Site icon Vistara News

ನನಗೆ ಎಲ್ಲ ಜಾತಿ, ಧರ್ಮ ಒಂದೇ, ವಿವಾದದ ಬೆನ್ನಲ್ಲೇ ಮೆತ್ತಗಾದ ಸತೀಶ್‌ ಜಾರಕಿಹೊಳಿ

ಸತೀಶ್‌ ಜಾರಕಿಹೊಳಿ ಕನ್ನಡ ಬಾವುಟ ಗಲಾಟೆ

ಚಿಕ್ಕೋಡಿ: ಹಿಂದು ಧರ್ಮ ಹಾಗೂ ಹಿಂದು ಪದದ ಅರ್ಥದ ಕುರಿತು ನಿಪ್ಪಾಣಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌ ನೀಡಿದ ಹೇಳಿಕೆಗೆ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಸತೀಶ್‌ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ. “ಹಿಂದು ಎಂಬ ಪದದ ಬಗ್ಗೆ ಚರ್ಚೆ ಆಗಬೇಕು ಎಂಬುದಾಗಿ ಅಷ್ಟೇ ಹೇಳಿದ್ದೇನೆ. ಹಿಂದು ಎಂಬ ಪದ ಪರ್ಷಿಯನ್ ಭಾಷೆಯಿಂದ ಬಂದಿದೆ ಎಂದು ಹೇಳಿದ್ದು ‌ನಿಜ. ಆದರೆ ಅದು ಚರ್ಚೆ ಆಗಬೇಕು ಅಂತ ಹೇಳಿದೆ” ಎಂದು ಸ್ಪಷ್ಟನೆ ನೀಡಿದ್ದಾರೆ.

“ಯಾವುದೇ ಧರ್ಮ ಇರಲಿ. ಇಸ್ಲಾಂ, ಜೈನ್ ಇರಲಿ. ಅವುಗಳನ್ನು ಮೀರಿ ಬೆಳೆಯುವ ಕೆಲಸ ಮಾಡಬೇಕು ಎಂಬುದು ನಮ್ಮ ನಿಲುವಾಗಿದೆ. ಆರ್ಯ ಸಮಾಜದ ದಯಾನಂದ ಸರಸ್ವತಿಯವರು ಬರೆದ ಪುಸ್ತಕದಲ್ಲಿ ಹಿಂದು ಉಲ್ಲೇಖ ಇದೆ. ಸತ್ಯಾರ್ಥ ಪ್ರಕಾಶ ಪುಸ್ತಕದಲ್ಲಿ ಉಲ್ಲೇಖವಿದೆ. ಅಷ್ಟೇ ಏಕೆ, ಡಾ.ಜಿ.ಎಸ್. ಪಾಟೀಲ್ ಅವರು ಬರೆದ ಬಸವ ಭಾರತ ಪುಸ್ತಕದಲ್ಲಿ, ಬಾಲಗಂಗಾಧರ ತಿಲಕರ ಕೇಸರಿ ಪತ್ರಿಕೆಯಲ್ಲೂ ಪ್ರಸ್ತಾಪಿಸಲಾಗಿದೆ” ಎಂದು ತೇಪೆ ಹಚ್ಚಿದರು.

ಮಾಧ್ಯಮಗಳ ಕುರಿತು ಮಾತನಾಡಿದ ಅವರು, “ಮಾಧ್ಯಮಗಳು ವೈಭವೀಕರಿಸಿ ವರದಿ ಮಾಡುತ್ತವೆ. ಯಾವ ರೀತಿ ನೀವು ಪ್ರಸೆಂಟೇಷನ್ ಕೊಟ್ರಿ ಎಂಬುದು ಗೊತ್ತಿದೆ. ದಯವಿಟ್ಟು ವಿನಂತಿ ನೈಜ ಸುದ್ದಿ ತೋರಿಸಿ. ಹಿಂದು ಧರ್ಮದ ವಿಷಯ ಬಂದಾಗ ಇಷ್ಟು ವೈಭವೀಕರಣ ಸರಿಯಲ್ಲ. ಹಿಂದು ಸಂಘಟನೆಗಳ ಕಾರ್ಯಕರ್ತರ ಸಾವುಗಳಾದರೆ ಅದಕ್ಕೆ ವಿಶೇಷ ಸ್ಥಾನಮಾನ ನೀಡಲಾಗುತ್ತದೆ. ಆದರೆ, ದಲಿತರ ಕೊಲೆಯಾದರೆ ಅದಕ್ಕೆ ಯಾವುದೇ ಸ್ಥಾನಮಾನ ಇಲ್ಲ” ಎಂದು ದೂರಿದರು.

“ಹಿಂದು ಧರ್ಮದ ಬಗ್ಗೆ ಅಟಲ್ ಬಿಹಾರಿ ವಾಜಪೇಯಿ ಅವರ ಭಾಷಣವನ್ನು ಕೇಳಬೇಕು. ಹಿಂದು ಧರ್ಮ ಎಂದರೆ ಅದು ವೇ ಆಫ್ ಲೈಫ್ ಎಂದು ವಾಜಪೇಯಿ ಹೇಳಿದ್ದಾರೆ. ಅದೇ ರೀತಿ ಸುಪ್ರಿಂ ಕೋರ್ಟ್ ತನ್ನ ತೀರ್ಪಿನಲ್ಲೂ ಹೇಳಿದೆ. ನಾನೇನೂ ಯಾರಿಗೂ ಅವಮಾನ ಮಾಡಬೇಕು ಅಂತ ಹೇಳಿಲ್ಲ. ನನಗೆ ಎಲ್ಲ ಜಾತಿ, ಧರ್ಮಗಳು ಒಂದೇ. ಇದನ್ನೇ, ದೊಡ್ಡ ಅಪರಾಧ ಮಾಡಿದ ಹಾಗೆ ಬಿಂಬಿಸಲು ಹೋಗಬೇಡಿ” ಎಂದು ಹೇಳಿದರು.

ಇದಕ್ಕೂ ಮೊದಲು ಹೇಳಿದ್ದೇನು?

“ಹಿಂದು ಶಬ್ದವನ್ನು ಇಷ್ಟು ಮೇಲೆ ಏಕೆ ಮೆರೆಸುತ್ತೀರಿ? ಅದರ ಅರ್ಥ ತಿಳಿದರೆ ನಾಚಿಕೆ ಆಗುತ್ತದೆ. ಅದರ ಅರ್ಥ ಬಹಳ ಕೀಳು ಅರ್ಥವಿದೆ. ಈ ಮಾಹಿತಿಯೂ ವೆಬ್‌ಸೈಟ್‌ನಲ್ಲಿದೆ, ಬೇಕಿದ್ದರೆ ನೋಡಬಹುದು. ಎಲ್ಲಿಯದೋ ಶಬ್ದ ತಂದು ಹೇರುತ್ತಿದ್ದೀರ. ಇದರ ಬಗ್ಗೆ ಚರ್ಚೆ ಆಗಬೇಕು. ಇತಿಹಾಸ ತಿಳಿದವರು ಮಾತ್ರ ಇತಿಹಾಸವನ್ನು ರಚಿಸಬಹುದು. ಇತಿಹಾಸವನ್ನು ಮೊದಲು ತಿಳಿಯಿರಿ” ಎಂದಿದ್ದರು. ಇದಕ್ಕೆ ಹಿಂದು ಸಂಘಟನೆಗಳ ಮುಖಂಡರು ಸೇರಿ ಹಲವರು ವಿರೋಧಿಸಿದ್ದರು.

ಇದನ್ನೂ ಓದಿ | ಹಿಂದು ಪದದ ಅರ್ಥ ವಿವಾದ: ಖಂಡಿಸಿದ ಸುರ್ಜೆವಾಲ, ಜಾರಕಿಹೊಳಿ U-Turn

Exit mobile version