಬೇಡಿ, ಯಾರಾದರೂ ಪ್ರಾಮಾಣಿಕರಿಗೆ ಟಿಕೆಟ್ ನೀಡಿ ಎಂದು ಬಿಜೆಪಿ ನಾಯಕರಿಗೆ ಮನವಿ ಮಾಡಿದರು.
ಸಂತೋಷ್ ಮೇಲೆ ಮುತ್ತಿಗೆ ಯತ್ನ
ಶಿವಲಿಂಗೇಗೌಡ ಬೆಂಬಲಿಗರ ಪ್ರತಿಭಟನೆ ಮುಗಿಸಿ ವಾಪಸ್ ಬರುವ ವೇಳೆ ಅದೇ ರಸ್ತೆಯಲ್ಲಿ ಎನ್.ಆರ್. ಸಂತೋಷ್ ಬಂದಿದ್ದು, ಕೆಲವು ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕಾರಿನಲ್ಲಿಯೇ ಕುಳಿತು ಕೈಮುಗಿದು ಸಂತೋಷ್ ಹೊರಟಿದ್ದಾರೆ. ಆಗ ಸಂತೋಷ್ ವಿರುದ್ದ ಘೋಷಣೆ ಕೂಗುತ್ತಾ ಕಾರಿನ ಹಿಂದೆ ಶಿವಲಿಂಗೇಗೌಡ ಬೆಂಬಲಿಗರು ಓಡಿ ಬಂದಿದ್ದಾರೆ.
ಬಳಿಕ ಪೊಲೀಸ್ ಬಿಗಿ ಬಂದೋಬಸ್ತ್ ಮೂಲಕ ಬಿ.ಎಚ್ ರಸ್ತೆ ಮೂಲಕ ಸಂತೋಷ್‌ರನ್ನು ಕಳುಹಿಸಿಕೊಡಲಾಗಿದೆ. ಆದರೆ, ಅವರನ್ನು ಹಾಗೇ ಹೋಗಲು ಯಾಕೆ ಬಿಡಲಾಯಿತು ಎಂದು ಪೊಲೀಸರ ಜತೆ ವಾಗ್ವಾದ ನಡೆಸಿದರು.
ಇದನ್ನೂ ಓದಿ | ವಿಜಯಪುರ ಕಾಂಗ್ರೆಸ್ ಕಚೇರಿಗೆ ಸಾವರ್ಕರ್ ಫೋಟೊ, ಮುತ್ತಿಗೆ; 20ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರ ವಶ