ಬೆಂಗಳೂರು: ರಾಜ್ಯದ ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡಗಳಿಗೆ (ಎಸ್‌ಟಿ) ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳು ಹಾಗೂ ರಾಜ್ಯಾಧೀನ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ (SC ST Reservation) ಹೆಚ್ಚಳ ಮಾಡಿ ಕಳೆದ ಅಕ್ಟೋಬರ್‌ನಲ್ಲಿ ಸುಗ್ರೀವಾಜ್ಞೆ ಹೊರಡಿಸಿದ್ದ ರಾಜ್ಯ ಸರ್ಕಾರ ಈಗ ಸರ್ಕಾರಿ ನೌಕರರ ಮುಂಬಡ್ತಿಯಲ್ಲಿಯೂ ಈ ಮೀಸಲಾತಿ ಹೆಚ್ಚಳವನ್ನು ಜಾರಿಗೊಳಿಸಿ ಆದೇಶ ಹೊರಡಿಸಿದೆ.
ಈ ಮೀಸಲಾತಿ ಹೆಚ್ಚಳ ಕುರಿತ ಮಸೂದೆ ವಿಧಾನಸಭೆಯಲ್ಲಿ ಅಂಗೀಕಾರ ಪಡೆಯುತ್ತಿದ್ದಂತೆಯೇ ರಾಜ್ಯ ಸರ್ಕಾರ ಈ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದು, ಡಿಸೆಂಬರ್ 28 ರಂದು ಅಧಿಕೃತ ಆದೇಶ ಹೊರಡಿಸಲಾಗಿದೆ.
ಅಕ್ಟೋಬರ್‌ನಲ್ಲಿ ಎಸ್‌ಸಿ ಮೀಸಲಾತಿ ಶೇ. 15 ರಿಂದ 17ಕ್ಕೆ, ಎಸ್‌ಟಿ ಮೀಸಲಾತಿ ಶೇ.3ರಿಂದ 7ಕ್ಕೆ ಏರಿಸಿ, ಸಂವಿಧಾನದ 9ನೇ ಪರಿಚ್ಛೇದದ ಅಡಿಯಲ್ಲಿ ರಕ್ಷಣೆ ಪಡೆದು ಮೀಸಲಾತಿ ಘೋಷಣೆಗೆ ಸಂಬಂಧಪಟ್ಟಂತೆ ರಾಜ್ಯ ಪತ್ರ ಹೊರಡಿಸಲಾಗಿತ್ತು. ಅದೀಗ ಮುಂಬಡ್ತಿಯಲ್ಲಿಯೂ ಜಾರಿಯಾಗಲಿದೆ.
ಈ ಮೀಸಲಾತಿ ಹೆಚ್ಚಳ ಹೊರತು ಪಡಿಸಿ, ಮುಂಬಡ್ತಿಗೆ ಸಂಬಂಧಿಸಿದ 1979ರ ಆದೇಶದಲ್ಲಿ ಮತ್ಯಾವ ಬದಲಾವಣೆಯನ್ನೂ ಮಾಡಲಾಗಿಲ್ಲ. ಈ ಮುಂಬಡ್ತಿಯಲ್ಲಿ ಮೀಸಲಾತಿ ನೀಡುವ ಆದೇಶವು ತಕ್ಷಣದಿಂದ ಜಾರಿಗೆ ಬರುತ್ತಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ಆದೇಶದ ಜತೆಯಲ್ಲಿಯೇ ಹೆಚ್ಚಿನ ಮೀಸಲಾತಿ ಪ್ರಮಾಣಕ್ಕೆ ಅನುಗುಣವಾಗಿ ಮುಂಬಡ್ತಿಯ ಮುಖಾಂತರ ಭರ್ತಿ ಮಾಡಬೇಕಾದ ರಿಕ್ತಸ್ಥಾನಗಳಿಗೆ ಬಿಂದುಗಳನ್ನು ಗುರುತಿಸಿ, ಪರಿಷ್ಕೃತ ರೋಸ್ಟರನ್ನು ಪ್ರಕಟಿಸಲಾಗಿದೆ.
ಇದನ್ನೂ ಓದಿ |ಬೆಳಗಾವಿ ಅಧಿವೇಶನ | ಎಸ್‌ಸಿಎಸ್‌ಟಿ ಮೀಸಲಾತಿ ಹೆಚ್ಚಳ ವಿಧೇಯಕ ಮಂಡನೆ, ಶೆಡ್ಯೂಲ್ 9ಕ್ಕೆ ಸೇರಿಸುವ ಪ್ರಸ್ತಾಪ