ಉಡುಪಿ: ಇಲ್ಲಿನ ಉಡುಪಿ ಬ್ರಹ್ಮಗಿರಿ ಸರ್ಕಲ್‌ನಲ್ಲಿ ಹಾಕಲಾಗಿರುವ ಸಾವರ್ಕರ್ ಚಿತ್ರ ಇರುವ ಬ್ಯಾನರನ್ನು ತೆಗೆಯಬೇಕು ಎಂಬ ಎಸ್‌ಡಿಪಿಐ ಬೇಡಿಕೆಗೆ ಬಿಜೆಪಿಗೆ ಸಡ್ಡು ಹೊಡೆದಿದೆ. ಅದನ್ನು ತೆರವುಗೊಳಿಸುವ ಬದಲು ಬುಧವಾರ ಮುಂಜಾನೆ ಬ್ಯಾನರ್‌ಗೆ ಹೊಸದಾಗಿ ಮಾಲಾರ್ಪಣೆ ಮಾಡಿದೆ. ಜತೆಗೆ ಸಾವರ್ಕರ್ ಅವರನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ಮನೆ ಮುಂದೆಯೂ ಸಾವರ್ಕರ್ ಫೋಟೊ ಹಾಕುವುದಾಗಿ ಬಿಜೆಪಿ ನಾಯಕ ಯಶಪಾಲ್ ಸುವರ್ಣ ಸವಾಲು ಹಾಕಿದ್ದಾರೆ. ಜತೆಗೆ ಸರ್ಕಲ್‌ನಲ್ಲಿ ಸಾವರ್ಕರ್ ಪುತ್ಥಳಿ ಸ್ಥಾಪಿಸುವುದಾಗಿಯೂ ಘೋಷಿಸಿದ್ದಾರೆ.
ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಹಾಕಲಾಗಿರುವ ಈ ಬ್ಯಾನರ್‌ನಲ್ಲಿ ಸಾವರ್ಕರ್ ಮತ್ತು ಸುಭಾಶ್ಚಂದ್ರ ಬೋಸ್ ಅವರ ಚಿತ್ರಗಳಿವೆ. ಜತೆಗೆ ಹಿಂದೂ ರಾಷ್ಟ್ರ ಎಂಬ ಬರಹವನ್ನು ಹಾಕಲಾಗಿದೆ. ಇದಕ್ಕೆ ಎಸ್‌ಡಿಪಿಐ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಪರಿಸರದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಬಿಗಿ ಭದ್ರತೆ ಆಯೋಜಿಸಿದ್ದರು. ಈ ನಡುವೆ, ಈ ಬ್ಯಾನರನ್ನು ಮೂರು ದಿನಗಳ ಅನುಮತಿ ಅವಧಿಯ ಬಳಿಕ ತೆರವುಗೊಳಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅದನ್ನು ತೆರವುಗೊಳಿಸಲಾಗಿಲ್ಲ. ಬದಲಾಗಿ ಬುಧವಾರ ಮುಂಜಾನೆ ಹಿಂದು ಮುಖಂಡ ಯಶಪಾಲ್ ಸುವರ್ಣ ನೇತೃತ್ವದಲ್ಲಿ ಹೊಸದಾಗಿ ಹಾರ ಹಾಕಿ ಪುಷ್ಪಾರ್ಚನೆ ಮಾಡಿ ಗೌರವಿಸಲಾಯಿತು. ಜತೆಗೆ ಸರ್ಕಲ್‌ನಲ್ಲಿ ಭಗವಾಧ್ವಜವನ್ನು ನೆಟ್ಟು ಗೌರವ ವಂದನೆ ಸಲ್ಲಿಸಲಾಯಿತು.
ಸರ್ಕಲ್‌ನಲ್ಲಿ ಪುತ್ಥಳಿ ಸ್ಥಾಪಿಸುತ್ತೇವೆ
ಸಾವರ್ಕರ್ ಚಿತ್ರ ಇರುವ ಬ್ಯಾನರ್‌ಗೆ ಹೂವಿನ ಹಾರ ಹಾಕಿ ಪುಷ್ಪಾರ್ಚನೆ ಮಾಡಿದ ಬಳಿ ಮಾತನಾಡಿದ ಬಿಜೆಪಿ ನಾಯಕ ಯಶಪಾಲ್ ಸುವರ್ಣ ಅವರು, ಎಸ್‌ಡಿಪಿಐಗೆ ಯಾರು ಸ್ವಾತಂತ್ರ್ಯ ಹೋರಾಟಗಾರರು ಎನ್ನುವುದೇ ಗೊತ್ತಿಲ್ಲ. ಕಾಂಗ್ರೆಸ್ ಡೋಂಗಿ ದೇಶಭಕ್ತರನ್ನು ಇಟ್ಟುಕೊಂಡಿದೆ ಎಂದು ಹೇಳಿದರು. ಬ್ರಹ್ಮಗಿರಿ ಸರ್ಕಲ್‌ನಲ್ಲಿ ಸಾವರ್ಕರ್ ಬ್ಯಾನರ್‌ಗೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಪ್ರತಿಯಾಗಿ ಮಾತನಾಡಿದ ಅವರು, ಸರ್ಕಲ್‌ನಲ್ಲಿ ಪುತ್ಥಳಿಯನ್ನೇ ಅನಾವರಣ ಮಾಡುತ್ತೇವೆ ಎಂದು ಸವಾಲು ಹಾಕಿದರು.
ಸಿದ್ದು ಅಂಗಳದಲ್ಲೂ ಸಾವರ್ಕರ್ ಚಿತ್ರ
ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ಮೇಲೆ ತೀವ್ರ ವಾಕ್‌ಪ್ರಹಾರ ಮಾಡಿದ ಯಶಪಾಲ್ ಸುವರ್ಣ ಅವರು, ʻʻಸಿದ್ದರಾಮಯ್ಯ ಅವರು ಅಂದು ದೇಶ ವಿಭಜನೆ ಮಾಡಿದ ಮಹಮ್ಮದ್ ಆಲಿ ಜಿನ್ನಾನ ಇನ್ನೊಂದು ರೂಪ. ಈಗ ಸಿದ್ದರಾಮಯ್ಯ ಮತ್ತೆ ದೇಶ ವಿಭಜನೆ ಮಾಡಲು ಹೊರಟಿದ್ದಾರೆ. ಸಿದ್ದರಾಮಯ್ಯ ಅವರ ಮನೆ ಅಂಗಳದಲ್ಲೂ ಸಾವರ್ಕರ್ ಭಾವಚಿತ್ರ ಹಾಕುತ್ತೇವೆ. ವೀರ ಸಾವರ್ಕರ್ ದೇಶಭಕ್ತಿ ಏನು ಎಂಬುದು ಕಾಂಗ್ರೆಸ್ ಗೆ ತೋರಿಸಿ ಕೊಡುತ್ತೇವೆʼʼ ಎಂದು ಹೇಳಿದರು.
ರಾಜಕೀಯ ಬಿಟ್ಟು ಬುದ್ಧಿವಂತರಾಗಿ
ʻʻಎಸ್‌ಡಿಪಿಐ ಮತ್ತು ಪಿಎಫ್ ಐ ನಾಯಕರು ಬ್ರಹ್ಮಗಿರಿ ಸರ್ಕಲ್‌ನಲ್ಲಿ ಹಾಕಿರುವ ಬ್ಯಾನರ್ ತೆಗೆಯಲು ಆಗ್ರಹ ಕೇಳಿಬಂದಿದೆ. ಪಾಕಿಸ್ತಾನ ಮತ್ತು ಜಿಹಾದಿ ಮನಸ್ಥಿತಿಯವರಿಂದ ವಿರೋಧ ಬಂದಿದೆ. ವೀರ ಸಾವರ್ಕರ್ ಮತ್ತು ನೇತಾಜಿ ಬೋಸ್ ಬಗ್ಗೆ ಇವರಿಗೆ ಏನು ಗೊತ್ತಿದೆʼʼ ಎಂದು ಹಿಂದೂ ಮಹಾಸಭಾ ಮುಖಂಡ ಪ್ರಮೋದ್ ಉಚ್ಚಿಲ್ ಹೇಳಿದರು.
ʻʻನಿಜವಾಗಿ ದೇಶಕ್ಕೆ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದ್ದು ಸಾವರ್ಕರ್ ಮತ್ತು ನೇತಾಜಿ. ಇಂದಿರಾ ಗಾಂಧಿಯವರು ಸಾವರ್ಕರ್ ಗೆ ಗೌರವ ಕೊಟ್ಟದ್ದು ಯಾಕೆ ಎಂಬುದನ್ನಾದರೂ ಕಾಂಗ್ರೆಸ್, ಎಸ್‌ಡಿಪಿಐನವರು ಅರ್ಥ ಮಾಡಿಕೊಳ್ಳಬೇಕು. ಕಾಂಗ್ರೆಸ್ ರಾಜಕೀಯ ಬಿಟ್ಟು ಬುದ್ಧಿವಂತರಾಗಲಿʼʼ ಎಂದು ಹೇಳಿದರು ಪ್ರಮೋದ್ ಉಚ್ಚಿಲ್.