ಬೆಂಗಳೂರು: ಕುಖ್ಯಾತ ಕ್ರಿಮಿನಲ್, ರಾಜಕಾರಣಿಗಳನ್ನು, ಅಧಿಕಾರಿಗಳನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಸುತ್ತಿದ್ದ ಆರೋಪ ಹೊತ್ತಿರುವ ಸ್ಯಾಂಟ್ರೋ ರವಿಯ (Santro Ravi case) ಜತೆಗಿನ ಸಖ್ಯಕ್ಕೆ ಕಾಟನ್‌ಪೇಟೆ ಇನ್ಸ್‌ಪೆಕ್ಟರ್ ಪ್ರವೀಣ್ ಬೆಲೆ ತೆರಬೇಕಾಗಿ ಬಂದಿದೆ. ಸಾಂಟ್ರೋ ರವಿಯ ಮಾತು ಕೇಳಿ ಆತನ ಪತ್ನಿ ಮತ್ತು ನಾದಿನಿಯನ್ನು ಜೈಲಿಗೆ ಹೋಗುವಂತೆ ತಂತ್ರ ಹೆಣೆದ ಇನ್ಸ್‌ಪೆಕ್ಟರ್ ಪ್ರವೀಣ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಸ್ಯಾಂಟ್ರೋ ರವಿಗೆ ಸಹಕಾರ ನೀಡಿ ಆತನ ಪತ್ನಿ ಮತ್ತು ನಾದಿನಿ ವಿರುದ್ಧ ಸುಳ್ಳು ಕೇಸ್ ದಾಖಲಿಸಿದ್ದಕ್ಕಾಗಿ ಪ್ರವೀಣ್ ಅವರನ್ನು ಸೇವೆಯಿಂದ ಅಮಾನತು ಮಾಡಿ ಡಿಜಿಪಿ ಪ್ರವೀಣ್ ಸೂದ್ ಆದೇಶ ಹೊರಡಿಸಿದ್ದಾರೆ.
ಏನಿದು ಪ್ರಕರಣ?
2022ರ ನವೆಂಬರ್‌ನಲ್ಲಿ ಸ್ಯಾಂಟ್ರೋ ರವಿ ಎರಡನೇ ಪತ್ನಿ ಮತ್ತು ನಾದಿನಿ ತನ್ನನ್ನು ದರೋಡೆ ಮಾಡಿದ್ದಾರೆ ಎಂದು ಪ್ರಕಾಶ್ ಎಂಬುವರು ಕಾಟನ್ ಪೇಟೆ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಈ ಪ್ರಕರಣದಲ್ಲಿ ಸ್ಯಾಂಟ್ರೋ ರವಿ ಪತ್ನಿ ರಶ್ಮಿ ಹಾಗೂ ಆಕೆಯ ತಂಗಿಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ಇದೊಂದು ಸುಳ್ಳು ಪ್ರಕರಣ, ಸ್ಯಾಂಟ್ರೋ ರವಿ ಮಾತು ಕೇಳಿ ಇನ್ಸ್‌ಪೆಕ್ಟರ್ ಪ್ರವೀಣ್ ತಮ್ಮ ವಿರುದ್ಧ ಸುಳ್ಳು ಕೇಸು ದಾಖಲಿಸಿದ್ದರು ಎಂದು ರವಿ ಪತ್ನಿ ಇತ್ತೀಚೆಗೆ ಮೈಸೂರಿನ ವಿಜಯನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇದರ ಬಗ್ಗೆ ಮಾಹಿತಿ ಪಡೆದ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಪ್ರಕರಣದ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಡಿಸಿಪಿ ಲಕ್ಷ್ಮಣ್ ನಿಂಬರಗಿ ಅವರಿಗೆ ಸೂಚಿಸಿದ್ದರು. ಡಿಸಿಪಿ ಲಕ್ಷ್ಮಣ್ ನಿಂಬರಗಿ ತನಿಖೆ ನಡೆಸಿ ಕಮೀಷನರ್ ಪ್ರತಾಪ್ ರೆಡ್ಡಿಯವರಿಗೆ ವರದಿ ನೀಡಿದ್ದಾರೆ. ಕಮೀಷನರ್ ಅವರು ವರದಿಯನ್ನು ಡಿಜಿಪಿ ಪ್ರವೀಣ್ ಸೂದ್ ಅವರಿಗೆ ರವಾನೆ ಮಾಡಿದ್ದರು. ಈ ವರದಿಯನ್ನು ಆಧರಿಸಿ ಡಿಜಿಪಿ ಈಗ ಕ್ರಮ ಕೈಗೊಂಡಿದ್ದಾರೆ.
ಆವತ್ತು ಆಗಿದ್ದೇನು?
ಸ್ಯಾಂಟ್ರೋ ರವಿ ಎರಡನೇ ಪತ್ನಿ ರಶ್ಮಿ ಹಾಗೂ ಆಕೆಯ ತಂಗಿ ವಿರುದ್ಧ ಕಾಟನ್ ಪೇಟೆಯಲ್ಲಿ ಐಪಿಸಿ 397 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಇಬ್ಬರು ಮಹಿಳೆಯರು ಹಾಗೂ ಶೇಕ್ ಎಂಬಾತನ ಮೇಲೆ ದರೋಡೆ ಕೇಸು ದಾಖಲಿಸಿ ಬಂಧಿಸಲಾಗಿತ್ತು.
ಸ್ಯಾಂಟ್ರೋ ರವಿ ಪತ್ನಿ ಮತ್ತು ನಾದಿನಿ ಅವರು ಪ್ರಕಾಶ್ ಎಂಬುವರ ಬಳಿ ತುರ್ತಾಗಿ ಐದು ಲಕ್ಷ ಹಣ ಬೇಕು ಎಂದು ಕೇಳಿದ್ದಂತೆ. ಚೆಕ್ ಪಡೆದು ಹಣ ಕೊಡಲು ಪ್ರಕಾಶ್ ಒಪ್ಪಿದ್ದರಂತೆ. ನಂತರ ಪ್ರಕಾಶ್‌ಗೆ ಹಣ ಮರಳಿಸಲು ಸ್ಯಾಂಟ್ರೋ ರವಿ ಪತ್ನಿ ಮುಂದಾಗಿದ್ದು, ನವೆಂಬರ್ 23ರಂದು ಮೆಜೆಸ್ಟಿಕ್ ಬಳಿಯ ಖೋಡೇಸ್ ಸರ್ಕಲ್ ಗೆ ಬರಲು ಹೇಳಿದ್ದರಂತೆ. ಈ ವೇಳೆ ಇಬ್ಬರ ನಡುವೆ ಚೆಕ್ ಮತ್ತು ಹಣ ಪಡೆಯುವ ವಿಚಾರಕ್ಕೆ ಗಲಾಟೆ ನಡೆದು ಸ್ಯಾಂಟ್ರೋ ರವಿ ಪತ್ನಿ ಮತ್ತು ನಾದಿನಿ ಚಾಕು ತೋರಿಸಿ ತನ್ನನ್ನು ದರೋಡೆ ಮಾಡಿದ್ದಾರೆ ಎಂದು ಪ್ರಕಾಶ್ ಆರೋಪಿಸಿದ್ದರು.
ನಿಜವೆಂದರೆ ಇದೆಲ್ಲವೂ ಸ್ಯಾಂಟ್ರೋ ರವಿ ತನ್ನ ಪತ್ನಿ ಮತ್ತು ನಾದಿನಿ ವಿರುದ್ಧ ಹೆಣೆದ ತಂತ್ರವಾಗಿದ್ದು, ಅವರನ್ನು ಬಂಧಿಸಿ ಜೈಲಿಗಟ್ಟಲು ದರೋಡೆ ನಾಟಕ ಹೆಣೆದಿದ್ದ. ಅದಕ್ಕೆ ಇನ್ಸ್‌ಪೆಕ್ಟರ್ ಪ್ರವೀಣ್ ಸಹಕಾರ ನೀಡಿದ್ದ ಎನ್ನುವುದು ಈಗ ತಿಳಿದುಬಂದಿರುವ ಸತ್ಯ! ಹೀಗೆ ಸ್ಯಾಂಟ್ರೋ ರವಿಗೆ ಸಹಕರಿಸಿದ ಒಬ್ಬ ಪೊಲೀಸ್ ಅಧಿಕಾರಿ ತನ್ನ ತಪ್ಪಿಗೆ ಬೆಲೆ ತೆರುವಂತಾಗಿದೆ.
ಉಂಡ ಮನೆಗೆ ಎರಡು ಬಗೆಯುವ ಇನ್ಸ್‌ಪೆಕ್ಟರ್
ಈ ನಡುವೆ, ಪ್ರವೀಣ್ ಉಂಡ ಮನೆಗೆ ಎರಡನ್ನು ಬಗೆಯುವ ಇನ್ಸ್‌ಪೆಕ್ಟರ್ ಎಂದು ವಿವರಿಸಿದ ಅನಾಮಧೇಯ ಪತ್ರವೊಂದು ಓಡಾಡುತ್ತಿದೆ.
‘ಸ್ಯಾಂಟ್ರೋ ರವಿ ಹಾಗು ಇನ್ಸ್‌ಪೆಕ್ಟರ್ ಪ್ರವೀಣ್ ಆಟವನ್ನು ನೋಡಿದರೆ ಬಾಹುಬಲಿ -3 ಗೆ ಆಯ್ಕೆ ಮಾಡಿಕೊಳ್ತಾರೆ’ ಎಂದು ಈ ಪತ್ರದಲ್ಲಿ ವಿವರಿಸಲಾಗಿದೆ. ನವೆಂಬರ್ 24ರಂದು ನಡೆದ ಘಟನೆಯನು ಸವಿಸ್ತಾರವಾಗಿ ಬರೆದಿರುವ ಪತ್ರ ಇದಾಗಿದ್ದು, ಸುಲಿಗೆ ಪ್ರಕರಣದಲ್ಲಿ ಇನ್ಸ್‌ಪೆಕ್ಟರ್ ಪ್ರವೀಣ್ ಮತ್ತು ಸ್ಯಾಂಟ್ರೋ ರವಿ ಮಾಡಿದ್ದೇನು ಎಂಬುದರ ಬಗ್ಗೆ ಉಲ್ಲೇಖವಿದೆ.
ಇದನ್ನೂ ಓದಿ | Santro Ravi case | ಲುಕ್ ಔಟ್ ನೋಟಿಸ್ ಜಾರಿ, ರವಿ ಬ್ಯಾಂಕ್ ಖಾತೆ, ಆಸ್ತಿ ಜಪ್ತಿ ಬಗ್ಗೆ ಶೀಘ್ರ ನಿರ್ಧಾರ ಎಂದ ಎಡಿಜಿಪಿ