ಅಲಕಾ ಕೆ, ಮೈಸೂರು
ವ್ಯಕ್ತಿಯೊಬ್ಬರು ನಿರ್ಗಮಿಸಿದ ನಂತರ ಅವರ ಕಾಲವನ್ನು ಸೂಚಿಸುವ ಕ್ರಮ ಎಲ್ಲ ಕಡೆಯೂ ಇದೆ. ಕ್ರಿ.ಶ. ಇಷ್ಟನೆಯ ವರ್ಷದಿಂದ- ಇಂತಿಷ್ಟನೆಯ ವರ್ಷದವರೆಗೆ ಆ ವ್ಯಕ್ತಿ ಬದುಕಿದ್ದರು ಎಂಬುದಾಗಿ ಸೂಚಿಸುವ ಪದ್ಧತಿಯಿದು. ಆದರೆ ಕೆಲವು ಬದುಕುಗಳು ಆ ವ್ಯಕ್ತಿ ನಿರ್ಗಮಿಸಿದ ಕೂಡಲೇ ಅವರೊಂದಿಗೆ ಹೋಗಿ ಬಿಡುವುದಿಲ್ಲ. ಅವರ ಕೆಲಸದ ಮೂಲಕ, ನಿರ್ಮಿಸಿದ ದಾರಿಗಳ ಮೂಲಕ, ಹಾಕಿದ ಮೇಲ್ಪಂಕ್ತಿಗಳ ಮೂಲಕ, ಅನುಸರಣೀಯ ಬದುಕಿನ ಮೂಲಕ ಮತ್ತೆ ಮತ್ತೆ ನೆನಪಾಗುತ್ತಲೇ ಇರುತ್ತವೆ. ಮಾತ್ರವಲ್ಲ, ಆರೋಗ್ಯಪೂರ್ಣ ಸಮಾಜಕ್ಕೆ ಇಂಥ ಬದುಕುಗಳು ಇನ್ನಷ್ಟು ಬೇಕು ಎಂಬ ಪ್ರಜ್ಞೆಯನ್ನು ಪ್ರಚೋದಿಸಿ, ಜಾಗೃತಿಯನ್ನು ಮೂಡಿಸುತ್ತಲೇ ಇರುತ್ತವೆ. ಇಂದು ಬದುಕು ಮುಗಿಸಿದ ಕನ್ನಡದ ಮೇರು ಲೇಖಕಿ ಸಾರಾ ಅಬೂಬಕ್ಕರ್(Sara Abubakar), ಇನ್ನೀಗ ಅಮೂರ್ತವಾದರೂ ಈ ಎಲ್ಲಾ ಭಾವಗಳಿಗೆ ಜೀವ ತುಂಬಿದವರು.
ಅವರು ಜನಿಸಿದ್ದ ಸಮುದಾಯದಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣವೇ ನಿಷಿದ್ಧ ಎಂಬ ಕಾಲದಲ್ಲಿ ಸಾರಾ ಸುಶಿಕ್ಷಿತೆಯಾದವರು. ಹೆಣ್ಣುಮಕ್ಕಳು ಹೊರಜಗತ್ತಿಗೆ ಬರಕೂಡದು ಎಂಬ ನಿಯಮಕ್ಕೆ ಪ್ರತಿಯಾಗಿ, ಮುಸ್ಲಿಂ ಸ್ತ್ರೀಯರ ಒಳಜಗತ್ತನ್ನು ಹೊರಗೆ ಪರಿಚಯಿಸಿದವರು. ಬದಲಾವಣೆಗಳು ನಮ್ಮಲ್ಲೇ ಮೊದಲಾಗಬೇಕು ಎಂಬ ಮಾತಿನಂತೆ, ತಮ್ಮದೇ ಕುಟುಂಬದ ಮಕ್ಕಳನ್ನು ಸುಧಾರಣೆಗೆ ಒಡ್ಡಿದವರು. ಶಿಕ್ಷಣದ ಮಹತ್ವವನ್ನು ಸಾರುವುದಕ್ಕಾಗಿ ಪ್ರವಾಹದ ವಿರುದ್ಧ ಈಜಿದವರು. ಶೋಷಣೆಯ ವಿರುದ್ಧದ ಮಾತು ಬರೀ ಘೋಷಣೆಯಾಗಬಾರದೆಂಬ ನೈಜ ಕಾಳಜಿಯಿಂದ, ಲೇಖಕಿಯಾಗಿ, ಪ್ರಕಾಶಕಿಯಾಗಿ, ಸಂಘಟಕಿಯಾಗಿ ಶ್ರಮಿಸಿದವರು. ಬದುಕಿನ ನಿತ್ಯದ ಸಮಸ್ಯೆಗಳು ಅರ್ಥವಾಗುವಂಥ ಸತ್ಯದ ಆವರಣಗಳನ್ನು ತಮ್ಮ ಕೃತಿಗಳಲ್ಲಿ ಸೃಷ್ಟಿಸಿದ ಸೃಜನಶೀಲರು ಇಂದು ಹೋಗಿಯೂ ಹೋಗದಂತೆ ನಮ್ಮೊಡನೆ ಉಳಿದಿದ್ದಾರೆ.
ಅಂದು ಖ್ಯಾತ ವಕೀಲರಾಗಿದ್ದ ಪಿ. ಅಹಮದ್ ಮತ್ತು ಜೈನಾಬಿಯವರ ದಾಂಪತ್ಯದಲ್ಲಿ ನಾಲ್ಕನೆಯ ಮಗುವಾಗಿ 30-6-1936ರಂದು ಕಾಸರಗೋಡಿನಲ್ಲಿ ಜನಿಸಿದವರು ಸಾರಾ. ಮೊದಲ ಮೂರೂ ಗಂಡಾದ್ದರಿಂದ, ನಾಲ್ಕನೆಯದು ಹೆಣ್ಣಾದರೆ ಪ್ರವಾದಿ ಇಬ್ರಾಹಿಂ ಅವರ ಪತ್ನಿಯ ಹೆಸರಿಡುವುದಾಗಿ ಸಾರಾ ಅವರ ಅಜ್ಜ ಹರಕೆ ಹೊತ್ತಿದ್ದಂತೆ. ಹಾಗಾಗಿ ಮನೆಯಲ್ಲಿ ಎಲ್ಲರೂ ಬಯಸಿ ಹುಟ್ಟಿದ ಮಗು ಸಾರಾ ಮುದ್ದಿನಿಂದಲೇ ಬೆಳೆದಿದ್ದರು. ಆ ಕಾಲಕ್ಕೆ ಅಪೂರ್ವ ಎಂಬಂತೆ ಮುಕ್ತ, ಸುಧಾರಿತ ವಾತಾವರಣದಲ್ಲಿ ಹತ್ತನೇ ತರಗತಿಯವರೆಗೆ ಓದಿದವರು. ನಂತರ ಸರಕಾರಿ ಇಲಾಖೆಯಲ್ಲಿ ಎಂಜಿನಿಯರ್ ಆಗಿದ್ದ ಎಂ. ಅಬೂಬಕ್ಕರ್ ಅವರೊಂದಿಗೆ ವಿವಾಹವಾಯಿತು. ಆದರೆ ಗಂಡನ ಮನೆಯ ವಾತಾವರಣ ಇವರ ತವರು ಮನೆಗಿಂತ ತೀರಾ ಭಿನ್ನವಾಗಿತ್ತು. ಎಲ್ಲ ರೀತಿಯ ಕಟ್ಟುಪಾಡುಗಳೂ ಅವರಿಗಿದ್ದವು. ದಿನಪತ್ರಿಕೆ ಓದುವುದಕ್ಕೂ ಅವಕಾಶವಿರಲಿಲ್ಲ. ಇದಕ್ಕೆ ಅಂಜದ ಆಕೆ, ಮನೆಮಂದಿಯ ಮನದಲ್ಲಿ ಕ್ರಮೇಣ ಬದಲಾವಣೆ ಮೂಡಿಸಿದರು. ಶಿಕ್ಷಣ ಎಂಬುದು ಎಂತಹ ಪ್ರಬಲ ಅಸ್ತ್ರ ಎಂಬುದನ್ನು ಅರ್ಥ ಮಾಡಿಸಿದರು. ಮನೆಯ ಮಹಿಳೆಯರು ಅವರವರ ಆಸಕ್ತಿಯ ಹೊಲಿಗೆ, ಕಸೂತಿಯಂಥ ಕಲೆಗಳಲ್ಲಿ ಪರಿಣಿತರಾಗುವಷ್ಟು ತರಬೇತಿ ಕೊಡಿಸಿದರು. ಇವರೇನು ಹೇಳುತ್ತಿದ್ದಾರೆ ಮತ್ತು ಅದನ್ನು ಯಾಕಾಗಿ ಹೇಳುತ್ತಿದ್ದಾರೆ ಎಂಬುದು ಮನೆಯ ಸದಸ್ಯರಿಗೂ ಅರಿವಾಗಿತ್ತು.
ಮಂಗಳೂರಿನಿಂದ ಬೆಂಗಳೂರಿಗೆ…
ಅವರ ಪತಿಗೆ ಮಂಗಳೂರಿನಿಂದ ಬೆಂಗಳೂರಿಗೆ ವರ್ಗವಾದ ಮೇಲೆ ಸಾರಾ ಅವರ ಬದುಕು ಮತ್ತೊಮ್ಮೆ ಬದಲಾಯಿತು. ಮೊದಲಿನಂತೆ ದಿನಪತ್ರಿಕೆ ಮತ್ತು ಗ್ರಂಥಾಲಯದ ಹೊತ್ತಗೆಗಳು ಅವರ ಸಂಗಾತಿಯಾದವು. ಕೆಲವು ಕಥೆಗಳನ್ನು ಬರೆದರೂ ಅವು ಪ್ರಕಟವಾಗಲಿಲ್ಲ. ಲಂಕೇಶ್ ಪತ್ರಿಕೆಯ ಅಭಿಮಾನಿ ಓದುಗರಾಗಿದ್ದ “ನನ್ನ ಜನ ಒಂದಾಗಬೇಕು” ಎಂಬ ಲೇಖನಕ್ಕೆ ಸಾರಾ ಬರೆದಿದ್ದ ಪ್ರತಿಕ್ರಿಯೆಯನ್ನು ಲಂಕೇಶ್ ಮೊದಲಿಗೆ ಪ್ರಕಟಿಸಿದರು. ಮಾತ್ರವಲ್ಲ, ಅವರ ಬರವಣಿಗೆಯನ್ನು ಮುಂದೆಯೂ ಪ್ರೋತ್ಸಾಹಿಸಿದರು. ಲಂಕೇಶ್ ಪತ್ರಿಕೆಯಲ್ಲಿ ಸಾರಾ ಅವರ ಮೊದಲ ಕಾದಂಬರಿ ʻಚಂದ್ರಗಿರಿಯ ತೀರದಲ್ಲಿʼ ಧಾರಾವಾಹಿಯಾಗಿ ಪ್ರಕಟವಾದಾಗ, ಈವರೆಗೆ ಅರಿವಿಲ್ಲದ ಹೊಸ ಲೋಕವೊಂದು ಓದುಗರಿಗೆ ತೆರೆದುಕೊಂಡಿತ್ತು. ಸಮುದಾಯವೊಂದರ ಮಹಿಳೆಯರ ಒಳತೋಟಿಗಳು ಹೀಗೂ ಇರಬಹುದು ಎಂಬ ಬಗ್ಗೆ ಹೊರಜಗತ್ತಿಗೊಂದು ಬೆಳಕಿಂಡಿಯನ್ನು ಆಕೆ ಸೃಷ್ಟಿಸಿದ್ದರು. ಮುಸ್ಲಿಂ ಮಹಿಳೆಯರ ಬದುಕಿನ ನೋವು, ಧರ್ಮದ ಹೆಸರಿನಲ್ಲಿ ಶೋಷಣೆಗೆ ಗುರಿಯಾಗುತ್ತಿದ್ದ ರೀತಿ, ನೋವಿನಲ್ಲೂ ಬದುಕು ಕಟ್ಟುವ ಅವರ ಹೋರಾಟ- ಇವೆಲ್ಲ ಕ್ರಮೇಣ ಸಾರಾ ಅವರ ಕೃತಿಗಳಲ್ಲಿ ಅನಾವರಣಗೊಳ್ಳತೊಡಗಿದವು. ಅವರ ಬಹುಪಾಲು ಕೃತಿಗಳಲ್ಲಿ ಮುಸ್ಲಿಂ ಸಮುದಾಯದ, ಅದರಲ್ಲೂ ಬಡ ಕುಟುಂಬಗಳ ಹೆಣ್ಣುಗಳ ಆರ್ಥಿಕ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕಟ್ಟುಪಾಡುಗಳು, ಬದುಕಲಾರದ- ಆದರೆ ಸಾಯಲು ಸಿದ್ಧರಿಲ್ಲದ ಅವರ ಹೋರಾಟ ಮನಕಲಕುತ್ತದೆ.
ಅವರು ಸೃಷ್ಟಿಸಿದ ಕೆಲವು ಪಾತ್ರಗಳಂತೂ ಇಂದಿಗೂ ವಿಶಿಷ್ಟ. ʻಚಂದ್ರಗಿರಿಯ ತೀರದಲ್ಲಿʼ ಕೃತಿಯ ಮುಗ್ಧ ಹುಡುಗಿ, ಬದುಕಿನಲ್ಲಿ ಹಾದಿ ಕಾಣದೆ ದುರಂತಕ್ಕೆ ಒಳಗಾಗುವ ನಾದಿರಾ; ʻವಜ್ರಗಳುʼ ಕಾದಂಬರಿಯ ಅಸಹಾಯಕ ಮಹಿಳೆ ನಫೀಸಾ; ʻಸಹನಾʼ ಕಾದಂಬರಿಯ ದಿಟ್ಟ ಹೆಣ್ಣು ನಸೀಮಾ; ಕ್ಷೇತ್ರ-ಬೀಜ ನ್ಯಾಯದಿಂದ ಬೇಸತ್ತು ಧರ್ಮ ಜಿಜ್ಞಾಸೆಗೆ ತೊಡಗುವ ʻಅಂಕುರʼ ಕಥೆಯ ಶಕೀಲ- ಹೇಳುತ್ತಾ ಹೋದರೆ ಬಹಳಷ್ಟು ಪಾತ್ರಗಳಿವೆ. ಇಂಥ ಎಲ್ಲಾ ಪಾತ್ರಗಳು ಮತ್ತು ಕಥೆಗಳ ಮೂಲಕ- ಹೆಣ್ಣುಮಕ್ಕಳನ್ನು ಸಹಜೀವಿಯಾಗಿ ಕಾಣದ ಪಿತೃಪ್ರಧಾನ ವ್ಯವಸ್ಥೆಯ ಹಲವು ವಿನ್ಯಾಸಗಳನ್ನು ಸಾರಾ ಮತ್ತೆ ಮತ್ತೆ ನಿಕಷಕ್ಕೆ ಒಡ್ಡುತ್ತಾರೆ. ಪಿತೃಪ್ರಧಾನತೆಯನ್ನು ಹೇರುವಲ್ಲಿ ಯಾವ ಧರ್ಮಗಳೂ ಹಿಂದೆ ಬಿದ್ದಿಲ್ಲ ಎಂಬ ಭಾವನೆಯನ್ನು ಅವರು ʻಕದನ ವಿರಾಮʼ ಕಾದಂಬರಿಯಲ್ಲಿ ಕಾಣಬಹುದು. ಮಾತ್ರವಲ್ಲ, ತಮ್ಮ ದಿಟ್ಟ ನಿಲುವು, ಹೇಳಿಕೆಗಳಿಂದ ಸೃಷ್ಟಿಯಾದ ವಿವಾದಗಳಿಂದ ಅವರೆಂದೂ ಧೃತಿಗೆಡಲಿಲ್ಲ. ತಮ್ಮ ಮೇಲಿದ ಟೀಕೆ, ದಾಳಿಗಳಿಂದ ಅವರು ಇನ್ನಷ್ಟು ಕ್ರಿಯಾಶೀಲರಾದರೇ ಹೊರತು ವಿಮುಖರಾಗಲಿಲ್ಲ.
ತಡವಾಗಿ ಸಾಹಿತ್ಯ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ ಸಾರಾ ಅವರ ಬರವಣಿಗೆ ವೈವಿಧ್ಯಮಯವಾಗಿದೆ. ಐದು ಕಥಾ ಸಂಕಲನಗಳು, ನಾಟಕ, ಪ್ರವಾಸ ಕಥನ, ಪ್ರಬಂಧ ಸಂಕಲನಗಳು, ಹತ್ತು ಕಾದಂಬರಿಗಳು, ಎಂಟು ಅನುವಾದಗಳು (ಮಲಯಾಳಂನಿಂದ ಕನ್ನಡಕ್ಕೆ) ಅವರಿಂದ ರಚನೆಯಾಗಿವೆ. ʻಮುಸ್ಲಿಂ ಹುಡುಗಿ ಶಾಲೆ ಕಲಿತಿದ್ದುʼ ಅವರ ಆತ್ಮಕಥೆ. ಅವರ ಚಂದ್ರಗಿರಿಯ ತೀರದಲ್ಲಿ ಕೃತಿಯು ಮಲಯಾಳಿಂ, ತೆಲುಗು, ಒರಿಯಾ, ಹಿಂದಿ, ಇಂಗ್ಲಿಷ್ ಸೇರಿದಂತೆ ಏಳು ಭಾಷೆಗಳಿಗೆ ಅನುವಾದಗೊಂಡಿದೆ. ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಗೌರವ, ಅತ್ತಿಮಬ್ಬೆ ಪುರಸ್ಕಾರ, ಕೇಂದ್ರ ಸರಕಾರದ ʻಭಾಷಾಭಾರತಿ ಸಮ್ಮಾನʼ, ಮಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಸೇರಿದಂತೆ ಹಲವಾರು ಸಮ್ಮಾನಗಳಿಗೆ ಅವರು ಭಾಜನರಾಗಿದ್ದಾರೆ.
ಸವೆದ ಹಾದಿಯಲ್ಲಿ ನಡೆಯುವುದು ಕಷ್ಟವಲ್ಲ. ಆದರೆ ದುರ್ಗಮ ಪ್ರದೇಶದಲ್ಲಿ ಹಾದಿ ನಿರ್ಮಿಸುವುದು ಸುಲಭವಲ್ಲ. ಹೀಗೆ ಧರೆ ಕಡಿದು ದಾರಿ ಮಾಡುವ ಸಾರಾ ಅವರಂಥ ಛಾತಿವಂತರ ಸಂತತಿ ಸಾವಿರವಾಗಲಿ.
ಇದನ್ನೂ ಓದಿ | ಮುಸ್ಲಿಂ ಹೆಣ್ಣು ಮಕ್ಕಳ ದನಿ, ಖ್ಯಾತ ಲೇಖಕಿ ಸಾರಾ ಅಬೂಬಕ್ಕರ್ ಇನ್ನಿಲ್ಲ