Site icon Vistara News

Santro Ravi case | ಸ್ಯಾಂಟ್ರೋ ರವಿ, ಸೈಕಲ್‌ ರವಿ ಬಿಜೆಪಿ ಸರ್ಕಾರದ ಮುತ್ತು, ರತ್ನಗಳಿದ್ದಂತೆ ಎಂದ ಡಿಕೆಶಿ

ಡಿ.ಕೆ.ಶಿವಕುಮಾರ್‌

ಬೆಳಗಾವಿ: ಸ್ಯಾಂಟ್ರೋ ರವಿ (Santro Ravi case) ಮತ್ತು ಸೈಕಲ್ ರವಿ ಬಿಜೆಪಿ ಸರ್ಕಾರದ ಮುತ್ತು ರತ್ನಗಳಿದ್ದಂತೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬೆಳಗಾವಿಯಲ್ಲಿ ವ್ಯಂಗ್ಯವಾಡಿದ್ದಾರೆ.

ಮಹಿಳೆಯರು ಕುಂಕುಮ ಹಚ್ಚಿದಾಗ ಒಂಥರಾ, ಮೂಗುತಿ ಹಾಕಿದಾಗ ಇನ್ನೊಂಥರಾ ಹೇಗೆ ಕಾಣ್ತಾರೋ ಹಾಗೆ ಇವರೆಲ್ಲ ಈ ಸರ್ಕಾರದ ಮುತ್ತು ರತ್ನಗಳಿದ್ದಂತೆ ಎಂದು ಡಿ.ಕೆ. ಶಿವಕುಮಾರ್‌ ಅವರು ಕ್ರಿಮಿನಲ್‌ಗಳನ್ನು ಹೆಣ್ಣು ಮಕ್ಕಳ ಸೌಂದರ್ಯಕ್ಕೆ ಹೋಲಿಸಿದರು.

ʻʻಸೈಕಲ್ ರವಿ,‌ ಸ್ಯಾಂಟ್ರೋ ರವಿ ಮುತ್ತು ರತ್ನಗಳಿದ್ದಂತೆ, ಈ ಸರ್ಕಾರಕ್ಕೆ ಶೋಭೆ ತರುತ್ತಿದ್ದಾರೆ. ಬಿಜೆಪಿ ನಾಯಕರು ಎಂದೆಂದೂ ನೆನಪು ಇಟ್ಟುಕೊಳ್ಳುವಂಥವರು ಇವರೆಲ್ಲʼʼ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್‌ನ ಬಹು ನಿರೀಕ್ಷೆಯ ಬಸ್‌ ಯಾತ್ರೆಯ ಆರಂಭಕ್ಕಾಗಿ ಬೆಳಗಾವಿಗೆ ಬಂದಿರುವ ಅವರು, ʻʻಕರ್ನಾಟಕ ಜನರ ಸಮಸ್ಯೆ, ನೋವು ಅಭಿಪ್ರಾಯ ಹೇಳಲು ಅವರ ಮುಂದೆ ಹೋಗುತ್ತಿದ್ದೇವೆʼʼ ಎಂದರು.

ʻʻಮಹಾತ್ಮಾ ಗಾಂಧೀಜಿಯವರು 1924ರಲ್ಲಿ ಇದೇ ಜಾಗದಲ್ಲಿ ಸ್ವಾತಂತ್ರ್ಯ ಹೋರಾಟದ ಮಹಾ ಅಧಿವೇಶನ ನಡೆಸಿದ್ದರು. ಅದೇ ವೀರಸೌಧದಿಂದಲೇ ಪ್ರಜಾಧ್ವನಿ ಯಾತ್ರೆಗೆ ಚಾಲನೆ ನೀಡಲಿದ್ದೇವೆʼʼ ಎಂದ ಅವರು, ʻʻಸರ್ಕಾರದ ಕೊಲೆ, ಕಾಯಿಲೆ, ಭ್ರಷ್ಟಾಚಾರ ತೊಳೆಯುತ್ತೇವೆʼʼ ಎಂದರು.

ʻʻಬಿಜೆಪಿಗೆ ರಾಜ್ಯದಲ್ಲಿ ಅಭಿವೃದ್ಧಿ ಚಟುವಟಿಕೆ ನಡೆಸಲು ಮಾಡಲು ಸಾಕಷ್ಟು ಅವಕಾಶಗಳಿದ್ದವು. ಬಂಡವಾಳ ಆಕರ್ಷಿಸುವ, ಉದ್ಯೋಗ ಸೃಷ್ಟಿಸುವ ಅವಕಾಶಗಳು ಇದ್ದವು. ಆದರೆ ಮೂರುವರೆ ವರ್ಷದಿಂದ ಈ ಸರ್ಕಾರ ಜನರ ಶಾಪಕ್ಕೆ ಒಳಗಾಗಿದೆ. ರಾಜ್ಯಕ್ಕೆ ಅಂಟಿರುವ ಶಾಪ ನಿರ್ಮೂಲನೆ ಮಾಡಲು ಪವಿತ್ರ ಭೂಮಿಯಿಂದ ಯಾತ್ರೆ ಆರಂಭಿಸುತ್ತಿದ್ದೇವೆʼʼ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ʻʻಕರ್ನಾಟದ ಬಿಜೆಪಿ ಸರ್ಕಾರ ಭ್ರಷ್ಟಾಚಾರದ ರಾಜಧಾನಿ. ನಾವು ಅಧಿಕಾರಕ್ಕೆ ಬಂದರೆ ಜನರಿಗೆ ಒಳ್ಳೆಯ ಆಡಳಿತ ನೀಡುವ ಭರವಸೆ ನೀಡುತ್ತೇವೆʼʼ ಎಂದ ಡಿ.ಕೆ. ಶಿವಕುಮಾರ್‌, ʻʻಈ ತಿಂಗಳು ರಾಜ್ಯರ ಹಲವೆಡೆ ಮೊದಲ ಹಂತದ ಯಾತ್ರೆ ನಡೆಯಲಿದೆ. ನಮ್ಮ ಯಾತ್ರೆ ಬಗ್ಗೆ ಬಿಜೆಪಿ ಏನೇ ಟೀಕೆ ಮಾಡಲಿ. ಅವರು ಟೀಕೆ ಮಾಡಬೇಕು, ನಮಗೂ ಅನುಕೂಲʼʼ ಎಂದರು.

ಬಿಜೆಪಿ ತಾನು ಮಾಡಿದ ಪಾಪದ ಕೆಲಸಗಳಿಗೆ ಈ ರಾಜ್ಯದ ಜನರಿಗೆ ಉತ್ತರ ಕೊಡಬೇಕು. ಪಾಪದ ಪುರಾಣದ ಪಟ್ಟಿ ನಮ್ಮ ಬಳಿ ಇದೆ, ಅದನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡುತ್ತೇವೆ ಎಂದರು ಡಿ.ಕೆ.ಶಿವಕುಮಾರ್‌.

ಇದನ್ನೂ ಓದಿ | Prajadhwani Yatre | ಬ್ರಿಟಿಷರನ್ನು ಓಡಿಸಿದಂತೆ ಬಿಜೆಪಿಯನ್ನು ಕಿತ್ತೊಗೆಯುತ್ತೇವೆ ಎಂದ ಡಿ.ಕೆ. ಶಿವಕುಮಾರ್: ಪ್ರಜಾಧ್ವನಿ ಯಾತ್ರೆ ಲೋಗೊ ಬಿಡುಗಡೆ

Exit mobile version