ಹುಬ್ಬಳ್ಳಿ: ಪ್ರಸಕ್ತ ಸಾಲಿನ ವಿಧಾನಸಭಾ ಚುನಾವಣಾ (Karnataka Election 2023) ಕಣ ದಿನೇ ದಿನೆ ರಂಗು ಪಡೆದುಕೊಳ್ಳುತ್ತಿದೆ. ಅಬ್ಬರದ ಪ್ರಚಾರ ಕಾರ್ಯಗಳು ನಡೆಯುತ್ತಿವೆ. ಆಯಾ ಪಕ್ಷಗಳು ತಮ್ಮ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತಿವೆ. ಅಭ್ಯರ್ಥಿಗಳು ಸಹ ಅಬ್ಬರದ ಪ್ರಚಾರವನ್ನು ಕೈಗೊಳ್ಳುತ್ತಿದ್ದಾರೆ. ಇತ್ತ ಧಾರವಾಡ ಜಿಲ್ಲೆಯ ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಂತೋಷ್ ಲಾಡ್ ಭರ್ಜರಿ ಪ್ರಚಾರವನ್ನು ನಡೆಸಿದ್ದಾರೆ.
ಕಲಘಟಗಿ ಕ್ಷೇತ್ರದ ಮುಕ್ಕಲ್ ಗ್ರಾಮಕ್ಕೆ ಭೇಟಿ ನೀಡಿದ ಸಂತೋಷ್ ಲಾಡ್ ಅವರಿಗೆ ಗ್ರಾಮದ ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿದರು. ಈ ವೇಳೆ ಸಂತೋಷ್ ಲಾಡ್ ಅವರು ಭರ್ಜರಿ ಮತ ಬೇಟೆ ನಡೆಸಿದರು.
ಸೋಮನಕೊಪ್ಪ, ಮುಕ್ಕಲ್, ಬಿದರಗಡ್ಡಿ ಗ್ರಾಮಗಳಲ್ಲಿ ಪಾದಯಾತ್ರೆ ಮೂಲಕ ಸಾಗಿದ ಸಂತೋಷ್ ಲಾಡ್ ಅವರಿಗೆ ದಾರಿಯುದ್ದಕ್ಕೂ ಹೂಮಳೆ ಸುರಿಸಿ ಸ್ವಾಗತ ಕೋರಲಾಯಿತು. ಅಲ್ಲದೆ, ಡೊಳ್ಳು, ಜಾಂಜ್ ಮೇಳಗಳು ಮೆರವಣಿಗೆಗೆ ಮೆರುಗು ನೀಡಿದವು. ಈ ವೇಳೆ ಸಂತೋಷ್ ಲಾಡ್ ಪರ ಘೋಷಣೆಗಳು ಮೊಳಗಿದವು.
ಇದನ್ನೂ ಓದಿ: Karnataka Election 2023: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಯಾರಾಗ್ತಾರೆ ಸಿಎಂ; ಏನಂದ್ರು ಪ್ರಿಯಾಂಕಾ ಗಾಂಧಿ?
ಪ್ರಾಮಾಣಿಕವಾಗಿ ದುಡಿದಿದ್ದೇನೆ- ಲಾಡ್
ನಾನು ಕಲಘಟಗಿ ಕ್ಷೇತ್ರದಿಂದ ದೂರ ಹೋಗಿಲ್ಲ. ಈ ಕ್ಷೇತ್ರದ ಹಾಗೂ ಜನರ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ಜನರ ಸಂಕಷ್ಟಗಳಿಗೆ ಸ್ಪಂದಿಸಿದ್ದೇನೆ. ಪೂರ್ಣ ಬಹುಮತದಿಂದ ಗೆಲ್ಲಿಸಿ ಎಂದು ಮತದಾರರಲ್ಲಿ ಸಂತೋಷ್ ಲಾಡ್ ಮನವಿ ಮಾಡಿದರು.