Site icon Vistara News

Satish Jarkiholi: ಜನತಾ ದರ್ಶನಕ್ಕೆ ಅಧಿಕಾರಿಗಳು ಗೈರಾಗುವುದು ತಪ್ಪು; ಎಚ್‌ಡಿಕೆ ಪರ ಸಚಿವ ಸತೀಶ್ ಜಾರಕಿಹೊಳಿ ಬ್ಯಾಟಿಂಗ್!

ಬೆಂಗಳೂರು: ಮಂಡ್ಯದಲ್ಲಿ ಜನತಾ ದರ್ಶನಕ್ಕೆ ಅಧಿಕಾರಿಗಳು ಹೋಗದಂತೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ (HD Kumaraswamy) ಅವರು ಶುಕ್ರವಾರ ಬೆಳಗ್ಗೆ ಆರೋಪಿದ್ದರು. ಈ ವಿಚಾರದಲ್ಲಿ ಇದೀಗ ಎಚ್‌ಡಿಕೆ ಪರ ಬ್ಯಾಟ್‌ ಬೀಸಿರುವ ಸಚಿವ ಸತೀಶ್ ಜಾರಕಿಹೊಳಿ (satish jarkiholi) ಅವರು, ಕೇಂದ್ರ ಸಚಿವ ಹಾಗೂ ಸಂಸದರು ಸಭೆ ಕರೆದರೆ ಅಧಿಕಾರಿಗಳು ಹೋಗಬೇಕಾಗುತ್ತದೆ. ಅಧಿಕಾರಿಗಳು ಹೋಗದಿರುವುದು ತಪ್ಪಾಗುತ್ತದೆ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬೆಳಗಾವಿ ಎಂಪಿ ಜಗದೀಶ್ ಶೆಟ್ಟರ್ ಸಭೆ ಕರೆದಾಗ ಡಿಸಿ, ಎಸ್‌ಪಿ ಅಧಿಕಾರಿಗಳು ಹೋಗಿದ್ದರು. ಮಂಡ್ಯದಲ್ಲಿ ಯಾಕೆ ಅಧಿಕಾರಿಗಳು ಹೋಗಿಲ್ಲ ಅಂತ ಗೊತ್ತಿಲ್ಲ. ಯಾರು ಆದೇಶ ಮಾಡಿದ್ದಾರೋ ಗೊತ್ತಿಲ್ಲ. ಸಂಸದರು ಕರೆದ ಸಭೆಗೆ ಅಧಿಕಾರಿಗಳು ಗೈರಾಗುವುದು ತಪ್ಪು ಎಂದು ಅಭಿಪ್ರಾಯ ತಿಳಿಸಿದ್ದಾರೆ.

ಇದನ್ನೂ ಓದಿ | Channaptna By Election: ಚನ್ನಪಟ್ಟಣಕ್ಕೆ ನಾನೇ ಮೈತ್ರಿ ಅಭ್ಯರ್ಥಿ, ಎಚ್‌ಡಿಕೆ ಇದನ್ನು ಘೋಷಿಸಲಿ: ಸಿಪಿ ಯೋಗೇಶ್ವರ್‌

ಎಚ್‌ಡಿಕೆ ಏನು ಹೇಳಿದ್ದರು?

ಮಂಡ್ಯ: ಜನತಾ ದರ್ಶನಕ್ಕೆ ಅಧಿಕಾರಿಗಳು ಹೋಗದಂತೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ನೆನ್ನೆ ಕ್ಯಾಬಿನೆಟ್‌ ಸಭೆಯಲ್ಲಿ ಒಂದು ಸುತ್ತೋಲೆ ಹೊರಡಿದ್ದಾರೆ. ಮುಖ್ಯಮಂತ್ರಿ, ಸಚಿವರಿಗೆಷ್ಟೇ ಜನತಾ ದರ್ಶನಕ್ಕೆ ಅವಕಾಶವಿದೆ ಎಂದಿದ್ದಾರೆ. ಅಧಿಕಾರಿಗಳಿಗೆ ಈಗಾಗಲೇ ಆ ಕುರಿತು ಸೂಚನೆ‌ ಕೊಟ್ಟಿದ್ದಾರೆ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದ್ದರು.

ಈ ಸರ್ಕಾರದವರು ಚುನಾವಣೆಗೆ ಮುಂಚೆ ರಾಮನಗರದಲ್ಲಿ ಹೇಗೆ ನಡೆದುಕೊಂಡರು? ಡಿ.ಕೆ.ಸುರೇಶ್ ಈ ಹಿಂದೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದರು. ಜನಸ್ಪಂದನ ಹೆಸರಲ್ಲಿ ಅಧಿಕಾರಿಗಳನ್ನು ಹಳ್ಳಿಹಳ್ಳಿ‌ ತಿರುಗಿಸಿದರು. ಉಸ್ತುವಾರಿ ಸಚಿವರು ಮಾಡಬೇಕಾದ ಸಭೆಗಳನ್ನು ಮಾಡಿದರು. ಅದಕ್ಕೆ ಅನುಮತಿ ಕೊಟ್ಟವರು ಯಾರು, ಯಾವ ರೂಲ್ಸ್ ಇತ್ತು ಎಂದು ಪ್ರಶ್ನಿಸಿದ್ದರು.

ಇವತ್ತು ಕೇಂದ್ರದ ಒಬ್ಬ ಮಂತ್ರಿ, ಜನರ ಅಹವಾಲು ಸ್ವೀಕರಿಸಲು ಬಂದಿದ್ದೇನೆ. ಹೊಸ ನಿಯಾಮವಳಿ ಮೂಲಕ ತಡೆಯಲು ಮುಂದಾಗಿದ್ದಾರೆ. ಇದರಿಂದ ಅವರಿಗೆ ಏನು ದೊರಕಲ್ಲ ಎಂದು ಕಿಡಿಕಾರಿದ್ದರು.

ಸಿಎಂ ಕುರ್ಚಿ ಮೇಲೆ ಟವಲ್‌ ಹಾಕಿದವರಿಂದಲೇ ಮುಡಾ ಹಗರಣ ಬಯಲು: ಎಚ್‌ಡಿಕೆ

ಮೈಸೂರು: ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟವರಿಂದಲೇ ಮುಡಾ ಹಗರಣ (MUDA Scam) ಬಯಲಿಗೆ ಬಂದಿದೆ. ಇಲ್ಲವಾದರೆ ಇಷ್ಟು ದಿನ ಹೊರಗೆ ಬಾರದ ಹಗರಣ ಈಗ ಬಂದಿದ್ದು ಯಾಕೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಮಂಡ್ಯದಲ್ಲಿ (Mandya News) ಇಂದು ಜನತಾದರ್ಶನ (Janata Darshana) ನಡೆಸಿದ ಎಚ್‌ಡಿಕೆ, ಅದಕ್ಕೂ ಮುನ್ನ ದೇವಾಲಯ ಭೇಟಿ ನೀಡುವ ಸಂದರ್ಭದಲ್ಲಿ ಮಾಧ್ಯಮಗಳ ಮುಂದೆ ಮಾತನಾಡಿದರು. ʼನನ್ನ ಜನತಾ ದರ್ಶನ ಕಾರ್ಯಕ್ರಮ ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲʼ ಎಂದು ಗುಡುಗಿದರು.

ಮುಡಾ ಹಗರಣ ಬಯಲು ಹಿಂದೆ, ಸಿಎಂ ಕುರ್ಚಿ ಮೇಲೆ ಟವಲ್ ಹಾಕಿರುವವರ ಪಾತ್ರ ಇದೆ. ಬಿಜೆಪಿಯವರು ಹೋರಾಟ ಮಾಡುತ್ತಿದ್ದಾರೆ ಅಷ್ಟೇ. ಆದರೆ ಹಗರಣ ಆಚೆ ಬರಲು ಕಾಂಗ್ರೆಸ್‌ನವರೇ ಒಳಗಿನಿಂದ ಕುಮ್ಮಕ್ಕು ಕೊಡುತ್ತಿದ್ದಾರೆ. ಈಗ ಸಿಡಿ ಫ್ಯಾಕ್ಟರಿ ಕ್ಲೋಸ್ ಆಗಿದೆ, ಮುಡಾ ವಿಚಾರ ಶುರುವಾಗಿದೆ. ಈ ಬಗ್ಗೆ ನನಗೆ ಮಾಹಿತಿ ಇದೆ. ಸಿಎಂ ಸಿದ್ದರಾಮಯ್ಯ ಪತ್ನಿಗೆ ಆ ಜಾಗ ಹೇಗೆ ಬಂತು ಅಂತಲೂ ನನಗೆ ಗೊತ್ತಿದೆ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.

ಸಿಎಂ ತಾವು ಕಳೆದುಕೊಂಡ ಸೈಟಿಗೆ 62 ಕೋಟಿ ರೂ. ಪರಿಹಾರ ಕೇಳುತ್ತಿದ್ದಾರೆ. ಇವರಿಗೆ ಬಡವರ ಕಷ್ಟ ಗೊತ್ತಿದೆಯಾ? ಹಾಗೆ ಕೇಳುವ ಸಿಎಂ ಭೂಮಿ ಕಳೆದುಕೊಂಡು ಬೀದಿಯಲ್ಲಿ ನಿಂತಿರುವ ಇತರ ರೈತರಿಗೂ ಹಾಗೇ ಪರಿಹಾರ ಕೊಡಿಸಲಿ. ಕೊಡಿಸ್ತಾರಾ? ಎಂದು ಅವರು ಸವಾಲು ಹಾಕಿದರು.

ನನ್ನ ಜನತಾ ದರ್ಶನ ವಿಚಾರದಲ್ಲಿ ರಾಜ್ಯ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಜನತಾ ದರ್ಶನದ ಬಗ್ಗೆಯೇ ಸಚಿವ ಸಂಪುಟದ ಸಭೆ ಕರೆದು ಚರ್ಚೆ ಮಾಡಿದ್ದಾರೆ. ನೀವು ಅಧಿಕಾರಿಗಳನ್ನು ಇದರಿಂದ ದೂರು ಇಡಬಹುದು. ಆದರೆ ಜನರನ್ನು ನನ್ನಿಂದ ದೂರ ಮಾಡಲು ಸಾಧ್ಯವಿಲ್ಲ. ಈ ಹಿಂದೆ ಬೆಂಗಳೂರು ಗ್ರಾಮಂತರದ ಸಂಸದರು ಈ ರೀತಿ ಸಭೆ ಮಾಡಿದ್ದಾಗ ಏನು ಮಾಡ್ತಿದ್ರಿ? ಚುನಾವಣೆಗೆ ಬಂದು ಜನ ಸ್ಪಂದನ ಕಾರ್ಯಕ್ರಮ ಮಾಡಿದಾಗ ಎಲ್ಲಿ ಹೋಗಿದ್ರು? ಈಗ ಜನತಾ ದರ್ಶನ ತಪ್ಪಿಸಲು ಸರ್ಕಾರ ಮುಂದಾಗಿದೆ. ಯಾವುದೇ ಕಾರಣಕ್ಕೂ ಜನತಾ ದರ್ಶನ ನಿಲ್ಲಿಸಲು ಸಾಧ್ಯವಿಲ್ಲ ಎಂದು ಅವರು ನುಡಿದರು.

ಇದನ್ನೂ ಓದಿ: Prajwal Revanna Case: ಪ್ರಜ್ವಲ್‌ ರೇವಣ್ಣ ಜಾಮೀನು ಅರ್ಜಿ ವಿಚಾರಣೆ 2 ವಾರ ಮುಂದೂಡಿಕೆ

ಇದಕ್ಕೂ ಮುನ್ನ ಅವರು ಮಂಡ್ಯ ಕಾಳಿಕಾಂಬ ದೇವಾಲಯಕ್ಕೆ ಭೇಟಿ ನೀಡಿದರು. ಅಲ್ಲಿ ದೇವಾಲಯದ ಮುಂದೆ ಬಿಜೆಪಿ ನಾಯಕರು ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಿಲ್ವ ಮರಕ್ಕೆ ಕಟ್ಟಿದ್ದ ಗೆಲುವಿನ ಗಂಟು ಬಿಚ್ಚಿ ದೇವಿಗೆ ಪೂಜೆ ಸಲ್ಲಿಸಿದರು. ಚುನಾವಣೆ ವೇಳೆ ಕುಮಾರಸ್ವಾಮಿ ಗೆಲುವಿಗಾಗಿ ಪ್ರಾರ್ಥಿಸಿ ಕಾರ್ಯಕರ್ತರು ಈ ಹರಕೆ ಕಟ್ಟಿದ್ದರು. ಕಾಳಿಕಾಂಬ ದೇವಾಲಯದಲ್ಲಿ ಪೂಜೆ ಸಲ್ಲಿಕೆ ಬಳಿಕ ಅಂಬೇಡ್ಕರ್ ಭವನದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸಾವಿರಾರು ಮಂದಿ ಮುಂಜಾನೆಯಿಂದಲೇ ಕೇಂದ್ರ ಸಚಿವರ ಜನತಾ ದರ್ಶನಕ್ಕಾಗಿ ಆಗಮಿಸಿದ್ದಾರೆ.

Exit mobile version