ತುಮಕೂರು: ವೀರ ಸಾವರ್ಕರ್ (Savarkar Row) ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪನೆಗೆ ತುಮಕೂರು ವಿಶ್ವವಿದ್ಯಾಲಯ ಮುಂದಾಗಿದೆ. ಸಾವರ್ಕರ್ ಪೀಠ ಸ್ಥಾಪನೆಗೆ ಸಿಂಡಿಕೇಟ್ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ ಎನ್ನಲಾಗಿದೆ.
ರಾಜ್ಯದಲ್ಲಿ ಈಗಾಗಲೇ ವಿನಾಯಕ ದಾಮೋದರ್ ಸಾವರ್ಕರ್ ವಿವಾದ ತಾರಕಕ್ಕೇರಿದೆ. ಈ ವಿವಾದಗಳ ನಡುವೆಯೇ ಸಾವರ್ಕರ್ ಅಧ್ಯಯನ ಪೀಠ ಸ್ಥಾಪನೆಗೆ ವಿವಿ ಮುಂದಾಗಿರುವುದು ಭಾರಿ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಶುಕ್ರವಾರ (ಆ.26) ನಡೆದ ಸಿಂಡಿಕೇಟ್ ಸಭೆಯ ಟೇಬಲ್ ಅಜೆಂಡಾದಲ್ಲಿ ಸಿಂಡಿಕೇಟ್ ಸದಸ್ಯ ಟಿ.ಡಿ.ವಿನಯ್ ಈ ವಿಷಯ ಪ್ರಸ್ತಾಪಿಸಿದ್ದಾರೆ. ಪೀಠ ಸ್ಥಾಪನೆ ವಿಚಾರಕ್ಕೆ ಎಲ್ಲ ಸದಸ್ಯರಿಂದಲೂ ಒಪ್ಪಿಗೆ ನೀಡಲಾಗಿದೆ ಎನ್ನಲಾಗಿದೆ. ಪೀಠ ಸ್ಥಾಪನೆಗೆ ಬೇಕಾದ 1 ಲಕ್ಷ ರೂಪಾಯಿ ಮೂಲ ಠೇವಣಿಯನ್ನು ವಿನಯ್ ಅವರೇ ನೀಡಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ | ತುಮಕೂರಿನಲ್ಲಿ ಆರದ ಫ್ಲೆಕ್ಸ್ ವಿವಾದ, ಗಣೇಶೋತ್ಸವಕ್ಕೆ ಹಾಕಿದ ಸಾವರ್ಕರ್, ತಿಲಕ್ ಚಿತ್ರವಿರುವ ಬ್ಯಾನರ್ ತೆರವು
ಈಗಾಗಲೇ ಪೀಠ ಸ್ಥಾಪನೆಗೆ ಅಗತ್ಯವಿರುವ ಕರಡು ಪರಿನಿಯಮಗಳನ್ನು ವಿವಿ ಸಿದ್ಧಪಡಿಸಿದೆ. ಹೀಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ವಿವಿ ಮುಂದಾಗಿದೆ. ಪೀಠ ಕಾರ್ಯಾರಂಭಕ್ಕೆ ಬೇಕಾದ 25 ಲಕ್ಷ ರೂಪಾಯಿಗಳನ್ನು ದಾನಿಗಳಿಂದ ಕೊಡುಗೆಯಾಗಿ ಪಡೆಯಲು ಸಭೆ ನಿರ್ಧರಿಸಿದೆ. ವಿವಿಯಲ್ಲಿ ಸಾವರ್ಕರ್ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪನೆಗೆ ಪ್ರಯತ್ನ ನಡೆದಿರುವುದು ಇದೇ ಮೊದಲಾಗಿರುವ ಕಾರಣ ವಿವಾದ ಭುಗಿಲೇಳುವ ಸಾಧ್ಯತೆ ಇದೆ.