Site icon Vistara News

SC ST Reservation : ಬಾಗಲಕೋಟೆ ತಾಂಡಾಗಳಲ್ಲೂ ಆಕ್ರೋಶ; ಬಿಜೆಪಿ ಧ್ವಜ ತೆರವು, ಪ್ರವೇಶ ನಿರಾಕರಿಸಿ ಪೋಸ್ಟರ್‌

#image_title

ಬಾಗಲಕೋಟೆ: ಬಿಜೆಪಿ ಸರಕಾರವು ಪರಿಶಿಷ್ಟ ಜಾತಿ ಮೀಸಲಾತಿಯಲ್ಲಿ (SC ST Reservation) ಒಳಮೀಸಲು ನಿಗದಿಪಡಿಸಿ ಕೇಂದ್ರ ಸರ್ಕಾರಕ್ಕೆ ಮಾಡಿರುವ ಶಿಫಾರಸನ್ನು ಹಿಂದಕ್ಕೆ ಪಡೆಯಲು ಆಗ್ರಹಿಸಿ ರಾಜ್ಯಾದ್ಯಂತ ಬಂಜಾರ ಸಮುದಾಯದ ಪ್ರತಿಭಟನೆ ನಿಧಾನಕ್ಕೆ ಬೇರೆ ಬೇರೆ ಜಿಲ್ಲೆಗಳಿಗೆ ವ್ಯಾಪಿಸುತ್ತಿದೆ. ಸೋಮವಾರ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಆರಂಭಗೊಂಡ ಪ್ರತಿಭಟನೆ ಮಾಜಿ ಸಿಎಂ ಯಡಿಯೂರಪ್ಪ ಅವರ ಮನೆಗೆ ಕಲ್ಲೆಸೆಯುವ ಹಂತಕ್ಕೆ ತಲುಪಿತ್ತು. ಶಿವಮೊಗ್ಗದಲ್ಲಿ ಮಂಗಳವಾರವೂ ರಸ್ತೆ ತಡೆ, ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸುವ ಘಟನೆಗಳ ಮೂಲಕ ಮುಂದುವರಿದಿದೆ. ಈ ನಡುವೆ, ಬಾಗಲಕೋಟೆ, ಬೆಳಗಾವಿ ಸೇರಿದಂತೆ ನಾನಾ ಕಡೆಗಳಲ್ಲಿ ಪ್ರತಿಭಟನೆ ಕಾವು ಜೋರಾಗಿದೆ. ಬಾಗಲಕೋಟೆಯ ಮುಚಖಂಡಿ ಬಂಜಾರಾ ತಾಂಡದಲ್ಲಿ ಹಾಕಲಾದ ಎಲ್ಲ ಬಿಜೆಪಿ ಧ್ವಜಗಳನ್ನು ಕಿತ್ತು ಹಾಕಲಾಗಿದ್ದು, ಬಿಜೆಪಿ ನಾಯಕರಿಗೆ ಪ್ರವೇಶವಿಲ್ಲ ಎಂದು ಬೋರ್ಡ್‌ ಹಾಕಲಾಗಿದೆ.

ಪರಿಶಿಷ್ಟ ಜಾತಿ ಮೀಸಲಾತಿಯನ್ನು ಇತ್ತೀಚೆಗ ಶೇ. 13ರಿಂದ 17ಕ್ಕೆ ಹೆಚ್ಚಿಸಿದ ರಾಜ್ಯ ಸರ್ಕಾರ, ಅದರಲ್ಲಿ ಒಳಮೀಸಲಾತಿಯನ್ನು ನಿಗದಿ ಮಾಡಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಮಾದಿಗ ಸಂಬಂಧಿತ ಜಾತಿಗಳಿಗೆ ಶೇ. 6, ಹೊಲೆಯ ಸಂಬಂಧಿತ ಜಾತಿಗಳಿಗೆ ಶೇ.5.5, ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯಗಳಿಗೆ ಶೇ. 4.5, ಇತರೆ ಅಲೆಮಾರಿ ಸಮುದಾಯಗಳಿಗೆ ಶೇ. 1 ಮೀಸಲಾತಿಯನ್ನು ಸರ್ಕಾರ ಹಂಚಿಕೆ ಮಾಡಿದೆ.

ಇದು ಪ್ರಮುಖವಾಗಿ ಲಂಬಾಣಿ ಸಮುದಾಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಬಾಗಲಕೋಟೆಯ ಮುಚಖಂಡಿ ತಾಂಡಾ‌ ಸೇರಿ ಹಲವೆಡೆ ಬಿಜೆಪಿ ಮತ್ತು ಸರ್ಕಾರದ ವಿರುದ್ಧ ಆಕ್ರೋಶ ಜೋರಾಗಿದೆ. ಇಲ್ಲಿನ ಯುವಕರು ಮನೆ ಮೇಲೆ, ವಿದ್ಯುತ್ ಕಂಬಗಳ ಮೇಲೆ ಹಾಕಿದ್ದ ಬಿಜೆಪಿ ಧ್ವಜಗಳನ್ನು ತೆರವು ಮಾಡಿದ್ದಾರೆ. ರಾಜ್ಯ ಸರ್ಕಾರ, ಲಂಬಾಣಿ ಸಮುದಾಯದ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ತಾಂಡಾ ಪ್ರವೇಶ ನಿರ್ಬಂಧಿಸಿ ಪೋಸ್ಟರ್

ತಾಂಡಾ ಪ್ರವೇಶ ನಿಷೇಧ

ಬಿಜೆಪಿ ಮುಖಂಡರು, ಜನಪ್ರತಿನಿಧಿಗಳು ಒಳಮೀಸಲಾತಿ ವಿರುದ್ಧ ಮಾತನಾಡಬೇಕು ಎಂದು ಆಗ್ರಹಿಸಿರುವ ಇಲ್ಲಿನ ತಾಂಡಾ ನಿವಾಸಿಗಳು ಹಾಗೆ ಮಾತನಾಡದಿದ್ದರೆ ತಾಂಡಾ ಪ್ರವೇಶಕ್ಕೆ ಅವಕಾಶ ಕೊಡುವುದಿಲ್ಲ ಎಂದು ಘೋಷಿಸಿದ್ದಾರೆ.

ಬಾಗಲಕೋಟೆ ಜಿಲ್ಲೆ ಮತ್ತು ತಾಲ್ಲೂಕಿನ ಮಚಖಂಡಿ ತಾಂಡದಲ್ಲಿ ಪ್ರತಿಭಟನೆ ನಡೆಸಿದ್ದು, ಈ ಫಲಕದ ಬ್ಯಾನರ್ ಸಿದ್ದಪಡಿಸಲಾಗಿದೆ. ಶೀಘ್ರದಲ್ಲಿಯೇ ಸುತ್ತಮುತ್ತಲ ತಾಂಡಗಳಲ್ಲಿಯೂ ಇದೇ ರೀತಿಯ ಫಲಕಗಳನ್ನು ಹಾಕಲು ಗ್ರಾಮಸ್ಥರು ನಿರ್ಧರಿಸಿದ್ದಾರೆ ಎಂದು ಲಂಬಾಣಿ ಸಮಾಜದ ಮುಖಂಡರಾದ ರಾಜು ತಿಳಿಸಿದ್ದಾರೆ.

ಬಿಜೆಪಿ ನಾಯಕರಿಗೆ ಶ್ರದ್ಧಾಂಜಲಿ!

ಇದೇ ವೇಳೆ, ಬಂಜಾರ ಸಮುದಾಯದ ಬಿಜೆಪಿ ನಾಯಕರಿಗೆ ಶ್ರದ್ಧಾಂಜಲಿ ಸಲ್ಲಿಸುವ ವಿಡಿಯೊಗಳು ಕೂಡಾ ಹರಿದಾಡುತ್ತಿವೆ. ಯಾವ ಕಾರಣಕ್ಕೂ ಮತ್ತೆ ಬಂಜಾರಾ ಸಮುದಾಯದಲ್ಲಿ ಹುಟ್ಟಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ. ಕಲಬುರಗಿ ಸಂಸದ ಉಮೇಶ್‌ ಜಾಧವ್‌, ಕುಡಚಿ ಶಾಸಕ ಪಿ. ರಾಜೀವ್‌ ಸೇರಿದಂತೆ ಹಲವು ಶಾಸಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದೆ.

ಶಿವಮೊಗ್ಗದಲ್ಲಿ ಮತ್ತೆ ಬಂಜಾರಾ ಸಮುದಾಯದ ಆಕ್ರೋಶ

ಒಳ ಮೀಸಲು ವಿಚಾರಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದ ವಿರುದ್ಧ ಸೋಮವಾರ (ಮಾ. 27) ಶಿಕಾರಿಪುರದಲ್ಲಿ ಲಂಬಾಣಿ ಸಮುದಾಯದವರು ಸಿಡಿದೆದ್ದಿದ್ದರೆ, ಶಿವಮೊಗ್ಗದಲ್ಲಿ ಮಂಗಳವಾರ (ಮಾ. 28) ಬಂಜಾರ ಸಮುದಾಯದವರಿಂದ ಭಾರಿ ಪ್ರತಿಭಟನೆ ಆರಂಭವಾಗಿದೆ. ಅಲ್ಲದೆ, ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಲಾಗಿದೆ. ಒಳ ಮೀಸಲಾತಿ ಜಾರಿ ವಿರೋಧಿಸಿ ಬಂಜಾರ ಸಮುದಾಯದವರು ಶಿವಮೊಗ್ಗದ ಕುಂಚೇನಹಳ್ಳಿಯಲ್ಲಿ ಮಂಗಳವಾರ ಪ್ರತಿಭಟನೆಯನ್ನು ಆರಂಭಿಸಿದ್ದಾರೆ. ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆಯಲ್ಲಿ ಟಯರ್‌ಗೆ ಬೆಂಕಿ ಹಾಕಿ ಆಕ್ರೋಶ ವ್ಯಕ್ತಪಡಿಸಲಾಗಿದೆ.

ಇದನ್ನೂ ಓದಿ : SC ST Reservation: ಶಿವಮೊಗ್ಗ ಮತ್ತೆ ಉದ್ವಿಗ್ನ; ‌ಮೀಸಲಾತಿ ವಿರೋಧಿಸಿ ರಸ್ತೆ ತಡೆದು ಬಂಜಾರ ಸಮುದಾಯದ ಆಕ್ರೋಶ

Exit mobile version