ಶಿವಮೊಗ್ಗ: ಭಾರತದ ಬ್ಯಾಂಕಿಂಗ್ ವ್ಯವಸ್ಥೆ ಇಂದು ಸದೃಢವಾಗಿದ್ದು, ನಮ್ಮ ಎಸ್‌ಬಿಐ ಈಗ ರಿಲಯನ್ಸ್ ಇಂಡಸ್ಟ್ರೀಸ್ ಗಿಂತ ದುಪ್ಪಟ್ಟು ಲಾಭದಲ್ಲಿ ಇದೆ. 85 ಸಾವಿರ ಕೋಟಿ ನಷ್ಟದಲ್ಲಿದ್ದ ಬ್ಯಾಂಕ್ ಈಗ 1.4 ಲಕ್ಷ ಕೋಟಿ ಲಾಭದ ದಾಖಲೆಯಲ್ಲಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದರು.
ಶಿವಮೊಗ್ಗದಲ್ಲಿ ಶನಿವಾರ ವಿಪ್ರ ಹಮ್ಮಿಕೊಂಡಿದ್ದ ಬಿ.ಎಸ್.ಯಡಿಯೂರಪ್ಪ ಅವರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, 2004ರಿಂದ 2014ರವರೆಗೆ ದೇಶದ ಎಲ್ಲಾ ಬ್ಯಾಂಕ್‌ಗಳು ನಷ್ಟದಲ್ಲಿದ್ದವು. ಆದರೆ ನಂತರದ ಹತ್ತು ವರ್ಷದಲ್ಲಿ ಎಲ್ಲಾ ಬ್ಯಾಂಕ್‌ಗಳು ಲಾಭದಲ್ಲಿವೆ ಎಂದು ಹೇಳಿದರು.
ಸಹಸ್ರಾರು ಕೋಟಿ ವಂಚಕರ ಸೆರೆ
ಸಹಸ್ರಾರು ಕೋಟಿ ಸಾಲ ಪಡೆದು ಓಡಿ ಹೋಗುತ್ತಿದ್ದ ಕುಳಗಳನ್ನು ಸದೆ ಬಡಿದ ಪರಿಣಾಮ ಭಾರತ ಇಂದು ಆರ್ಥಿಕವಾಗಿ ಬಲಿಷ್ಠ ರಾಷ್ಟ್ರವಾಗಿದೆ. 10 ಸಾವಿರ ಕೋಟಿ, 15 ಸಾವಿರ ಕೋಟಿ ಸಾಲ ಮಾಡಿ ಟೋಪಿ ಹಾಕಿ ಓಡಿ ಹೋಗುತ್ತಿದ್ದವರು ಈಗ ಆ ಧೈರ್ಯ ಮಾಡುತ್ತಿಲ್ಲ ಎಂದರು.
ಇದನ್ನೂ ಓದಿ | Hubli Airport: ಹುಬ್ಬಳ್ಳಿ ಅಂತಾರಾಷ್ಟ್ರೀಯ ಏರ್‌ಪೋರ್ಟ್ ಕಾಮಗಾರಿ 2 ವರ್ಷದಲ್ಲಿ ಪೂರ್ಣ: ಪ್ರಲ್ಹಾದ್ ಜೋಶಿ
ಇನ್ನೂ ಇಬ್ಬರು, ಮೂವರು ಇದ್ದಾರೆ
ದೇಶದಲ್ಲಿ ಇನ್ನೂ ಇಬ್ಬರು-ಮೂವರು ಸಹಸ್ರ ಕೋಟಿ ಸಾಲ ಪಡೆದು ಟೋಪಿ ಹಾಕಿ, ಓಡಿ ಹೋದವರಿದ್ದಾರೆ. ಅವರನ್ನೂ ಕರೆ ತರುವ ಕೆಲಸ ನಡೆದಿದೆ. ಈ ನಿಟ್ಟಿನಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಬದಲಾವಣೆ ಮಾಡಿ ಬಲಿಷ್ಠಗೊಳಿಸಲಾಗಿದೆ ಎಂದು ಹೇಳಿದರು
25 ಕೋಟಿ ಜನ ಬಡತನ ಮುಕ್ತ
ದೇಶದ ಕೈಯಲ್ಲಿ ದುಡ್ಡಿದೆ. ಹೀಗಾಗಿ ಭಾರತದ 25 ಕೋಟಿ ಜನ ಈಗ ಬಹು ಆಯಾಮದ ಬಡತನದಿಂದ ಹೊರ ಬಂದಿದ್ದಾರೆ. ಮೋದಿ ಅವರ ನೇತೃತ್ವದಲ್ಲಿ ಮುಂದಿನ 10 ವರ್ಷಗಳಲ್ಲಿ ಭಾರತ ಇಡೀ ವಿಶ್ವಕ್ಕೆ ಬೇಕು-ಬೇಡಗಳನ್ನು ಪೂರೈಸುವ ನಂಬರ್ 1 ರಾಷ್ಟ್ರವಾಗಲಿದೆ, ಯುವಶಕ್ತಿ ಬಲವಿದೆ ಎಂದು ಹೇಳಿದರು.
21ನೇ ಶತಮಾನ ಭಾರತದ್ದು
ಒಂದು ಕಾಲದಲ್ಲಿ ನಮ್ಮನ್ನಾಳಿದ ಇಂಗ್ಲೆಡ್ ಅನ್ನು ಮೀರಿ ಭಾರತ ಬೆಳೆದಿದೆ. 19ನೇ ಶತಮಾನ ಇಂಗ್ಲೆಡ್‌ನದ್ದಾದರೆ, 20ನೇ ಶತಮಾನ ಅಮೆರಿಕದ್ದಾಗಿತ್ತು. ಈಗ 21ನೇ ಶತಮಾನ ಭಾರತದ್ದಾಗುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಶ್ರಮಿಸುತ್ತಿದ್ದಾರೆ ಎಂದು ಸಚಿವ ಜೋಶಿ ಹೇಳಿದರು.
2012ರಲ್ಲಿ 68 ಕೋಟಿ ಜನ ಕತ್ತಲಲ್ಲಿ ಇದ್ದರು. ಆದರೆ ಈಗ ಇಡೀ ದೇಶಕ್ಕೆ ಸಮರ್ಪಕ ವಿದ್ಯುತ್ ಪೂರೈಸುವ ಸಾಮರ್ಥ್ಯವಿದೆ. ಐದು ಅತ್ಯಂತ ದುರ್ಬಲ ದೇಶಗಳ ಪಟ್ಟಿಯಲ್ಲಿದ್ದ ಭಾರತವು ಹತ್ತೇ ವರ್ಷದಲ್ಲಿ ಅಭಿವೃದ್ಧಿಶೀಲ 5ನೇ ರಾಷ್ಟ್ರವಾಗಿ ಹೊರಹೊಮ್ಮಿದೆ. ಇದು ಪ್ರಧಾನಿ ಮೋದೀಜಿ ಸಂಕಲ್ಪದ ಪ್ರತಿಫಲ ಎಂದು ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು.
ಇದನ್ನೂ ಓದಿ | ವಿಸ್ತಾರ ನ್ಯೂಸ್ ಪೋಲಿಂಗ್ ಬೂತ್; ಫೋನ್ ಮಾಡಿ, ಓಟ್ ಮಾಡಿ; ಯಾರು ಎಂಪಿ ಆಗಬೇಕು ತಿಳಿಸಿ!
ಸಮಾರಾಭದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಂಸದ ಬಿ. ವೈ. ರಾಘವೇಂದ್ರ ಸೇರಿದಂತೆ ಶಿವಮೊಗ್ಗ ಜಿಲ್ಲಾ ಬಿಜೆಪಿ ಶಾಸಕರು, ಮುಖಂಡರು ಉಪಸ್ಥಿತರಿದ್ದರು.