ಬೆಂಗಳೂರು: ಸಾರಿಗೆ ನೌಕರರಿಗೆ ಶೇ.20 ವೇತನ ಹೆಚ್ಚಳಕ್ಕೆ ಆಗ್ರಹಿಸಿ ಶಾಂತಿನಗರದ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿ ಎದುರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ (KSRTC Employees Strike) ಕೈಗೊಂಡಿದ್ದ ಸಾರಿಗೆ ನಿಗಮಗಳ ಸಮಾನ ಮನಸ್ಕರ ವೇದಿಕೆ ಅಧ್ಯಕ್ಷ ಚಂದ್ರಶೇಖರ್ ಅವರನ್ನು ಪೊಲೀಸರು ಮಂಗಳವಾರ ರಾತ್ರಿ ಬಂಧಿಸಿದ್ದಾರೆ. ಅಧಿಕಾರಿಗಳು ಮನವೊಲಿಕೆ ಮಾಡಲು ಯತ್ನಿಸಿದರೂ ಪ್ರಯೋಜನವಾಗದ ಕಾರಣ ಪೋಲೀಸರು ಚಂದ್ರಶೇಖರ್ ಅವರನ್ನು ಬಂಧಿಸಿ ಕರೆದೊಯ್ದಿದ್ದಾರೆ.
ಮಾ.18ರಂದು ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಜತೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ನಡೆಸಿದ ಸಂಧಾನ ಸಭೆ ಸಫಲವಾದ ಕಾರಣ ಮಾ.21ರಿಂದ ಕರೆದಿದ್ದ ಮುಷ್ಕರವನ್ನು ಕೆಎಸ್‌ಆರ್‌ಟಿಸಿ ನೌಕರರ ಸಂಘಟನೆ ಅಧ್ಯಕ್ಷ ಅನಂತ ಸುಬ್ಬರಾವ್ ಬಣ ವಾಪಸ್ ಪಡೆದಿತ್ತು,. ಅಂದು ಶೇ.15 ವೇತನ ಹೆಚ್ಚಳ ಭರವಸೆ ಹಿನ್ನೆಲೆಯಲ್ಲಿ ಅನಂತ ಸುಬ್ಬರಾವ್ ಬಣ ಮುಷ್ಕರ ವಾಪಸ್ ಪಡೆದಿದ್ದಕ್ಕೆ ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆ ಅಧ್ಯಕ್ಷ ಆರ್. ಚಂದ್ರಶೇಖರ್ ಆಕ್ರೋಶ ಹೊರಹಾಕಿ, ಮಾ.24ರಿಂದ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು.
ಇದನ್ನೂ ಓದಿ | ವಿಸ್ತಾರ TOP 10 NEWS: ಸಿದ್ದರಾಮಯ್ಯ ಕ್ಷೇತ್ರ ಗೊಂದಲದಿಂದ, ಕೇಂದ್ರ ಸರ್ಕಾರಕ್ಕೆ 155 ಲಕ್ಷ ಕೋಟಿ ರೂ. ಸಾಲದವರೆಗಿನ ಪ್ರಮುಖ ಸುದ್ದಿಗಳಿವು
ಏಕಾಂಗಿಯಾಗಿ ಮಂಗಳವಾರ ಮಧ್ಯಾಹ್ನದಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ಆರ್. ಚಂದ್ರಶೇಖರ್, ನೌಕರರ ಬೇಡಿಕೆಗಳು ಈಡೇರುವವರೆಗೆ ಈ ಜಾಗ ಬಿಟ್ಟು ಕದಲಲ್ಲ. ಒಂದು ವೇಳೆ ನಾನು ಮೃತಪಟ್ಟರೆ ಬಿಜೆಪಿ ಸರ್ಕಾರವೇ ನೇರ ಹೊಣೆ ಎಂದು ಶೇ.20 ವೇತನ ಹೆಚ್ಚಳಕ್ಕೆ ಪಟ್ಟುಹಿಡಿದಿದ್ದರು. ಹೀಗಾಗಿ ಪೊಲೀಸರು ಆರ್. ಚಂದ್ರಶೇಖರ್ ಅವರನ್ನು ಬಂಧಿಸಿದ್ದಾರೆ.