Site icon Vistara News

Manual Scavenging: ಮಕ್ಕಳಿಂದ ಮಲದ ಗುಂಡಿ ಸ್ವಚ್ಛತೆ; ಕೊಲೆ ಯತ್ನ ಕೇಸ್‌ ಹಾಕಿ ಎಂದ SC ಆಯೋಗದ ಸದಸ್ಯೆ

morarji desai school case 1

ಕೋಲಾರ: ವಿದ್ಯಾರ್ಥಿಗಳಿಂದ ಮಲದ ಗುಂಡಿ ಸ್ವಚ್ಛತೆ ಪ್ರಕರಣದ (Manual Scavenging) ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ ಸದಸ್ಯೆ ಅಂಜು ಬಾಲ ಅವರು ಜಿಲ್ಲೆಯ ಮಾಲೂರು ತಾಲೂಕಿನ ಯಲುವಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶೌಚ ಗುಂಡಿ ಬಳಿ ತೆರಳಿ ಪರಿಶೀಲನೆ ಮಾಡಿದ ವೇಳೆ ಮಕ್ಕಳು ಕೆಳಗೆ ಇಳಿದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದಕ್ಕೆ ಆಕ್ರೋಶಗೊಂಡ ಅಂಜು ಬಾಲ ಅವರು, ನನ್ನ ಬಳಿ ಏನನ್ನೂ ಮುಚ್ಚಿಡಬೇಡಿ. ಮಕ್ಕಳು ಕೆಳಗೆ ಇಳಿದಿಲ್ಲ ಎಂದು ಸುಳ್ಳು ಹೇಳಬೇಡಿ, ನಾನು ಬೇರೆಯವರ ಬಳಿ ಮಾಹಿತಿ ಪಡೆಯುತ್ತೇನೆ. ಇದು ಒಟ್ಟಾರೆಯಾಗಿ ಕೊಲೆ ಯತ್ನವಾಗಿದೆ ಎಂದು ಕಿಡಿಕಾರಿದರು.

ಬೇಕಿದ್ದರೆ ಪ್ರಾಂಶುಪಾಲರನ್ನೇ ಶೌಚ ಗುಂಡಿಗೆ ಇಳಿಸಬೇಕಿತ್ತು, ಮಲದ ಗುಂಡಿ ಮುಚ್ಚಳ ತೆರೆದ ತಕ್ಷಣ ಮಕ್ಕಳು ವಿಷಗಾಳಿ ಸೇವಿಸಿ, ಮೃತಪಡುವ ಸಾಧ್ಯತೆಯೂ ಇತ್ತು. ಇದು ಕೊಲೆ ಯತ್ನ ಪ್ರಕರಣವಾಗಿದ್ದು, ಕ್ಷಮಿಸಲಾರದ ಅಕ್ಷಮ್ಯ ಅಪರಾಧ. ಪ್ರಾಂಶುಪಾಲೆ, ಶಿಕ್ಷಕರ ವಿರುದ್ಧ ಸೆಕ್ಷನ್ 307 ಕೇಸ್ ಹಾಕಬೇಕು ಎಂದು ಪೊಲೀಸ್‌ ವರಿಷ್ಠಾಧಿಕಾರಿಗೆ ಸೂಚಿಸಿದರು.

ಇದನ್ನೂ ಓದಿ | Self Harming: ಶಿಡ್ಲನಹಟ್ಟಿ ಗ್ರಾಮದಲ್ಲಿ ಕೆರೆಗೆ ಹಾರಿ ನವ ವಿವಾಹಿತೆ ಆತ್ಮಹತ್ಯೆ

ಪ್ರಾಂಶುಪಾಲರು, ಶಿಕ್ಷಕರೇ ಸ್ವಚ್ಛ ಮಾಡಬಹುದಿತ್ತು

ಮಾಧ್ಯಮದವರು ಇಲ್ಲದಿದ್ದರೆ ಈ ಘಟನೆ ಹೊರಬರುತ್ತಿರಲಿಲ್ಲ, ನಾನು ಕೂಡ ಬರುತ್ತಿರಲಿಲ್ಲ. ಧಮನಿತರ ಕೂಗು ಎಷ್ಟೋ ಸಲ ಮುಚ್ಚಿಹೋಗುತ್ತದೆ. ನಾನು ಮಕ್ಕಳೊಂದಿಗೆ ಸಮಾಲೋಚನೆ ನಡೆಸಿದ್ದೇನೆ, ನಾವು ತಳಮಟ್ಟದಲ್ಲಿ ಪರಿಶೀಲನೆ ಮಾಡುತ್ತೇವೆ. ಯಾರೊಂದಿಗೆ ದುರ್ವ್ಯವಹಾರ ನಡೆಸುವುದಿಲ್ಲ, ಆದರೆ ನಮ್ಮ ಪರಿಶಿಷ್ಟ ಜಾತಿ ಮಕ್ಕಳಿಗೆ ತೊಂದರೆ ನೀಡಿದರೆ ಆಯೋಗ ಸುಮ್ಮನಿರಲ್ಲ ಎಂದು ಅಂಜು ಬಾಲ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಪರಿಶೀಲನೆ ಸಂದರ್ಭದಲ್ಲಿ ಕೆಲ ವಿಷಯಗಳನ್ನು ಮುಚ್ಚಿಡಲು ಪ್ರಯತ್ನಿಸಿದ್ದಾರೆ. ಆದರೆ, ಪೊಲೀಸ್ ವರಿಷ್ಠಾಧಿಕಾರಿಗಳು ನಿಜಾಂಶ ತಿಳಿಸಿದ್ದಾರೆ. ಇದಕ್ಕೆ 307 ಕೇಸ್ ದಾಖಲಿಸಲು ಸೂಚನೆ ನೀಡಿದ್ದೇನೆ. ಶೌಚ ಮುಚ್ಚಲ ಹೊರ ತೆಗೆದಾಗ ವಿಷ ಗಾಳಿ ಸೇವಿಸಿ ಮಕ್ಕಳ ಪ್ರಾಣ ಹೋಗುವ ಸಾಧ್ಯತೆ ಇತ್ತು. ಸ್ವಚ್ಛಾತಾ ಅಭಿಯಾನವಾಗಿದ್ದರೆ ಪ್ರಾಂಶುಪಾಲರು, ಶಿಕ್ಷಕರೇ ಸ್ವಚ್ಛತೆ ಮಾಡಬಹುದಿತ್ತು, ಈ ಕೆಲಸಕ್ಕೆ ದಲಿತರ ಮಕ್ಕಳನ್ನೇ ಯಾಕೆ ಆಯ್ಕೆ ಮಾಡಿಕೊಂಡಿದ್ದೀರಿ ಎಂದು ಪ್ರಶ್ನಿಸಿದರು.

ಲೈಂಗಿಕ ಕಿರುಕುಳ ಬಗ್ಗೆ ಕೇಳಿ ಬಂದಿದೆ. ಮಕ್ಕಳ ಖಾಸಗಿ ಕ್ಷಣಗಳ ಚಿತ್ರೀಕರಣ ಮಾಡಲಾಗಿದೆ. ಇದು ತನಿಖಾ ಹಂತದಲ್ಲಿದೆ. ಆದರೆ, ಕರ್ನಾಟಕ ಸರ್ಕಾರ ಬದಲಾವಣೆಯಾದರೆ ಮನಸ್ಥಿತಿ ಬದಲಾಗುತ್ತಾ,? ರಾಮನಗರದ ಘಟನೆ ಇನ್ನೂ ನೆನಪಿನಲ್ಲಿದೆ. ನಮ್ಮ ಆಯೋಗ ಯಾವುದೇ ಸರ್ಕಾರದ ಪರ ಅಥವಾ ವಿರೋಧವಾಗಿಲ್ಲ. ತಪ್ಪು ಮಾಡಿದರೆ ಯಾವುದೇ ಸರ್ಕಾರವನ್ನು ಎಚ್ಚರಿಸುವ ಕೆಲಸ ನಮ್ಮದು. ಇದು ಪುಟ್ಟ ಮಕ್ಕಳ ಜೀವದ ಪ್ರಶ್ನೆ, ಆ ಮಕ್ಕಳನ್ನು ಮಲದ ಗುಂಡಿಗೆ ಹೇಗೆ ಇಳಿಸಿದ್ದೀರಿ, ಆಯೋಗ ನಿಮ್ಮನ್ನು ಕ್ಷಮಿಸುವುದಿಲ್ಲ ಎಂದು ಹೇಳಿದರು.

ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇಬೇಕು. ಸರ್ಕಾರ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸದಿದ್ದರೆ ಬೇರೆ ಕಡೆಯೂ ಇದೆ ರೀತಿ ಮರುಕಳಿಸಬಹುದು. ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುವುವರಿಗೆ ದಲಿತ ಸಂರಕ್ಷಣೆ ಕಾಯ್ದೆ ಕುರಿತು ಅರಿವು ಮೂಡಿಸಬೇಕು. ಯಾರ ತಪ್ಪನ್ನು ಬೇಕಾದರೆ ಮುಚ್ಚಿ ಹಾಕಬಹುದು, ಆದರೆ ಶಿಕ್ಷಕರ ತಪ್ಪನ್ನು ಮುಚ್ಚಿಹಾಕಲ್ಲ, ಇದು ಕೇವಲ ಕರ್ನಾಟಕದ ವಿಚಾರದ ಅಲ್ಲ ರಾಷ್ಟ್ರದ ವಿಚಾರವಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ | Womens Help Desk :‌ ಠಾಣೆಗಳಲ್ಲಿ ಮಹಿಳಾ ಹೆಲ್ಪ್‌ ಡೆಸ್ಕ್‌ಗೆ ಗೇಟ್‌ ಪಾಸ್‌

ಶಿಕ್ಷಕರು, ಸಿಬ್ಬಂದಿ ವರ್ಗಾವಣೆ

ಮಕ್ಕಳಿಂದ ಮಲದ ಗುಂಡಿ ಸ್ವಚ್ಛತೆ ಪ್ರಕರಣ ಜತೆಗೆ ಶಾಲೆಯಲ್ಲಿ ಬಾಲಕಿಯರ ಖಾಸಗಿ ಕ್ಷಣಗಳ ಚಿತ್ರೀಕರಣ ಪ್ರಕರಣ ಬೆಳಕಿಗೆ ಬಂದಿತ್ತು. ಮಕ್ಕಳ ಪೋಷಕರಿಂದ ದೂರು ಹಿನ್ನಲೆ ಮಾಸ್ತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಮಲದ ಗುಂಡಿ ಸ್ವಚ್ಛತೆ ಪ್ರಕರಣದಲ್ಲಿ ಪ್ರಾಂಶುಪಾಲೆ, ಶಿಕ್ಷಕ, ವಾರ್ಡನ್‌ ಸೇರಿ ಮೂವರನ್ನು ಅಮಾನತು ಮಾಡಲಾಗಿತ್ತು. ಬಳಿಕ ಆಡಳಿತ ಸಿಬ್ಬಂದಿ ಸೇರಿದಂತೆ ಅಡುಗೆ ಸಹಾಯಕಿಯರು, ಡಿ.ಗ್ರೂಪ್ ನೌಕರರು, ವಾಚ್ ಮೆನ್ ಸೇರಿದಂತೆ ಎಲ್ಲರ ವರ್ಗಾವಣೆ ಮಾಡಲಾಗಿದೆ. ಪ್ರಕರಣದಲ್ಲಿ ಮಾಸ್ತಿ ಠಾಣೆ ಪೊಲೀಸರಿಂದ ಇಬ್ಬರ ಬಂಧನವಾಗಿದ್ದು, ತಲೆ ಮರೆಸಿಕೊಂಡ ಮೂವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

Exit mobile version