ಬೆಂಗಳೂರು: ಬಿಸಿಯೂಟ ಯೋಜನೆಯಡಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವವರಿಗೆ ಹೈಕೋರ್ಟ್‌ನ ಈ ತೀರ್ಪು ಶಾಕ್ ನೀಡಿದೆ. ಅಡುಗೆ ತಯಾರಕರು ಕನಿಷ್ಠ ವೇತನ ಕಾಯ್ದೆಯಡಿ ವೇತನ ಪಡೆಯಲು ಅರ್ಹರಾಗಿಲ್ಲ ಎಂದು ಕೋರ್ಟ್ ಗುರುವಾರ ಹೇಳಿದೆ.
ಕನಿಷ್ಠ ವೇತನ ಕಾಯ್ದೆ ಅಡಿ ಸೂಕ್ತ ವೇತನ ನಿಗದಿಪಡಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಮಹತ್ವದ ಆದೇಶ ನೀಡಿದ್ದು, ಅಡುಗೆ ತಯಾರಕರು ಕನಿಷ್ಠ ವೇತನ ಕಾಯ್ದೆಯಡಿ ವೇತನ ಪಡೆಯಲು ಅರ್ಹರಲ್ಲ ಎಂದಿದೆ.
ಸಾಮಾಜಿಕ ಕಾರ್ಯಕರ್ತರಾದ ಎಂ.ಎಸ್. ನೌಹೇರಾ ಶೇಖ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ಅಧಿಸೂಚಿತ ಉದ್ಯೋಗಗಳಿಗೆ ಮಾತ್ರ ಕಾಯ್ದೆಯ ನಿಯಮಗಳು ಅನ್ವಯಿಸುತ್ತವೆ. ಬಿಸಿಯೂಟ ಯೋಜನೆಯಡಿಯಲ್ಲಿ ದಿನಕ್ಕೆ ನಾಲ್ಕು ಗಂಟೆಯಷ್ಟು ಸೀಮಿತ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಉದ್ಯೋಗ ಮಾಡುತ್ತಿರುವ ಮುಖ್ಯ ಅಡುಗೆ ತಯಾರಕರು ಮತ್ತು ಅಡುಗೆ ತಯಾರಕರಿಗೆ ಕನಿಷ್ಠ ವೇತನ ಕಾಯ್ದೆಯ ನಿಯಮಗಳು ಅನ್ವಯಿಸುವುದಿಲ್ಲ ಎಂದು ಕೋರ್ಟ್ ತೀರ್ಪಿನಲ್ಲಿ ಹೇಳಿದೆ.
ಕರ್ನಾಟಕ ಕನಿಷ್ಠ ವೇತನ ನಿಯಮಗಳ ಪ್ರಕಾರ ದಿನದ ಕೆಲಸದ ಅವಧಿ 9 ಗಂಟೆಯಾಗಿರಬೇಕು. ಈ ಮಾನದಂಡ ಮುಖ್ಯ ಅಡುಗೆ ತಯಾರಕರ ಮತ್ತು ಅಡುಗೆ ತಯಾರಕರ ವಿಚಾರದಲ್ಲಿ ಪಾಲನೆಯಾಗಿಲ್ಲ. ಹಾಗಾಗಿ, ಅವರಿಗೆ ಕನಿಷ್ಠ ವೇತನ ನೀಡಬೇಕೆಂಬ ವಿಚಾರವು ಕಾಯ್ದೆಯ ನಿಮಗಳ ವ್ಯಾಪ್ತಿಗೆ ಬರುವುದಿಲ್ಲ. ಕನಿಷ್ಠ ವೇತನ ಕಾಯ್ದೆಯಡಿ ಸೂಕ್ತ ಕನಿಷ್ಠ ವೇತನ ವಿತರಿಸಲು ಸರ್ಕಾರಕ್ಕೆ ನಿರ್ದೇಶಿಸಲು ಸಾಧ್ಯವಿಲ್ಲ ಎಂದು ಈ ತೀರ್ಪಿನಲ್ಲಿ ಹೇಳಲಾಗಿದೆ.
ಇದನ್ನೂ ಓದಿ| ದಾಂಪತ್ಯ ಕಲಹ; ಪತ್ನಿ, ಮಕ್ಕಳನ್ನು ಬಿಟ್ಟು ಮನೆಯಿಂದ ಹೊರಟುಹೋಗಿ ಎಂದು ಪತಿಗೆ ಸೂಚಿಸಿದ ಹೈಕೋರ್ಟ್