ಬೆಂಗಳೂರು: ಗುಜರಾತ್ ಮೂಲದ ಸಹಕಾರಿ ಸಂಸ್ಥೆ ಅಮುಲ್ (Nandini vs Amul) ಈಗಾಗಲೇ ವಿವಿಧ ಉತ್ಪನ್ನಗಳನ್ನು ಕರ್ನಾಟಕದ ಮಾರುಕಟ್ಟೆಯಲ್ಲಿ ಹೊಂದಿದ್ದು, ಇದೀಗ ಹಾಲು ಮತ್ತು ಮೊಸರು ಮಾರಾಟಕ್ಕೆ ಮುಂದಾಗಿರುವುದಕ್ಕೆ ರಾಜ್ಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟದ ನಂದಿನಿ (Nandini) ಬ್ರ್ಯಾಂಡ್‌ಗೆ ಈಗಾಗಲೇ ಅನೇಕ ಖಾಸಗಿ ಬ್ರ್ಯಾಂಡ್‌ಗಳು ಸ್ಪರ್ಧೆ ಒಡ್ಡುತ್ತಿದ್ದು, ಇದೀಗ ಅಮುಲ್ ಸಹ ಸೇರ್ಪಡೆಯಾಗುತ್ತಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದ್ದು, ಕನ್ನಡಿಗರಿಂದ ಸೇವ್ ನಂದಿನಿ (ನಂದಿನಿ ಉಳಿಸಿ), ಬಾಯ್‌ಕಾಟ್ ಅಮುಲ್ (Save Nandini, Boycott Amul) ಅಭಿಯಾನ ಪ್ರಾರಂಭವಾಗಿದೆ.
ಮನೆ ಬಾಗಿಲಿಗೆ ಹಾಲು ಮೊಸರು ಪೂರೈಕೆಗೆ ಅಮುಲ್ ಮುಂದಾಗಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಅಮುಲ್ ವಿರುದ್ಧ ಸಿಡಿದೆದ್ದಿರುವ ಕನ್ನಡಿಗರು ಸೋಷಿಯಲ್ ಮೀಡಿಯಾ ಮೂಲಕ “ಸೇವ್ ನಂದಿನಿ” (Save Nandini) ಅಭಿಯಾನವನ್ನು ಪ್ರಾರಂಭಿಸಿದ್ದಾರೆ.
“ಸೇವ್ ನಂದಿನಿ ಕೆಎಂಎಫ್” ಹ್ಯಾಷ್‌ಟ್ಯಾಗ್‌ನೊಂದಿಗೆ ಕನ್ನಡಿಗರಿಂದ ಅಭಿಯಾನ ಆರಂಭವಾಗಿದ್ದು, ಅಮುಲ್‌ನೊಂದಿಗೆ ಕೆಎಂಎಫ್ ವಿಲೀನ ವಿವಾದದ ಬಗ್ಗೆ ವ್ಯಾಪಕ ಚರ್ಚೆ ನಡೆದಿದೆ. ಈಗ ಅಮುಲ್ ಉದ್ಯಮ ವಿಸ್ತರಣೆಗೆ ಕನ್ನಡಿಗರು ಕೆಂಡವಾಗಿದ್ದಾರೆ.
ಇದೇ ವೇಳೆ ನಂದಿನಿ ಉತ್ಪನ್ನಗಳ ಅಭಾವವೂ ಹೆಚ್ಚಾಗುತ್ತಿದ್ದು, ಅಮುಲ್‌ಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೃತಕ ಅಭಾವ ಸೃಷ್ಟಿಸಲಾಗುತ್ತಿದೆಯೇ ಎಂಬ ಅನುಮಾನವೂ ಶುರುವಾಗಿದೆ ಎಂದು ನೆಟ್ಟಿಗರು ಕಿಡಿಕಾರಲಾರಂಭಿಸಿದ್ದಾರೆ.
ಈ ವರೆಗೆ ಐಸ್‌ಕ್ರೀಮ್ ಸೇರಿದಂತೆ ಹಲವು ಉತ್ಪನ್ನಗಳನ್ನು ಬೆಂಗಳೂರಿನಲ್ಲಿ ಅಮುಲ್ ವತಿಯಿಂದ ಮಾರಾಟ ಮಾಡಲಾಗುತ್ತಿತ್ತು. ಈಗ ಹಾಲು ಮತ್ತು ಮೊಸರನ್ನೂ ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್ ಮೂಲಕ ಮನೆಗಳಿಗೆ ತಲುಪಿಸಲು ಮುಂದಾಗಿರುವುದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ಟ್ವಿಟರ್‌ನಲ್ಲಿ ಸಾರ್ವಜನಿಕರು ಆಕ್ರೋಶವನ್ನು ಹೊರಹಾಕಿದ್ದಾರೆ.
ನಂದಿನಿ ಹಾಲು, ಮೊಸರನ್ನಲ್ಲದೆ ಬೇರೆ ಯಾವುದೇ ಬ್ರ್ಯಾಂಡ್ ಅನ್ನೂ ನಾವು ಬಳಸುವುದಿಲ್ಲ. ಈಗ ನಂದಿನಿ ಜಾಗವನ್ನು ಅಮುಲ್ ಆಕ್ರಮಿಸಲು ಬರುತ್ತಿದೆ. ನಮ್ಮ ನಂದಿನಿಯನ್ನು ಈಗ ಕನ್ನಡಿಗರಾದ ನಾವೇ ಕಾಪಾಡಿಕೊಳ್ಳಬೇಕು. ನಂದಿನಿಯನ್ನಷ್ಟೇ ಬಳಸೋಣ ಎಂದು ಸೋಷಿಯಲ್ ಮೀಡಿಯಾದಲ್ಲಿ ಕರೆ ನೀಡಿಲಾಗುತ್ತಿದೆ. ಈ ಹಿನ್ನೆಲೆಯಲ್ಲಿ #SaveNandini #BoycottAmul ಹ್ಯಾಷ್‌ಟ್ಯಾಗ್ ಅಡಿ ಅಭಿಯಾನ ಪ್ರಾರಂಭವಾಗಿದೆ.
ಕನ್ನಡಪರ ಸಂಘಟನೆಗಳ ಆಕ್ರೋಶ
ಈಗ ಕನ್ನಡಪರ ಸಂಘಟನೆಗಳು ಸಹ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಯಾವುದೇ ಕಾರಣಕ್ಕೂ ನಂದಿನಿ ಬ್ರ್ಯಾಂಡ್‌ಗೆ ಧಕ್ಕೆಯಾಗಲು ಬಿಡುವುದಿಲ್ಲ ಎಂದು ಎಚ್ಚರಿಕೆಯನ್ನು ನೀಡಿವೆ. ಈ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ (TA Narayana Gowda) ಹಾಗೂ ಇನ್ನೊಂದು ಬಣದ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ (Praveen Shetty) ಆಕ್ರೋಶವನ್ನು ಹೊರಹಾಕಿದ್ದಾರೆ. ತೀವ್ರ ಸ್ವರೂಪದ ಹೋರಾಟಕ್ಕೆ ಮುಂದಾಗಲಾಗುವುದು ಎಂದೂ ಹೇಳಲಾಗಿದೆ.
ಅನಾಹುತಕ್ಕೆ ಆ ಸಂಸ್ಥೆಗಳೇ ಜವಾಬ್ದಾರಿ- ನಾರಾಯಣಗೌಡ
ಇ-ಕಾಮರ್ಸ್ ಅಡಿಯಲ್ಲಿ ಅಮುಲ್ ಹಾಲು, ಮೊಸರು ಮಾರಾಟಕ್ಕೆ ಮುಂದಾದರೆ ಅಂಥ ಸಂಸ್ಥೆಗಳ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಸ್ವರೂಪದ ಹೋರಾಟ ನಡೆಸಲಿದೆ. ಈ ಸಂಸ್ಥೆಗಳು ಅಮುಲ್ ಮಾರಾಟ ನಿಲ್ಲಿಸಬೇಕು, ಇಲ್ಲವಾದಲ್ಲಿ ಆಗುವ ಅನಾಹುತಕ್ಕೆ ಆ ಸಂಸ್ಥೆಗಳೇ ಜವಾಬ್ದಾರಿಯಾಗುತ್ತವೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: Modi in Karnataka : ಮೈಸೂರಿನ ರ‍್ಯಾಡಿಸನ್ ಹೋಟೆಲ್ ದರ್ಬಾರ್ ಸೂಟ್ ಮೋದಿಮಯ; ಟವೆಲ್, ಹೊದಿಕೆಯಲ್ಲೂ ಮೋದಿ ಚಿತ್ರ
ಕರ್ನಾಟಕ ರಕ್ಷಣಾ ವೇದಿಕೆ ಈ ಹಿಂದೆ ಆಂಧ್ರಪ್ರದೇಶದ ಕಲಬೆರೆಕೆ ಹಾಲಿನ ವಿರುದ್ಧ ಹೋರಾಟ ಸಂಘಟಿಸಿ ನಿಲ್ಲಿಸುವಲ್ಲಿ ಯಶಸ್ವಿಯಾಗಿತ್ತು. ಅದೇ ರೀತಿ ಈಗ ಅಮುಲ್ ವಿರುದ್ಧವೂ ಚಳವಳಿ ರೂಪಿಸಲಿದೆ. ನಂದಿನಿ ವಿರುದ್ಧ ನಡೆದಿರುವ ಪಿತೂರಿಗೆ ಕರವೇ ಸಂಬಂಧಪಟ್ಟವರಿಗೆ ತಕ್ಕ ಪಾಠ ಕಲಿಸಲಿದೆ. ಕನ್ನಡಿಗರು ಕಷ್ಟಪಟ್ಟು ಬೆಳೆಸಿದ ನಂದಿನಿ ಬ್ರ್ಯಾಂಡ್ ಅನ್ನು ಮುಗಿಸಲೆಂದೇ ಅಮುಲ್ ಹಾಲು-ಮೊಸರನ್ನು ರಾಜ್ಯಕ್ಕೆ ತರಲಾಗುತ್ತಿದೆ. ಕರ್ನಾಟಕದ ರೈತರನ್ನು ಭಿಕ್ಷುಕರನ್ನಾಗಿಸುವ ಸಂಚು ನಡೆಯುತ್ತಿದೆ. ಕನ್ನಡಿಗರು ಸ್ವಾಭಿಮಾನಿಗಳು, ಕೆರಳಿ ನಿಂತರೆ ಇಂಥ ಸಂಚುಗಳನ್ನು ವಿಫಲಗೊಳಿಸುವುದು ಅವರಿಗೆ ಗೊತ್ತಿದೆ ಎಂದು ನಾರಾಯಣಗೌಡ ಹೇಳಿದ್ದಾರೆ.
ಗುಜರಾತ್ ಲಾಬಿಗೆ ಮಣಿಯುವುದಿಲ್ಲ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಮುಲ್‌ನೊಂದಿಗೆ ನಂದಿನಿ ಸೇರಿದಂತೆ ದೇಶದ ವಿವಿಧ ಹಾಲು ಉತ್ಪಾದಕ ಸಂಸ್ಥೆಗಳನ್ನು ವಿಲೀನಗೊಳಿಸುವ ಮಾತುಗಳನ್ನು ಆಡಿದ ಬೆನ್ನಲ್ಲೇ ನಡೆಯುತ್ತಿರುವ ಘಟನೆಗಳನ್ನು ಗಮನಿಸಿದರೆ ಕೇಂದ್ರ ಸರ್ಕಾರವೇ ಪಿತೂರಿಯ ಹಿಂದಿದೆ ಎಂಬುದು ಸ್ಪಷ್ಟವಾಗುತ್ತದೆ. ಗುಜರಾತ್ ಲಾಬಿಗೆ ನಾವು ಮಣಿಯುವುದಿಲ್ಲ ಎಂದು ಸ್ಪಷ್ಟವಾಗಿ ಹೇಳುವ ಕಾಲ ಇದಾಗಿದೆ ಎಂದು ನಾರಾಯಣಗೌಡ ಕಿಡಿಕಾರಿದ್ದಾರೆ.
ಕರ್ನಾಟಕದ ಬಹುಪಾಲು ರೈತರು ಹಾಲು ಉತ್ಪಾದನೆಯನ್ನು ನೆಚ್ಚಿಕೊಂಡು ಬದುಕುತ್ತಿದ್ದಾರೆ. ಅವರನ್ನು ಗುಜರಾತಿ ವ್ಯಾಪಾರಿಗಳ ಅಡಿಯಾಳಾಗಿ ಮಾಡುವ ಹುನ್ನಾರವೇ ಅಮುಲ್-ನಂದಿನಿ ವಿಲೀನದ ಪ್ರಸ್ತಾಪ. ಅದನ್ನು ಜಾರಿಗೊಳಿಸುವ ಸಲುವಾಗಿಯೇ ಅಮುಲ್ ಹಾಲು-ಮೊಸರು ರಾಜ್ಯವನ್ನು ಪ್ರವೇಶಿಸುತ್ತಿದೆ. ಅಮುಲ್ ಪ್ರವೇಶಕ್ಕಾಗಿಯೇ ವೇದಿಕೆ ಸಜ್ಜುಗೊಳಿಸಲಾಗಿದೆ. ಕೃತಕವಾಗಿ ನಂದಿನ ಹಾಲಿನ ಪೂರೈಕೆ ಕುಸಿಯುವಂತೆ ಮಾಡಲಾಗಿದೆ. ಇದ್ದಕ್ಕಿದ್ದಂತೆ ನಂದಿನಿ ಹಾಲಿನ ಉತ್ಪಾದನೆ ಕುಸಿಯಲು ಕಾರಣವೇನು? ನಂದಿನಿಯನ್ನು ಮುಗಿಸಲು ಕೆಎಂಎಫ್ ಅಧಿಕಾರಿಗಳಿಗೆ ಸುಪಾರಿ ನೀಡಲಾಗಿದೆಯೇ? ಎಂದು ನಾರಾಯಣಗೌಡ ಪ್ರಶ್ನಿಸಿದ್ದಾರೆ.
ಲಾಭದಲ್ಲಿದ್ದ ಕರ್ನಾಟಕದ ಬ್ಯಾಂಕುಗಳನ್ನು ನಷ್ಟದಲ್ಲಿದ್ದ ಉತ್ತರ ಭಾರತದ ಬ್ಯಾಂಕುಗಳೊಂದಿಗೆ ವಿಲೀನಗೊಳಿಸಲಾಯಿತು. ಅದೇ ರೀತಿ ಅಮುಲ್ ಜತೆಗೆ ನಂದಿನಿಯನ್ನು ವಿಲೀನಗೊಳಿಸುವ ಹುನ್ನಾರ ನಡೆದಿದೆ. ಕರ್ನಾಟಕದ ರೈತರ ಬದುಕಿಗೆ ಕೊಳ್ಳಿ ಇಡಲು ಬಂದರೆ ಕನ್ನಡಿಗರು ದಂಗೆ ಏಳುತ್ತಾರೆ ಎಂಬುದನ್ನು ಮರೆಯಬೇಡಿ ಎಂದು ಟಿ.ಎ. ನಾರಾಯಣಗೌಡ ಕಿಡಿಕಾರಿದ್ದಾರೆ.
ಇದನ್ನೂ ಓದಿ: Karnataka Elections : ಕಿಚ್ಚ ಸುದೀಪ್‍ಗೆ ಅವಮಾನ ಮಾಡಿದ ಕಾಂಗ್ರೆಸ್, ಜೆಡಿಎಸ್‍ಗೆ ಜನರಿಂದ ತಕ್ಕ ಉತ್ತರ: ಗೌರವ್ ಭಾಟಿಯ
ನಂದಿನಿಯನ್ನು ಮುಗಿಸೋದಕ್ಕೆ ಸರ್ಕಾರ ಹೊರಟಿದೆ- ಪ್ರವೀಣ್ ಶೆಟ್ಟಿ
ನಂದಿನಿಯನ್ನು ಮುಗಿಸಲು ಸರ್ಕಾರ ಹೊರಟಿದೆ. ಇದನ್ನು ಕನ್ನಡ ರಕ್ಷಣಾ ವೇದಿಕೆ ವಿರೋಧಿಸುತ್ತದೆ. ಹೈನುಗಾರಿಕೆಗೆ ಉತ್ತೇಜನ ಕೊಡುವುದನ್ನು ಬಿಟ್ಟು ಈ ರೀತಿಯ ಹುನ್ನಾರ ಮಾಡಲಾಗತ್ತಿದೆ. ಈಗ ಹೈನುಗಾರಿಕೆ ಮಾಡಲು ಜನರು ಮುಂದೆ ಬರುತ್ತಿಲ್ಲ. ಇದಕ್ಕೆ ಕಾರಣ ನಮ್ಮ ಸರ್ಕಾರ ಹೈನುಗಾರಿಕೆ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು. ಕನ್ನಡಿಗರು ಕಟ್ಟಿ, ಬೆಳೆಸಿರುವ ನಂದಿನಿಯನ್ನು ಹಾಳು ಮಾಡಲು ಹೊರಟ ಸರ್ಕಾರದ ವಿರುದ್ಧ ನಾವು ಹೋರಾಟ ಮಾಡುತ್ತೇವೆ ಎಂದು ಕರವೇ ಪ್ರವೀಣ್ ಶೆಟ್ಟಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.