ಬೆಂಗಳೂರು: ಸತೀಶ್ ಜಾರಕಿಹೊಳಿ ಭದ್ರಕೋಟೆಯಲ್ಲಿ ಒಂದೊಂದೇ ಕಲ್ಲು ಕಳಚಿಹೋಗುತ್ತಿದ್ದು, ಅವರು ವೀಕ್ ಆಗುತ್ತಿದ್ದಾರೆ. ಬೆಳಗಾವಿಯಲ್ಲಿ (Karnataka Politics) ಅವರಿಗೆ ಇದ್ದ ವರ್ಚಸ್ಸು ಕಡಿಮೆ ಆಗುತ್ತಿದೆ. ಮುಂದಿನ ದಿನಗಳಲ್ಲಿ ಮೂಲೆ ಗುಂಪು ಆಗುತ್ತಾರೆ ಎಂದು ಮಾಜಿ ಸಚಿವ ಮುನಿರತ್ನ ತಿಳಿಸಿದರು.
ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ನಡುವೆ ಭಿನ್ನಾಭಿಪ್ರಾಯ ವಿಚಾರಕ್ಕೆ ಪ್ರತಿಕ್ರಿಯಿಸಿ, ನನಗೆ ಗೊತ್ತಿರುವಂತೆ ಸತೀಶ್ ಜಾರಕಿಹೊಳಿಗೆ ಹಿನ್ನಡೆ ಆಗುವ ಸಾಧ್ಯತೆ ಇದೆ. ಅವರು ಇಷ್ಟು ದಿನ ನಮ್ಮ ಬೆಳಗಾವಿ ನಮಗೆ ಭದ್ರಕೋಟೆ ಅಂದುಕೊಂಡಿದ್ದರು. ಅದೆಲ್ಲೋ ಒಂದು ಕಡೆ ಕೈತಪ್ಪಿ, ಅವರ ಕುಟುಂಬಕ್ಕೆ ಟಿಕೆಟ್ ಸಿಗುವುದು ಅನುಮಾನ. ಇದು ನನ್ನ ಅನಿಸಿಕೆಯಾಗಿದೆ ಎಂದು ಹೇಳಿದರು.
ಮುಂಬರುವ ಲೋಕಸಭಾ ಚುನಾವಣೆಗೆ ತಮ್ಮವರಿಗೆ ಟಿಕೆಟ್ ಕೊಡಿಸಲು ಫೈಟ್ ವಿಚಾರಕ್ಕೆ ಪ್ರತಿಕ್ರಿಯಿಸಿ, ನನ್ನ ಪ್ರಕಾರ ಲಕ್ಷ್ಮಿ ಹೆಬ್ಬಾಳ್ಕರ್ ಮಗನಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ. ನಾನು ಹೇಳುತ್ತಿಲ್ಲ, ಜನರೇ ಹೇಳುತ್ತಿದ್ದಾರೆ. ಅವರೆಲ್ಲಾ 135 ಜನ ಒಂದೇ ಪಕ್ಷದಲ್ಲಿದ್ದಾರೆ, ಒಗ್ಗಟ್ಟಾಗಿದ್ದಾರೆ. ಮೈಸೂರಿಗೆ ಒಟ್ಟಿಗೆ ಶಾಸಕರು ಒಗಬೇಕು ಎಂದರೆ ಎಷ್ಟು ಒಗ್ಗಟ್ಟಿದೆ. ರಸ್ತೆಯಲ್ಲಿ ಹೋಗಬೇಕಾದ್ರೆ ಏನೂ ಆಗಲ್ಲ. ದೋಣಿಯಲ್ಲಿ ಹೋಗುತ್ತಿದ್ದಾರೆ. ದೋಣಿಯನ್ನು ಯಾರು ತೂತು ಮಾಡುತ್ತಾರೆ ಎಂಬುವುದನ್ನು ನೋಡೋಣ ಎಂದರು.
ಇದನ್ನೂ ಓದಿ | BJP Ticket Fraud : ಮತ್ತೊಂದು ಬಿಜೆಪಿ ಟಿಕೆಟ್ ಮೋಸ; 2.55 ಕೋಟಿ ರೂ. ವಂಚನೆ ಸಂಬಂಧ FIR ದಾಖಲು!
ಗ್ಯಾರಂಟಿಗಳಿಂದ ಕತ್ತಲಿನತ್ತ ರಾಜ್ಯ
ರಾಜ್ಯ ಸರ್ಕಾರದಿಂದ ಕಲ್ಲಿದ್ದಲು ಖರೀದಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಒಂದೇ ಒಂದು ಸಣ್ಣ ಅಭಿವೃದ್ಧಿ ಕಾರ್ಯವೂ ಇಲ್ಲ. ಗ್ಯಾರಂಟಿ (Congress Guarantee) ಹೆಸರಲ್ಲಿ ರಾಜ್ಯವನ್ನು ಕತ್ತಲಿನತ್ತ ತೆಗೆದುಕೊಂಡು ಹೋಗುತ್ತಿದ್ದಾರೆ. ಇದು ಎಲ್ಲಿಗೆ ಹೋಗಿ ನಿಲ್ಲಲಿದೆ ಎಂಬುವುದು ಗೊತ್ತಿಲ್ಲ. ಇವರು 2 ಸಾವಿರ ಕೊಟ್ಟು, 4 ಸಾವಿರ ವಾಪಸ್ ಕಿತ್ತುಕೊಳ್ಳುತ್ತಿದ್ದಾರೆ. ಜನ ಇದಕ್ಕೆ ವಿರೋಧಿಸುವುದನ್ನು ಕಾಯಬೇಕು. ವಿದ್ಯುತ್ ಬಿಲ್ ಸೇರಿ ಎಲ್ಲದರ ಬೆಲೆ ಹೆಚ್ಚಳವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವ ಮುನಿರತ್ನ ಕಿಡಿಕಾರಿದರು.
ರಾಜ್ಯಕ್ಕೆ ಬರಗಾಲ ಬಂದಿದೆ. ಆದರೆ, ನಿಜವಾಗಿ ಹೇಳಬೇಕೆಂದರೆ 103 ಜನರಿಗೆ ಬರಗಾಲ ಬಂದಿದೆ. ಅವರಿಗಿಂತ 33 ಜನ ಸಮೃದ್ಧಿಯಾಗಿದ್ದಾರೆ ಎನ್ನುವ ಮೂಲಕ ಸಚಿವರು ಆರಾಮವಾಗಿದ್ದಾರೆ, ಆದರೆ, ಶಾಸಕರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆಯಾಗಿಲ್ಲ ಅಸಮಾಧಾನ ಹೊರಹಾಕಿದರು.
ವಿದ್ಯುತ್ ಅಭಾವಕ್ಕೆ ಕಾರಣ ಕಾಂಗ್ರೆಸ್ ಎಂದ ಎಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿ, ನಮ್ಮ ಸರ್ಕಾರ ಇದ್ದಾಗ ಪವರ್ ಮಿನಿಸ್ಟರ್ ಸುನಿಲ್ ಕುಮಾರ್ ಇದ್ದರು. ಎಲ್ಲಾದರೂ ಒಂದು ದಿನ ವಿದ್ಯುತ್ ಖರೀದಿ ಬಗ್ಗೆ ಮಾತನಾಡಿದ್ದೇವಾ? ಈಗ ಏಕಾಏಕಿ ವಿದ್ಯುತ್ ಖರೀದಿ ಬಗ್ಗೆ ಮಾತನಾಡುತ್ತಿದ್ದಾರೆ. ಏನು ಅವಶ್ಯಕತೆ ಇತ್ತು.? ಸೋಲಾರ್ ಪ್ಲಾಂಟ್ ಹಾಕಿದ್ದಾರೆ, ಎಲ್ಲಾ ಮಾಡಿದ್ದಾರೆ. ಕುಮಾರಸ್ವಾಮಿ ಹೇಳಿರುವುದು ಸರಿ ಇದೆ ಎಂದು ಸಮರ್ಥಿಸಿಕೊಂಡರು.
ಇದನ್ನೂ ಓದಿ | CM Siddaramaiah: ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ರಾಜ್ಯ ಸರ್ಕಾರದಿಂದ ದಿಟ್ಟ ಕ್ರಮ: ಸಿದ್ದರಾಮಯ್ಯ
ತಾಜ್ ವೆಸ್ಟೆಂಡ್‌ನಲ್ಲಿ ಕುಳಿತು ಆಡಳಿತ ಮಾಡುತ್ತಿಲ್ಲ ಎಂಬ ಸಿಎಂ ಸಿದ್ದರಾಮಯ್ಯ ಟ್ವೀಟ್ ಬಗ್ಗೆ ಪ್ರತಿಕ್ರಿಯಿಸಿ, ತಾಜ್ ವೆಸ್ಟೆಂಡ್‌ನಲ್ಲಿ ಕುಳಿತಿದ್ದರೂ, ಇಲ್ಲವೋ ಸೆಕೆಂಡರಿ. ನೀವು ಈಗ ವಿಧಾನಸೌಧದಲ್ಲಿ ಕುಳಿತಿದ್ದೀರಿ, ಒಳ್ಳೆಯ ಆಡಳಿತ ಕೊಡಿ. ನೋಡೋಣ ಹೇಗೆ ಕೊಡುತ್ತೀರಿ ಎದರು. ಇದೇ ವೇಳೆ ನಮ್ಮ ಕ್ಷೇತ್ರದ ಅನುದಾನ ಇವರು ಬಳಸಿಕೊಳ್ಳುತ್ತಿದ್ದಾರೆ. ಇವರ ಬಳಿ ಹಣ ಇಲ್ಲ. ಅಂದರೆ ಹೇಗೆ ಆಡಳಿತ ಮಾಡುತ್ತಿದ್ದಾರೆ ಎಂಬುವುದು ಗೊತ್ತಾಗುತ್ತಿದೆ ಎಂದು ಟೀಕಿಸಿದರು.
135 ಶಾಸಕರನ್ನು ಇಟ್ಟುಕೊಂಡು ಈಗಲೂ ಆಪರೇಷನ್ ಹಸ್ತ ಮಾಡುತ್ತಿದ್ದಾರೆ. ಇದು ಮೂಲ ಕಾಂಗ್ರೆಸ್‌ನವರಿಗೆ ಸಂಕಷ್ಟ ತಂದಿದೆ. ಅವರಿಗೆ ಪಕ್ಷದಲ್ಲಿ ಯಾಕಾದರೂ ಇದ್ದೇವೋ ಎಂಬ ಬೇಸರ ಶುರುವಾಗಿದೆ ಎಂದು ವ್ಯಂಗ್ಯವಾಡಿದರು.
ಡಿಕೆಶಿ ಸಿಎಂ ಆಗುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನನ್ನ ಪ್ರಕಾರ ಡಿಕೆಶಿ ಸಿಎಂ ನಿಧಾನವಾಗಿ ಸಿಎಂ ಆದ್ರೂ ಪರವಾಗಿಲ್ಲ. ಆದರೆ, ಮೊದಲು ಹ್ಯಾರಿಸ್ ಮುಖ್ಯಮಂತ್ರಿ ಆಗಬೇಕು. ಅವರ ಮಗ ನಲಪಾಡ್ ಡಿಸಿಎಂ ಆಗಬೇಕು. ಕಾಂಗ್ರೆಸ್‌ನಲ್ಲಿ ಅದೇ ರೀತಿ ನಡೆದುಬಂದಿರುವುದು ಎಂದು ವ್ಯಂಗ್ಯವಾಡಿದ್ದಾರೆ.
ಸಿಎಂ ಕೊಠಡಿ ಇದ್ದ ಹಾಗೆ ಡಿಸಿಎಂ ಕೊಠಡಿ ಇರಬೇಕು.
ಸಿಎಂ ಕಚೇರಿಯಂತೆ ಡಿಸಿಎಂ ಕೊಠಡಿ ನವೀಕರಣದ ಬಗ್ಗೆ ಪ್ರತಿಕ್ರಿಯಿಸಿ, ಇದು ಮುಂದಿನ ಸಿಎಂ ಕೊಠಡಿ ಅಂತಲ್ಲ. ಸಿಎಂ ಕೊಠಡಿ ಹೇಗಿರಬೇಕು, ಅದೇ ರೀತಿ ಡಿಸಿಎಂ ಕೊಠಡಿ ಇರಬೇಕು. ಯಾಕೆಂದರೆ ಪಕ್ಕದಲ್ಲಿ ಅರ್ಧ ಸಿಂಹಾಸನ ಕೊಟ್ಟಿದಾರೆ. ಮೊದಲು ಉಪಮುಖ್ಯಮಂತ್ರಿಗಳು ಶಾಸಕರ ಪಕ್ಕದಲ್ಲಿ ಕೂರುತ್ತಿದ್ದರು, ಆದರೆ ಈಗ ಸಿಎಂ ಸಮಾನವಾಗಿ ಪಕ್ಕದಲ್ಲೇ ಕೂರುತ್ತಾರೆ. ಇದನ್ನ ಮಾಡುವುದರಲ್ಲಿ ತಪ್ಪೇನಿಲ್ಲ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ | HD Kumaraswamy : ಜನ ಕಷ್ಟದಲ್ಲಿದ್ದರೆ ಕರ್ನಾಟಕದ ನೀರೋ ಕ್ರಿಕೆಟ್ ನೋಡುತ್ತಿದ್ದ! ಸಿಎಂ – ಎಚ್‌ಡಿಕೆ ವಾರ್
ಹಿಂದಿನ ಡಿಸಿಎಂ ಹೀಗೆ ಮಾಡಿರಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ಆಗ ನಮ್ಮ ರಾಜ್ಯದಲ್ಲಿ ಬರಗಾಲ ಇತ್ತು, ಬೇರೆಯವರ ಕೈಯಲ್ಲಿ ಮಾಡಲಾಗಿರಲಿಲ್ಲ. ಈಗ ಸಮೃದ್ಧಿಯಾಗಿದೆ, ಅದಕ್ಕೆ ಮಾಡಿದ್ದಾರೆ. ದುಂದುವೆಚ್ಚದ ಪ್ರಶ್ನೆಯೇ ಬರಲ್ಲ. ಫುಲ್ ಪೇಜ್ ಜಾಹೀರಾತಿನಲ್ಲೂ ಸಮಾನವಾಗಿದ್ದಾರೆ. ಕೊಠಡಿ ಇಕ್ವಲ್ ಆಗಿರಬೇಕು. ಆಗಲೇ ಚೆನ್ನಾಗಿ ಕಾಣೋದು ಎಂದು ಛೇಡಿಸಿದರು.