Site icon Vistara News

Santosh Suicide Case: ಸಿಎಂ‌ ಭೇಟಿಯಾದ ಮೃತ ಸಂತೋಷ್‌ ಪಾಟೀಲ್‌ ಕುಟುಂಬಸ್ಥರು; ಪ್ರಕರಣ ಸಿಬಿಐಗೆ ವಹಿಸಲು ಮನವಿ

cm siddaramaiah With Santosh patils family

ಬೆಳಗಾವಿ: ಗುತ್ತಿಗೆದಾರ ಸಂತೋಷ್‌ ಪಾಟೀಲ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ಇಲ್ಲವೇ ಸಿಐಡಿಗೆ ವಹಿಸಬೇಕೆಂದು ಕುಟುಂಬಸ್ಥರು, ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ್ದಾರೆ. ನಗರದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಸಂತೋಷ್‌ ಪಾಟೀಲ್‌ ಕುಟುಂಬಸ್ಥರು, ಪ್ರಕರಣದಲ್ಲಿ ಬಿ ರಿಪೋರ್ಟ್‌ ಸಲ್ಲಿಕೆಯಿಂದ ನಮಗೆ ಅನ್ಯಾಯವಾಗಿದೆ ಎಂದು ಕಣ್ಣೀರಿಟ್ಟಿದ್ದಾರೆ. ಈ ವೇಳೆ ಅವರನ್ನು ಸಿದ್ದರಾಮಯ್ಯ ಸಮಾಧಾನ ಮಾಡಿ, ಪ್ರಕರಣವನ್ನು (Santosh Suicide Case) ಮರು ತನಿಖೆ ಮಾಡಲು ಕಾನೂನು ಇಲಾಖೆ ಜತೆ ಚರ್ಚಿಸಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.

ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ವಿರುದ್ಧ 40 ಪರ್ಸೆಂಟ್ ಕಮಿಷನ್‌ ಆರೋಪ‌ ಆತ್ಮಹತ್ಯೆ ಮಾಡಿಕೊಂಡಿದ್ದ ಬೆಳಗಾವಿಯ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ನ (Santosh patil) ಪತ್ನಿ ಜಯಶ್ರೀ, ಪುತ್ರ, ತಾಯಿ ಪಾರ್ವತಿ, ಸಹೋದರ ಪ್ರಶಾಂತ್, ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಸಂತೋಷ್‌ ಪಾಟೀಲ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ಅಥವಾ ಸಿಐಡಿಗೆ ವರ್ಗಾಯಿಸಬೇಕು ಎಂದು ಸಿಎಂ (cm siddaramaiah) ಅವರನ್ನು ಕೋರಿದ್ದಾರೆ.

ಕಾನೂನು ಇಲಾಖೆ ಜತೆ ಚರ್ಚಿಸುವೆ ಎಂದ ಸಿಎಂ

ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಗುತ್ತಿಗೆದಾರ ಸಂತೋಷ್ ಪಾಟೀಲ್ ಕುಟುಂಬಸ್ಥರು‌, ನಮಗೆ ನ್ಯಾಯ ಸಿಕ್ಕಿಲ್ಲ‌. ಪ್ರಕರಣವನ್ನು ಮರು ತನಿಖೆ ಮಾಡಬೇಕು ಎಂದು ಮನವಿ ಕೊಟ್ಟಿದ್ದಾರೆ. ಈ ಬಗ್ಗೆ ಕಾನೂನು ಇಲಾಖೆ ಜತೆಗೆ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ಸಿದ್ದರಾಮಯ್ಯ ಸರ್ಕಾರ ಬಿನ್ ಲಾಡೆನ್ ಸರ್ಕಾರ ಎಂಬ ಆರ್. ಅಶೋಕ್ ಹೇಳಿಕೆ‌ ಬಗ್ಗೆ ಪ್ರತಿಕ್ರಿಯಿಸಿ, ಬಿಜೆಪಿಯವರು ಹತಾಶರಾಗಿದ್ದು, ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು. ಇದೇ ವೇಳೆ ಬೆಳಗಾವಿಯಲ್ಲಿ ಪೊಲೀಸರಿಂದ ವಿಶೇಷಚೇತನ ವ್ಯಕ್ತಿ ಮೇಲೆ ಹಲ್ಲೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಪಿಎಸ್‌ಐ ಮೇಲೆ ಇಲಾಖಾ ತನಿಖೆ ಮಾಡಲು ಸೂಚಿಸುತ್ತೇವೆ‌. ಹಲ್ಲೆ ಮಾಡಿರುವುದು ತಪ್ಪು, ತಪ್ಪು ಮಾಡಿದವರ ಮೇಲೆ ಶಿಸ್ತಿನ ಕ್ರಮ ವಹಿಸುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ | Commission Politics : ನ್ಯಾಯಾಂಗ ಆಯೋಗಕ್ಕೆ ಕೊಠಡಿಯನ್ನೇ ಕೊಡದ ಸರ್ಕಾರ; ಇನ್ನೂ ಶುರುವಾಗದ ತನಿಖೆ!

ಗುತ್ತಿಗೆದಾರರ ಬಾಕಿ ಬಿಲ್ ಪಾವತಿಗೆ ಕೆಂಪಣ್ಣ ಒತ್ತಾಯ ವಿಚಾರಕ್ಕೆ ಸ್ಪಂದಿಸಿ, ಹಣ ಬಾಕಿ ಇರುವುದು ಯಾರ ಕಾಲದಲ್ಲಿನ ಕೆಲಸದ್ದು? ಹಿಂದಿನ ಸರ್ಕಾರದವರು ಬಾಕಿ ಉಳಿಸಿ ಹೋಗಿದ್ದಾರೆ. ಅವರು ಎರಡು ವರ್ಷ, ಮೂರು ವರ್ಷದ ಬಿಲ್ ಕೊಟ್ಟಿಲ್ಲ. ನಾವು ಬಂದು ಇನ್ನೂ ಮೂರು ತಿಂಗಳು ಕಳೆದಿಲ್ಲ. ನಾವು ಶೇ.40 ಕಮಿಷನ್ ದಂಧೆಯ ಬಗ್ಗೆ ಮಾತನಾಡಿದ್ದೆವು. ಈ ಬಗ್ಗೆ ತನಿಖೆ ಮಾಡಬೇಕಾ ಬೇಡಾ? ಗುಣಮಟ್ಟದ ಕೆಲಸ ಆಗಿದೆಯೇ ಇಲ್ಲವೇ ಎಂದು ತನಿಖೆ ನಡೆಸಲಾಗುತ್ತದೆ. ಗುಣಮಟ್ಟದ ಕೆಲಸ ಮಾಡಿರುವವರಿಗೆ ತೊಂದರೆ ಕೊಡಲ್ಲ‌. ಕಳಪೆ ಕಾಮಗಾರಿ ಮಾಡಿದವರ ವಿರುದ್ಧ ಕ್ರಮ ಕೈಗೊಳುತ್ತೇವೆ ಎಂದು ತಿಳಿಸಿದರು.

ಈ ರಾಜ್ಯವನ್ನು ಬಿಜೆಪಿಯವರು ಹಾಳು ಮಾಡಿದ್ದಾರೆ. ಅವರು ಭ್ರಷ್ಟಾಚಾರ, ಧರ್ಮ ರಾಜಕಾರಣ ಮಾಡಿದ್ದಾರೆ. ನಾವು 135 ಸ್ಥಾನ ಗೆದ್ದಿದ್ದರಿಂದ ಬಿಜೆಪಿಯವರಿಗೆ ಭಯ ಆರಂಭವಾಗಿದೆ. ಎಷ್ಟೇ ದುಡ್ಡು ಖರ್ಚು ಮಾಡಿದರೂ ಅವರು ಗೆಲ್ಲಲ್ಲಿಲ್ಲ. ಈಗ 20 ಲೋಕಸಭಾ ಕ್ಷೇತ್ರ ಗೆಲ್ಲುವ ಗುರಿ ಹೊಂದಿದ್ದೇವೆ, ಗೆಲ್ಲುತ್ತೇವೆ. ಬಿಜೆಪಿಯವರಿಗೆ‌ ಹೊಟ್ಟೆ ಉರಿ ಶುರುವಾಗಿ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಚಲವರಾಯಸ್ವಾಮಿ, ಡಿಕೆಶಿ ಮೇಲೆ ಎಲ್ಲಿ ಆರೋಪ ಬಂದಿದೆ. ಇವತ್ತು ಕೆಂಪಣ್ಣ ಯಾವ ಆರೋಪ ಮಾಡಿದ್ದಾರೆ. ಯಾವುದೇ ಭ್ರಷ್ಟಾಚಾರದ ಆರೋಪ ಮಾಡಿಲ್ಲ‌ ಎಂದು ತಿಳಿಸಿದರು.

ನನ್ನ ಮಗನಿಗೆ ನ್ಯಾಯ ಸಿಗಲಿಲ್ಲ: ಸಂತೋಷ್‌ ತಾಯಿ ಕಣ್ಣೀರು

ಸಿಎಂಗೆ ಮನವಿ ನೀಡಿದ ಬಳಿಕ ಗುತ್ತಿಗೆದಾರ ಸಂತೋಷ್‌ ಪಾಟೀಲ್ ತಾಯಿ ಪಾರ್ವತಿ ಮಾತನಾಡಿ, ಪ್ರಕರಣವನ್ನು ಸರಿಯಾಗಿ ತನಿಖೆ ಮಾಡಿಲ್ಲ. ಹೀಗಾಗಿ ತನಿಖೆ ನಡೆಸಲು ಸಿಬಿಐ, ಸಿಐಡಿಗೆ ಕೊಡುವಂತೆ ಮನವಿ ಮಾಡಿದ್ದೇವೆ‌. ಸಿಎಂ ಅವರು ತನಿಖೆ ಮಾಡಿಸುತ್ತೇವೆ ಅಂತ ಭರವಸೆ ಕೊಟ್ಟಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ | Commission Politics : ನ್ಯಾಯಾಂಗ ಆಯೋಗಕ್ಕೆ ಕೊಠಡಿಯನ್ನೇ ಕೊಡದ ಸರ್ಕಾರ; ಇನ್ನೂ ಶುರುವಾಗದ ತನಿಖೆ!

ನನ್ನ ಮಗ ಈಶ್ವರಪ್ಪ ಅವರಿಗೆ ಕಮಿಷನ್ ಕೊಟ್ಟಿದ್ದೇವೆ ಅಂದಿದ್ದ. ಬಿ ರಿಪೋರ್ಟ್‌ನಲ್ಲಿ ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ ಕೊಟ್ಟಿದ್ದಾರೆ. ಇದರಿಂದ ನನ್ನ ಮಗನಿಗೆ ಯಾವುದು ನ್ಯಾಯ ಸಿಗಲಿಲ್ಲ. ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪರನ್ನು ನನ್ನ ಮಗ ಅಪ್ಪಾಜಿ ಅಂತ ಕರೆಯುತ್ತಿದ್ದ. ಸೊಸೆಗೆ ನೌಕರಿ ಕೊಡುವ ಭರವಸೆ ನೀಡಿದ್ದರು, ಆದರೆ ಏನೂ ಕೊಟ್ಟಿಲ್ಲ. ಕೆಲಸ ಮಾಡಿದ ಹಣವನ್ನೂ ಕೊಡಲಿಲ್ಲ. ಒಂದು ಸಹಿ ಮಾಡಿದ್ದರೆ ನಮಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಬಿ ರಿಪೋರ್ಟ್ ಬಂದ ಬಳಿಕ ಈಶ್ವರಪ್ಪ ಮನೆಯಲ್ಲಿ ಸಿಹಿ ತಿಂದರು. ಅವರ ಮನೆಯಲ್ಲಿ ಹೀಗಾಗಿದ್ದರೆ ಸಿಹಿ ತಿನ್ನುತ್ತಿದ್ದರಾ? ಒಂದು ದಿನವೂ ಬಂದು ಯಾರೂ ನಮನ್ನು ಭೇಟಿಯಾಗಿ ಮಾತನಾಡಿಲ್ಲ ಎಂದು ಮಗನನ್ನು ನೆನೆದು ಪಾರ್ವತಮ್ಮ ಕಣ್ಣೀರಿಟ್ಟರು.

Exit mobile version