Site icon Vistara News

SC ST Reservation: ಶಿಕಾರಿಪುರ ಶಾಂತ, ಮೂವರ ಬಂಧನ, ಬಂಧನ ವಿರೋಧಿಸಿ ಪ್ರತಿಭಟನೆ

SC ST Reservation

ಶಿವಮೊಗ್ಗ: ಶಿಕಾರಿಪುರದಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರ ಮನೆಯ ಮುಂದೆ ಮೀಸಲಾತಿ ವಿಚಾರದಲ್ಲಿ ಗಲಾಟೆ ಎಬ್ಬಿಸಿದ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದೆ.

ಪುನೀತ್ ನಾಯ್ಕ , ಕುಮಾರನಾಯ್ಕ , ರಾಘವೇಂದ್ರ ನಾಯ್ಕ ಎಂಬವರನ್ನು ಬಂಧಿಸಲಾಗಿದೆ. ಮೂವರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಶಿಕಾರಿಪುರದಲ್ಲಿ ಪರಿಸ್ಥಿತಿ ಸದ್ಯ ಶಾಂತವಾಗಿದ್ದು, ಭದ್ರತೆಗಾಗಿ ಹೆಚ್ಚುವರಿ ಕೆಎಸ್​ಆರ್​ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಘಟನೆಗೆ ಸಂಬಂಧಿಸಿ ಹಲವರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ. ಕಲ್ಲು ತೂರಿ ಗಲಭೆಗೆ ಕಾರಣರಾದವರನ್ನು ಪೊಲೀಸರು ಹುಡುಕುತ್ತಿದ್ದಾರೆ.

ಘಟನೆಯಲ್ಲಿ ಐವರು ಪೊಲೀಸರಿಗೆ ಗಾಯಗಳಾಗಿವೆ. ಇನ್​ಸ್ಪೆಕ್ಟರ್​ ರುದ್ರೇಶ್, ಲಕ್ಷ್ಮಣ್, ಕಾಂತರಾಜ್​, ಶಂಕರ್​ಗೌಡ ಸೇರಿದಂತೆ ಐವರಿಗೆ ಗಾಯವಾಗಿದೆ. ಇಬ್ಬರ ತಲೆಗೆ ಗಾಯವಾಗಿದ್ದು, ಶಿವಮೊಗ್ಗದ ಮೆಗ್ಗಾನ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದವರಿಗೆ ಶಿಕಾರಿಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ಗಲಭೆ ಶಂಕಿತರ ಬಂಧನ ಖಂಡಿಸಿ ಶಿವಮೊಗ್ಗದಲ್ಲಿ ಬಂಜಾರ ಸಮುದಾಯದವರು ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಎದುರು ರಾತ್ರಿ ಬಂಜಾರ ಸಮುದಾಯದ ಕೆಲವರು ಪ್ರತಿಭಟನೆ ನಡೆಸಿ, ಬಂಧಿತರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ ವಿರುದ್ಧ ಧಿಕ್ಕಾರ ಕೂಗಲಾಗಿದೆ. ʼಮೀಸಲಾತಿ ಭಿಕ್ಷೆಯಲ್ಲ, ನಮ್ಮ ಹಕ್ಕುʼ ಎಂದು ಇವರು ಘೋಷಿಸಿದ್ದಾರೆ.

ಇದನ್ನೂ ಓದಿ: SC ST Reservation: ಶಿಕಾರಿಪುರದಲ್ಲಿ ಭುಗಿಲೆದ್ದ ಎಸ್‌ಸಿ-ಎಸ್‌ಟಿ ಮೀಸಲಾತಿ ಹೋರಾಟ: ಬಿಎಸ್‌ವೈ ಮನೆ ಮೇಲೆ ಕಲ್ಲು, ಚಪ್ಪಲಿ ತೂರಾಟ

Exit mobile version