ಹಾವೇರಿ: ಪುರಸಭೆ ಅಧಿಕಾರಿಗಳ ಲಂಚ ದಾಹಕ್ಕೆ (Bribery Case) ರೊಚ್ಚಿಗೆದ್ದ ಅನ್ನದಾತ, ನನ್ನ ಬಳಿ ನೀವು ಕೇಳಿದಷ್ಟು ಹಣ ಇಲ್ಲ, 25 ಸಾವಿರ ರೂಪಾಯಿ ಬದಲು ಒಂದು ಎತ್ತು ತೆಗೆದುಕೊಳ್ಳಿ ಎಂದು ಅಸಹಾಯಕತೆ ವ್ಯಕ್ತಪಡಿಸಿರುವ ಘಟನೆ ಜಿಲ್ಲೆಯ ಸವಣೂರಿನಲ್ಲಿ ನಡೆದಿದೆ.
ಮನೆ ಖಾತೆ ಬದಲಾಯಿಸಲು 25 ಸಾವಿರ ರೂ. ಕೊಡುವಂತೆ ಸವಣೂರು ಪುರಸಭೆ ಅಧಿಕಾರಿಗಳು, ಯಲ್ಲಪ್ಪ ರಾಣೋಜಿ ಎಂಬ ರೈತನಿಗೆ ಬೇಡಿಕೆ ಇಟ್ಟಿದ್ದಾರೆ. ಈ ಹಿಂದೆ ಖಾತೆ ಬದಲಾವಣೆಗಾಗಿ ಹಣ ಪಡೆದ ಅಧಿಕಾರಿಗಳು ವರ್ಗಾವಣೆಯಾಗಿದ್ದಾರೆ ಎನ್ನಲಾಗಿದ್ದು, ಹೊಸದಾಗಿ ಬಂದ ಅಧಿಕಾರಿಗಳು ಮತ್ತೆ 25 ಸಾವಿರ ರೂಪಾಯಿ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
ಮನೆ ಖಾತೆಗೆ ಲಂಚ ನೀಡಲು ಹಣವಿಲ್ಲದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ರೈತ, ಎತ್ತು ಹಾಗೂ ಬಾರುಕೋಲು ಸಮೇತ ಪುರಸಭೆ ಬಳಿಗೆ ತೆರಳಿ ಹಣಕ್ಕೆ ಬದಲು ಎತ್ತು ತೆಗೆದುಕೊಳ್ಳಿ ಎಂದು ಹೇಳಿದ್ದಾರೆ. ಈ ವೇಳೆ ರೈತನ ನಡೆಗೆ ಅಧಿಕಾರಿಗಳು ದಂಗಾಗಿದ್ದಾರೆ.
ಇದನ್ನೂ ಓದಿ | ಹಾವೇರಿ ಜಿಲ್ಲೆಯ 1.65 ಲಕ್ಷ ರೈತರಿಗೆ 438 ಕೋಟಿ ರೂ.ಗಳ ಬೆಳೆ ವಿಮೆ- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಸ್ಥಳಕ್ಕೆ ಸಾರ್ವಜನಿಕರು ಜಮಾಯಿಸಿ ಲಂಚ ಕೇಳಿದ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿ, ಅಧಿಕಾರಿಗಳಿಗೆ ಸರಿಯಾಗಿ ಬುದ್ಧಿ ಕಲಿಸಿದ್ದಾರೆ ಎಂದು ರೈತನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.