Site icon Vistara News

Santosh Suicide Case: ಉ.ಕ.ದಲ್ಲಿ ಪ್ರತಿಭಟನೆ

santosh santosh

ಶಿರಸಿ: ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್‌ ಸಮಿತಿ ವತಿಯಿಂದ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ಪ್ರತಿಭಟನೆಯ ನೇತೃತ್ವವನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ವಹಿಸಿದ್ದು, ಬಿಜೆಪಿ ವಿರುದ್ಧ ಕಿಡಿಕಾರಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಶಾಸಕ ಸತೀಶ್‌ ಜಾರಕಿಹೊಳಿ, ʼ2018ರಲ್ಲಿ ನಡೆದ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ 10% ಕಮಿಷನ್‌ ಸರ್ಕಾರ ಎಂದು ಬಿಜೆಪಿಯವರು ಆರೋಪಿಸಿದ್ದರು. ಪ್ರಧಾನಿ ಮೋದಿಯವರು ಅಂದು ಯಾವುದೇ ದಾಖಲೆಗಳಿಲ್ಲದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಮೇಲೆ ಆರೋಪ ಮಾಡಿದ್ದರು. ಆದರೆ ಇಂದು 40% ಕಮಿಷನ್‌ಗೆ ಗುತ್ತಿಗೆದಾರ ಸಂತೋಷ ಪಾಟೀಲ್‌ ಮೃತಪಟ್ಟಿದ್ದಾರೆ. ತಮ್ಮ ಸಾವಿಗೆ ನೇರ ಕಾರಣ ಈಶ್ವರಪ್ಪ ಎಂದು ಸಂತೋಷ್‌ ಆರೋಪಿಸಿದ್ದಾರೆ. ಆದರೆ ಪ್ರಧಾನಿ ಮೋದಿಯವರು ಮಾತ್ರ ಮೌನವಾಗಿದ್ದಾರೆʼ ಎಂದು ಹೇಳಿದರು. ಅಲ್ಲದೆ, ಈ ಬಗ್ಗೆ ಜನಕ್ಕೆ ಉತ್ತರ ನೀಡಬೇಕೆಂದು ಎಂದು ಪ್ರಧಾನಿ ಮೋದಿಯವರನ್ನು ಆಗ್ರಹಿಸಿದರು.

ಸಚಿವ ಈಶ್ವರಪ್ಪ ರಾಜಿನಾಮೆ ನೀಡಿದ ಹಿನ್ನಲೆಯಲಿ ಪ್ರತಿಕ್ರಿಯಿಸಿದ ಶಾಸಕರು ʼಕೆ.ಎಸ್.ಈಶ್ವರಪ್ಪ ಅವರನ್ನು ಸಚಿವರಾಗಿ ಉಳಿಸುವ ಎಲ್ಲ ರೀತಿಯ ಪ್ರಯತ್ನಗಳು ನಡೆದವು. ಆದರೆ, ಕಾಂಗ್ರೆಸ್‌ ಪಕ್ಷದ ಹಾಗೂ ಜನರ ಒತ್ತಡದಿಂದ ರಾಜ್ಯ ಸರ್ಕಾರ ಅವರ ರಾಜೀನಾಮೆ ಪಡೆದಿದೆʼ ಎಂದು ಹೇಳಿದರು.

ಸಚಿವ ಈಶ್ವರಪ್ಪ ತನಿಖೆಗೆ ಒಳಪಡಬೇಕು. ಅವರನ್ನು ಬಂಧಿಸಬೇಕು. ಅಲ್ಲಿಯವರೆಗೂ ಕಾಂಗ್ರೆಸ್‌ ಪಕ್ಷ ಪ್ರತಿಭಟನೆ ನಡೆಸುತ್ತದೆ ಎಂದು ಸತೀಶ್‌ ಜಾರಕಿಹೊಳಿ ತಿಳಿಸಿದರು. ಕೆ.ಎಸ್.ಈಶ್ವರಪ್ಪ ಅವರನ್ನು ಬಂಧಿಸಿ, ತನಿಖೆ ನಡೆಸುವಂತೆ ಆಗ್ರಹಿಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಕೆಪಿಸಿಸಿ ಉಪಾಧ್ಯಕ್ಷ ಮಧು ಬಂಗಾರಪ್ಪ, ಮಾಜಿ ಶಾಸಕರುಗಳಾದ ಸತೀಶ ಸೈಲ್, ಮಂಕಾಳ ವೈದ್ಯ, ಶಾರದಾ ಶೆಟ್ಟಿ, ಎಸ್. ಎಲ್ ಘೋಟ್ನೇಕರ್, ಕೆಪಿಸಿಸಿ ಎಸ್‌.ಟಿ. ಘಟಕದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಹಾದಿಮನಿ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಭೀಮಣ್ಣ ನಾಯ್ಕ ಮತ್ತಿತರು ಉಪಸ್ಥಿತರಿದ್ದರು.

ಹೆಚ್ಚಿನ ಓದಿಗಾಗಿ: ಗಣಪತಿ ಪ್ರಕರಣದಲ್ಲಿ ಜಾರ್ಜ್‌ರನ್ನು ಪೊಲೀಸರು ಬಂಧಿಸಿರಲಿಲ್ಲ: ಈಶ್ವರಪ್ಪ ಪ್ರಕರಣ ಕುರಿತು ಸಿಎಂ ಪ್ರತಿಕ್ರಿಯೆ

Exit mobile version