ಬೀದರ್: ದಲಿತ ಮಹಿಳೆಯ ಅತ್ಯಾಚಾರ ಮತ್ತು ವಂಚನೆ, ಪ್ರಭಾವಿ ರಾಜಕಾರಣಿಗಳ ಜತೆ ನಿಕಟ ಸಂಪರ್ಕ ಹಾಗೂ ಹುಡುಗಿಯರ ಪೂರೈಕೆಯಂಥ ಗಂಭೀರ ಆರೋಪ ಎದುರಿಸುತ್ತಿರುವ ಮೈಸೂರಿನ ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ (Santro Ravi case) ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಿಡಿಕಾರಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗೃಹ ಸಚಿವ ಆರಗ ಜ್ಞಾನೇಂದ್ರ ಮನೆಯಲ್ಲಿ ಹಣದ ಲೆಕ್ಕ ಹಾಕಿರುವ ಫೋಟೊ ತೆಗೆದವರು ಯಾರು? ಅವರ ಮನೆಯಲ್ಲಿ ೧೫ ಲಕ್ಷ ಎಣಿಕೆ ಮಾಡಿದ್ದರ ಬಗ್ಗೆ ಅವರೇ ತನಿಖೆ ಮಾಡಿಸಲಿ ಎಂದು ಸವಾಲು ಹಾಕಿದ್ದಾರೆ.
ಇಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಎಚ್‌ಡಿಕೆ, ಯಾವುದೋ ಎಸಿಪಿ ವರ್ಗಾವಣೆಗೆ ೭೫ ಲಕ್ಷ ರೂಪಾಯಿ ವರ್ಗಾವಣೆಯ ಡೀಲ್ ಅದಾಗಿದ್ದು, ಅದಕ್ಕೆ ಸಂಬಂಧಿಸಿದಂತೆ ಸಚಿವ ಆರಗ ಜ್ಞಾನೇಂದ್ರ ಮನೆಯಲ್ಲಿ ಸ್ಯಾಂಟ್ರೋ ರವಿ ೧೫ ಲಕ್ಷ ರೂಪಾಯಿ ತಂದಿಟ್ಟುಕೊಂಡು ಲೆಕ್ಕ ಮಾಡುತ್ತಿದ್ದಾನೆ. ಲೆಕ್ಕ ಮಾಡುತ್ತಿರುವ ಫೋಟೊವನ್ನು ತೆಗೆದವರು ಯಾರು? ಇದನ್ನು ನಾನು ಎಷ್ಟು ಎಂದು ಕೆದಕುತ್ತಾ ಕೂರಲಿ? ನಾನು ನನ್ನ ಪಂಚರತ್ನ ಯಾತ್ರೆ ಬಗ್ಗೆ ಗಮನ ಹರಿಸುತ್ತಿದ್ದೇನೆ. ರಾಜ್ಯದ ಜನತೆ ಮುಂದೆ ಉತ್ತಮ ಆಡಳಿತ ನೀಡಲು ಒಂದು ಅವಕಾಶ ಕೊಡಿ ಎಂದು ಕೇಳುತ್ತಿದ್ದೇನೆ. ಇಲ್ಲಿ ಈ ಸಮಸ್ಯೆ ಬಂದಿದ್ದರಿಂದ ಸರಿಪಡಿಸಿಕೊಳ್ಳಿ ಎಂದು ಹೇಳಿದ್ದೇನೆ. ಗೃಹ ಸಚಿವರ ಗೃಹದಲ್ಲೇ ಹೀಗೆ ಆಗಿದ್ದರಿಂದ ಅವರೇ ಈ ಬಗ್ಗೆ ತನಿಖೆ ಮಾಡಿಸಲಿ ಎಂದು ಹೇಳಿದರು.
ಇನ್ನು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರ ಜತೆ ಸ್ಯಾಂಟ್ರೋ ರವಿ ವರ್ಗಾವಣೆ ವಿಚಾರವನ್ನೇ ಮಾತನಾಡುತ್ತಾ ನಿಂತಿದ್ದಾರೆ. ಹಾಗಾದರೆ ಆ ವಿಡಿಯೊವನ್ನು ನಾನು ಮಾಡಿಸಿದೆನಾ? ನೀವುಗಳೇ ಮಾಡಿಕೊಂಡಿದ್ದೀರಿ, ನೀವೇ ಇವುಗಳ ಪ್ರೋತ್ಸಾಹಕರಾಗಿದ್ದೀರಿ, ಆ ವಿಡಿಯೊಗಳು ಎಲ್ಲ ಕಡೆ ವೈರಲ್ ಆಗಿದೆ ಎಂದು ಹೇಳಿದರು.
ನನಗೆ ಎಲ್ಲ ವಿಡಿಯೊ ಸಿಗುತ್ತದೆ ಅಂದ್ರೆ ಹೇಗೆ?
ನನ್ನ ಬಳಿ ಇನ್ನೇನಿದೆ ಎಂದು ನನ್ನ ಕೇಳಿದರೆ ನಾನು ಏನು ಹೇಳಲಿ? ನನಗೇನು ಬೇರೆ ಕೆಲಸ ಇಲ್ಲವೇ? ಎಂದು ಪ್ರಶ್ನಿಸಿದ ಎಚ್‌ಡಿಕೆ, ಬೇರೆ ವಿಡಿಯೊಗಳ ಬಗ್ಗೆ ಮತನಾಡುತ್ತಾ, ಈಗ ಹಲವು ಸಚಿವರು ತಂದಿರುವ ತಡೆಯಾಜ್ಞೆ ತೆರವುಗೊಂಡರೆ ವಿಡಿಯೊಗಳು ಬಿಡುಗಡೆ ಆಗಬಹುದು. ಬೇರೆಯವರೂ ವಿಡಿಯೊವನ್ನು ಹೊರಗೆ ಬಿಡಬಹುದು. ಯಾರು ಹತ್ತಿರ ಏನಿದೆಯೋ ಯಾರಿಗೆ ಗೊತ್ತು? ಇಂಥ ವಿಷಯ ಇಟ್ಟುಕೊಂಡು ನಾನು ರಾಜಕೀಯ ಮಾಡಲ್ಲ. ಇಂಥ ಕರ್ಮ ನನಗಿಲ್ಲ ಎಂದು ಹೇಳಿದರು.
ಇದನ್ನೂ ಓದಿ | Virat kohli | ವಿರಾಟ್ ಮತ್ತೊಮ್ಮೆ ಅದೇ ಮಾದರಿಯ ಸಿಕ್ಸರ್ ಬಾರಿಸಲಿ ನೋಡುವಾ ಎಂದು ಸವಾಲೆಸೆದ ಪಾಕ್ ಬೌಲರ್!
ಸ್ಯಾಂಟ್ರೋ ರವಿಯನ್ನು ಹಿಡಿಯುವುದು ಸರ್ಕಾರದ ಕೆಲಸವಾಗಿದೆ. ಎಲ್ಲ ನಾವೇ ಹೇಳುವುದಾದರೆ ಗೃಹ ಸಚಿವರು ಇರುವುದು ಏತಕ್ಕೆ? ದಾಖಲೆ ಇದ್ದರೆ ಕೊಡಲಿ ಎನ್ನುತ್ತಾರೆ? ಸ್ಯಾಂಟ್ರೋ ರವಿಯನ್ನು ಹುಡುಕುತ್ತಿದ್ದೇವೆ ಎನ್ನುತ್ತಾರೆ. ಪ್ರಕರಣವನ್ನು ಹಳ್ಳಹಿಡಿಸಲು ಇದಕ್ಕಿಂತ ಒಳ್ಳೆಯ ಉದಾಹರಣೆ ಇದೆಯಾ? ನನಗೆ ಎಲ್ಲ ವಿಡಿಯೊಗಳು ಸಿಗುತ್ತವೆ ಎಂದು ಅಲವತ್ತುಕೊಂಡರೆ ಹೇಗೆ? ಅವರು ಎಲ್ಲವನ್ನೂ ಹುಡುಕಬೇಕು. ಸಚಿವ ಮುನಿರತ್ನ ಸುಮ್ಮನೆ ಯಾಕೆ ಮಾತನಾಡುತ್ತಾರೆ? ಅವರೇನು ಸ್ಟೇ ತೆಗೆದುಕೊಂಡಿಲ್ಲ. ಅಂದರೆ ಎಸ್‌ಬಿಎಂ ಟೀಮ್‌ನಲ್ಲಿ ಭಿನ್ನಮತ ಇದೆ ಎಂದು ಅರ್ಥವಲ್ಲವೇ? ಅಲ್ಲಿ ಒಬ್ಬರ ತಲೆ ಉರುಳಿಸಲು ಇನ್ನೊಬ್ಬರು ಪ್ರಯತ್ನಪಡುತ್ತಿದ್ದಾರೆ. ಅದಕ್ಕೆ ವಿಡಿಯೊಗಳನ್ನು ಬಿಡಿ ಎಂದು ನನ್ನನ್ನು ಪ್ರಚೋದನೆ ಮಾಡುತ್ತಿದ್ದಾರೆ. ನಾನು ಹೇಳಿದ್ದು ತಡೆಯಾಜ್ಞೆ ತೆಗೆದುಕೊಂಡವರ ಬಗ್ಗೆ ಮಾತ್ರ. ಮುನಿರತ್ನ ಬಗ್ಗೆ ಏನೂ ಹೇಳಿಲ್ಲ, ಆದರೂ ಅವರು ಬುಟ್ಟಿಗಳ ಬಗ್ಗೆ, ಹಾವುಗಳ ಬಗ್ಗೆ ಮಾತನಾಡುತ್ತಾರೆ. ಇದೇ ನನಗೆ ಆಶ್ಚರ್ಯ ತಂದಿದೆ ಎಂದು ಹೇಳಿದರು.
ವರ್ಗಾವಣೆ ಮಾಡಿದ್ದು ಏಕೆ?
ದಲ್ಲಾಳಿಗಳೇ ಸರ್ಕಾರದ ಆಡಳಿತ ನಡೆಸುವ ಸ್ಥಿತಿಯನ್ನು ಸಿಎಂ ಬಸವರಾಜ ಬೊಮ್ಮಾಯಿ ಸೃಷ್ಟಿ ಮಾಡಿಕೊಂಡಿದ್ದಾರೆ. ಕುಮಾರಕೃಪಾ ಹೊಸ ಕಟ್ಟಡದಲ್ಲಿ ಏನೆಲ್ಲ ನಡೆಯಿತು? ತಪ್ಪೇನೂ ಆಗಿಲ್ಲ ಎಂದಾದರೆ ಅಲ್ಲಿ ಉಸ್ತುವಾರಿ ಇದ್ದ ದೇವರಾಜು ಎನ್ನುವ ವ್ಯಕ್ತಿಯನ್ನು ಯಾಕೆ ಎತ್ತಂಗಡಿ ಮಾಡಲಾಯಿತು? ಸಿಎಂ ಹೆಚ್ಚುವರಿ ಕಾರ್ಯದರ್ಶಿ ಜಗದೀಶ್ ಎಂಬುವವರನ್ನು ಏಕೆ ವರ್ಗಾವಣೆ ಮಾಡಲಾಯಿತು? ಬೆಂಕಿ ಇಲ್ಲದೆ ಹೊಗೆ ಬರುತ್ತದೆಯೇ? ಎಂದು ಪ್ರಶ್ನೆ ಮಾಡಿದರು.
ಸಿಎಂ ಬೊಮ್ಮಾಯಿ ಬಲಹೀನರಾ?
ಸಿಎಂ ಬೊಮ್ಮಾಯಿ ಅವರೇ, ನಿಮ್ಮ ತಂದೆಯವರು ಯಾವ ರೀತಿ ನಡೆದುಕೊಂಡಿದ್ದರು ಎಂಬುದನ್ನು ನೆನಪು ಮಾಡಿಕೊಳ್ಳಿ, ನೀವೂ ಅದೇ ರೀತಿ ನಡೆದುಕೊಳ್ಳಿ. ಅವರು ನಿಮಗೆ ಹೇಳಿಕೊಟ್ಟಿದ್ದು ಇದೇನಾ? ಅವರು ಹಾಕಿಕೊಟ್ಟ ಮೇಲ್ಪಂಕ್ತಿ ಇದೇನಾ? ಇಂಥ ಚಟುವಟಿಕೆ ನಡೆಯುತ್ತಿದೆ ಎಂದು ಗೊತ್ತಿದ್ದರೂ ನೀವೇಕೆ ಸುಮ್ಮನೆ ಕೂತಿದ್ದೀರಿ? ಇದರ ಮೇಲೆ ಕ್ರಮ ಕೈಗೊಳ್ಳಲು ಆಗದಷ್ಟು ನೀವು ಬಲಹೀನರಾ? ಎಂದು ಎಚ್‌ಡಿಕೆ ಪ್ರಶ್ನೆ ಮಾಡಿದರು.
ಇದನ್ನೂ ಓದಿ | Santro Ravi case | ಸುಳ್ಳು ಕೇಸು ಹಾಕಿ ಪೊಲೀಸರು, ಅಧಿಕಾರಿಗಳನ್ನು ಕಾಡುತ್ತಿರುವ ಸ್ಯಾಂಟ್ರೋ ರವಿ, ಅದಕ್ಕೇ ಅವರಿಗೆ ಭಯ!