ಬೆಂಗಳೂರು: ಎಸ್‌ಸಿ-ಎಸ್‌ಟಿ ಸಮುದಾಯದವರಿಗೆ ಮೀಸಲಾತಿಯಲ್ಲಿ (SC-ST Reservation) ಒಳಮೀಸಲಾತಿ ಕಲ್ಪಿಸಿರುವ ಕ್ರಮವನ್ನು ಪ್ರಶ್ನಿಸಿ ಬಂಜಾರ ಸಮುದಾಯದವರು ರಾಜ್ಯದ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಶುಕ್ರವಾರವೂ (ಮಾ. 31) ಪ್ರತಿಭಟನೆ ಮುಂದುವರಿದಿದ್ದು, ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ಹಾಗೂ ಕಲಬುರಗಿಯಲ್ಲಿ ಬಂಜಾರ ಸಮುದಾಯದವರು ಧರಣಿ ನಡೆಸಿದ್ದಾರೆ. ಇನ್ನು ಈ ಬಗ್ಗೆ ಬಾಗಲಕೋಟೆಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ ನೀಡಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮೀಸಲಾತಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. ಕೊಪ್ಪಳದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಮಾತನಾಡಿ, ಈ ನಿರ್ಧಾರದಿಂದ ಬಿಜೆಪಿಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಹೇಳಿದ್ದಾರೆ.
ವಿಜಯನಗರದಲ್ಲಿ ಆಕ್ರೋಶ
ವಿಜಯನಗರ: ಒಳ ಮೀಸಲಾತಿ ಜಾರಿ ವಿರೋಧಿಸಿ ಬಂಜಾರ ಮತ್ತು ಇತರೆ ಸಮುದಾಯದಿಂದ ಹೂವಿನಹಡಗಲಿಯ ಶಾಸ್ತ್ರಿ ವೃತ್ತದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆಯನ್ನು ನಡೆಸಲಾಯಿತು. ಸರ್ಕಾರ ನಮ್ಮ ಮೀಸಲಾತಿಯನ್ನು ಕಸಿದುಕೊಂಡಿದೆ. ಬಂಜಾರ ಸಮಾಜ ಸೇರಿದಂತೆ ಇತರೆ ಸಮುದಾಯಗಳ ಅಭಿವೃದ್ಧಿಗೆ ಸರ್ಕಾರ ಅಡ್ಡಿ ಮಾಡುತ್ತಿದೆ. ಸಂವಿಧಾನವನ್ನು ಧಿಕ್ಕರಿಸಿ ಮೀಸಲಾತಿಯನ್ನು ಜಾರಿ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: SSLC Examination : ತಮಿಳುನಾಡು ಮೂಲದ ವಿದ್ಯಾರ್ಥಿಗೆ ಕನ್ನಡ ಪರೀಕ್ಷೆಯಿಂದ ವಿನಾಯಿತಿ ನೀಡಿದ ಹೈಕೋರ್ಟ್
ಕಲಬುರಗಿಯಲ್ಲಿ ವಿರೋಧ
ಒಳ ಮೀಸಲಾತಿ ವಿರೋಧಿಸಿ ಬಂಜಾರ ಸಮುದಾಯದಿಂದ ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆದಿದ್ದು, ಮೀಸಲಾತಿ ಪರ ಇರುವ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ ಕೂಗಲಾಗಿದೆ. ಅಲ್ಲದೆ, ಬಿಜೆಪಿ ವಿರುದ್ಧ ಬೋರ್ಡ್ ಪ್ರದರ್ಶಿಸುವ ಮೂಲಕ ಆಕ್ರೋಶವನ್ನು ಹೊರಹಾಕಲಾಗಿದೆ. ಮೀಸಲಾತಿ ನಮ್ಮ ಜನ್ಮ ಸಿದ್ಧ ಹಕ್ಕು ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು. ಈ ವೇಳೆ ಬಂಜಾರ ಸಮುದಾಯ ಕೆಲವು ಸ್ಚಾಮೀಜಿಗಳು ಸಹ ಭಾಗಿಯಾಗಿದ್ದರು.
ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮೀಸಲಾತಿ ನಿರ್ಧಾರ: ಶೆಟ್ಟರ್
ಬಾಗಲಕೋಟೆ: ಮೀಸಲಾತಿ ಸಮಸ್ಯೆ ಇಂದು ನಿನ್ನೆಯದಲ್ಲ. ಬಹಳ ವರ್ಷದಿಂದ ಇದೆ. ಇದೇ ವೇಲೆ ಕೆಲವು ಹೊಸ ವರ್ಗಗಳು ಸಹ ತಮಗೆ ಮೀಸಲಾತಿ ಕೊಡಬೇಕೆಂಬ ಬೇಡಿಕೆ ಇಟ್ಟಿದ್ದವು. ಇನ್ನು ಒಳಮೀಸಲಾತಿ ಬಗ್ಗೆ 20 ವರ್ಷದಿಂದ ಹೋರಾಟವಿದೆ. ರಾಜ್ಯ ಆಳಿದ ಮುಖ್ಯಮಂತ್ರಿಗಳ ಸಹಿತ ಯಾವ ಪಕ್ಷದವರೂ ಈ ರೀತಿಯ ಸಾಹಸ ಮಾಡಿರಲಿಲ್ಲ. ಯಥಾಸ್ಥಿತಿ ಕಾಯ್ದುಕೊಂಡು ಹೋಗುವ ಪ್ರಯತ್ನ ಮಾಡಿದ್ದರು. ಆದರೆ, ನಮ್ಮ ಪಕ್ಷ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈಗ ಗಟ್ಟಿ ನಿರ್ಧಾರ ಮಾಡಿ ಜರಿಗೆ ತಂದಿದ್ದಾರೆ. ಕ್ಯಾಬಿನೆಟ್ ಸಬ್ ಕಮಿಟಿ ಮಾಡಿ ಸಚಿವ ಮಾಧುಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಸಲ್ಲಿಕೆಯಾದ ವರದಿ ಆಧಾರದ ಮೇಲೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮೀಸಲಾತಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ ನೀಡಿದರು.
ಸರ್ಕಾರದ ಈ ನಿರ್ಧಾರವನ್ನು ಎಲ್ಲರೂ ಸ್ವಾಗತ ಮಾಡಿದ್ದಾರೆ. ಕೆಲವೊಂದು ತಪ್ಪು ತಿಳಿವಳಿಕೆ ಹಾಗೂ ತಪ್ಪು ಸಂವಹನದಿಂದ ಗೊಂದಲ ಸೃಷ್ಟಿಯಾಗಿದೆ. ಜನರು ಬೀದಿಗಿಳಿದು ಹೋರಾಟ ಮಾಡುವ ಬದಲು ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಬಹುದು. ಸಂಬಂಧಪಟ್ಟ ಸಚಿವರ ಜತೆ ಸಮಾಲೋಚನೆ ನಡೆಸಿದರೆ ಸಮಸ್ಯೆಗೆ ಪರಿಹಾರ ಹುಡುಕುವುದಕ್ಕೆ ಸಾಧ್ಯವಿದೆ. ಎಂದು ಹೇಳಿದರು.
ಮೀಸಲಾತಿಯಿಂದ ಬಿಜೆಪಿಗೆ ಬೆಂಬಲ ವ್ಯಕ್ತವಾಗಿದೆ: ಭಗವಂತ ಖೂಬಾ
ಕೊಪ್ಪಳ: ರಾಜ್ಯ ಸರ್ಕಾರ ಘೋಷಿಸಿದ ಮೀಸಲಾತಿಯಿಂದ ಬಿಜೆಪಿಗೆ ಬೆಂಬಲ ವ್ಯಕ್ತವಾಗಿದೆ. ತುಳಿತಕ್ಕೊಳಗಾದ ಸಮಾಜದವರು ಸಿಎಂ ಬಸವರಾಜ ಬೊಮ್ಮಾಯಿ ಪ್ರಕಟಿಸಿರುವ ಮೀಸಲಾತಿ ನೀತಿಯಿಂದ ಸಂತೋಷಪಟ್ಟಿದ್ದಾರೆ. ಇದರ ಉತ್ತಮವಾದ ಪರಿಣಾಮ ಚುನಾವಣೆ ಪರವಾಗುತ್ತದೆ. ತುಳಿತಕ್ಕೊಳಗಾದ ಸಮುದಾಯದ ಬೇಡಿಕೆ ಈಡೇರಿಸಿದಾಗ ಆ ಸಮಾಜ ಕೃತಜ್ಞತೆ ಸಲ್ಲಿಸುವುದು ಸಹಜ. ವಂಚಿತ ಸಮಾಜಕ್ಕೆ ನ್ಯಾಯ ಒದಗಿಸಿದ್ದೇವೆ. ಇದು ಬಿಜೆಪಿಗೆ ಧನಾತ್ಮಕವಾಗಲಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.
ಮಾಧ್ಯಮದವರೊಂದಿಗೆ ಪ್ರತಿಕ್ರಿಯೆ ನೀಡಿರುವ ಅವರು, 2ಬಿ ಮೀಸಲಾತಿ ರದ್ದತಿ ವಿಚಾರ ಸರಿಯಿದೆ. ಮುಸ್ಲಿಂರಿಗೆ ಶೇಕಡಾ 4ರಷ್ಟು ಮೀಸಲಾತಿ ನೀಡಿದ್ದು ಅಸಂವಿಧಾನಿಕ. ಅದನ್ನು ತೆಗೆದು ಇಡಬ್ಲ್ಯೂಎಸ್‌ಗೆ ಸೇರಿಸಲಾಗಿದೆ. ಮುಸ್ಲಿಂ ಜನಾಂಗದವರಿಗೆ ಮತ್ತಷ್ಟು ಅವಕಾಶವಿರಲಿದೆ ಎಂದು ಸ್ಪಷ್ಟನೆ ನೀಡಿದರು.