ಹೊಸಪೇಟೆ (ವಿಜಯನಗರ): ಶಾಲೆಯಲ್ಲಿ ಯಾವುದಾದರೂ ಸಮಸ್ಯೆಗಳು (School Problems) ಎದುರಾದರೆ ಮಕ್ಕಳು ಮುಂದೆ ಬಂದು ಸಮಸ್ಯೆಯನ್ನು ಹೇಳುವುದು ತುಂಬಾನೇ ಕಡಿಮೆ. ಆದರೆ, ವಿಜಯನಗರ ಜಿಲ್ಲೆಯ ಮಕ್ಕಳು ತಮ್ಮ ಶಾಲೆಯಲ್ಲಿರುವ ಸಮಸ್ಯೆಗಳನ್ನು ಬ್ಲ್ಯಾಕ್ ಬೋರ್ಡ್ ಮೇಲೆ ಬರೆದು ವಿಜಯನಗರ ಜಿಲ್ಲಾಧಿಕಾರಿ ಡಾ. ಅನಿರುದ್ಧ್ ಶ್ರವಣ್ ಗಮನ ಸೆಳೆದಿದ್ದಾರೆ.
ವಿದ್ಯಾರ್ಥಿಗಳಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಒಂದು ವೇದಿಕೆಯನ್ನು ಖುದ್ದು ಜಿಲ್ಲಾಧಿಕಾರಿ ಅನಿರುದ್ಧ್ ಪಿ.ಶ್ರವಣ್ ಕಲ್ಪಿಸಿಕೊಟ್ಟಿದ್ದರು. ಈ ಮೂಲಕ ಶಾಲಾ ಶಿಕ್ಷಣದ ಗುಣಮಟ್ಟದ ಪರಿಶೀಲನೆ ಜತೆಗೆ ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಮಾಡಿದ್ದಾರೆ.
ಗಾದಿಗನೂರಿನ ಗ್ರಾಮದಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯ ಮೂಲ ಸೌಕರ್ಯಗಳ ಪರಿಶೀಲನೆಗೆ ಡಿಸಿ ಶ್ರವಣ್ ಭೇಟಿ ನೀಡಿದ್ದರು. ಈ ವೇಳೆ ವಿದ್ಯಾರ್ಥಿಗಳು ಶಾಲೆಯ ಬ್ಲ್ಯಾಕ್ ಬೋರ್ಡ್‌ನಲ್ಲಿ ತಮ್ಮ ಸಮಸ್ಯೆಗಳನ್ನು ಬರೆಯುವಂತೆ ಹೇಳಿದ್ದಾರೆ. ವಿದ್ಯಾರ್ಥಿಗಳು ಸಮಸ್ಯೆಗಳ ಸರಮಾಲೆಯನ್ನೇ ಬರೆದಿದ್ದಾರೆ.
ಅವುಗಳಲ್ಲಿ ಪ್ರಮುಖವಾಗಿ ನೀರಿನ ಸೌಲಭ್ಯ, ಶೌಚಾಲಯ ಸಮಸ್ಯೆ, ಕೊಠಡಿಗಳು, ಕೂರಲು ಬೆಂಚ್‌ಗಳ ಕೊರತೆ ಇರುವುದರ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಶಾಲೆಯಲ್ಲಿ ಮಳೆ ಬಂದಾಗ ಆಟದ ಮೈದಾನದಲ್ಲಿ ನೀರು ನಿಲ್ಲುವುದು, ಶಾಲಾ ಕೊಠಡಿಗಳಲ್ಲಿ ಸೋರಿಕೆ ಆಗುವುದುನ್ನು ಸಹ ಮಕ್ಕಳು ಉಲ್ಲೇಖಿಸಿದ್ದಾರೆ.
ಮಕ್ಕಳಿಗೆ ಜಿಲ್ಲಾಧಿಕಾರಿ ಪಾಠ
ತಮ್ಮ ಸಮಸ್ಯೆಗಳನ್ನು ಹೇಳುವುದಕ್ಕಿಂತಲೂ ಬರೆದು ತೋರಿಸಿ ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ಜತೆಗೆ ಇದೇ ವೇಳೆ ವಿದ್ಯಾರ್ಥಿಗಳಿಗೆ ಗಣಿತ, ಇಂಗ್ಲಿಷ್ ಪಾಠ ಮಾಡಿದ್ದಾರೆ. ಬಳಿಕ ಜಿಲ್ಲಾಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ವಿದ್ಯಾರ್ಥಿಗಳ ಬಳಿ ಉತ್ತರಗಳನ್ನು ಕೇಳಿ ಪ್ರಶಂಸಿಸಿದ್ದಾರೆ.
ಗಾದಿಗನೂರಿನ ಕೆಪಿಎಸ್‌ನಲ್ಲಿ ಪ್ರಾಥಮಿಕ ಶಾಲೆಯಲ್ಲಿ 954 ವಿದ್ಯಾರ್ಥಿಗಳಿದ್ದು, 27 ಕೊಠಡಿಗಳಿವೆ. ಪ್ರೌಢಶಾಲೆಯಲ್ಲಿ 350 ವಿದ್ಯಾರ್ಥಿಗಳಿಗೆ 9 ಕೊಠಡಿಗಳು ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ 87 ವಿದ್ಯಾರ್ಥಿಗಳಿದ್ದು, 4 ಕೊಠಡಿಗಳಿವೆ. ಒಟ್ಟು 1391 ವಿದ್ಯಾರ್ಥಿಗಳಿಗೆ 40 ಕೊಠಡಿಗಳಿವೆ. ಇವುಗಳಲ್ಲಿ ಬಹುತೇಕ ಕೊಠಡಿಗಳು ಸೋರುತ್ತಿದ್ದು, ಇವುಗಳ ದುರಸ್ತಿ ಕಾರ್ಯ ಆಗಬೇಕಿದೆ. ಆಟದ ಸಾಮಗ್ರಿಗಳು ಬೇಕಿವೆ ಎಂದು ಖುದ್ದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಮಕ್ಕಳ ಸಮಸ್ಯೆಗಳ ಪಟ್ಟಿಯನ್ನು ಫೋಟೋ ಕ್ಲಿಕ್ಕಿಸಿಕೊಂಡು ತಮ್ಮ ಅಧಿಕೃತ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಒಂದು ವಾರದಲ್ಲಿ ಶಾಲೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಯೋಜನೆ ತಯಾರಿಗೆ ಸೂಚಿಸುತ್ತೇನೆ. ಸದ್ಯಕ್ಕೆ ತುರ್ತಾಗಿ ಶಾಲೆಗೆ ಶೌಚಾಲಯ ದುರಸ್ತಿ, ಕುಡಿಯುವ ನೀರಿನ ವ್ಯವಸ್ಥೆ, ಎರಡು ಶಾಲಾ ಕೊಠಡಿ ಹಾಗೂ ಅವ್ಯವಸ್ಥೆ ಕೊಠಡಿಗಳ ದುರಸ್ತಿ ಮಾಡಿಸಬೇಕಿದೆ. ಶೀಘ್ರ ಕ್ರಮ ಕೈಗೊಳ್ಳಲಾಗುವುದು.
| ಅನಿರುದ್ಧ್ ಪಿ.ಶ್ರವಣ್, ಜಿಲ್ಲಾಧಿಕಾರಿ, ವಿಜಯನಗರ
ಶಾಲೆಯ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಶಾಲೆಗೆ ಭೇಟಿ ನೀಡಿದ ವೇಳೆ ವಿದ್ಯಾರ್ಥಿಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಶಾಲಾ ಕೊಠಡಿಗಳ ಸಮಸ್ಯೆ, ಕುಡಿಯುವ ನೀರು, ಶೌಚಾಲಯ, ಆಟದ ಮೈದಾನದ ಸಮಸ್ಯೆಗಳನ್ನು ಶೀಘ್ರ ಪರಿಹರಿಸಲಾಗುದು ಎಂದು ಭರವಸೆ ನೀಡಿದ್ದಾರೆ. ಪಿಯು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಪೂರೈಕೆ ಮಾಡುವುದಾಗಿ ತಿಳಿಸಿದ್ದಾರೆ.
| ರಮಾ ಕರಣಂ, ಪ್ರಾಂಶುಪಾಲೆ, ಕರ್ನಾಟಕ ಪಬ್ಲಿಕ್ ಸ್ಕೂಲ್
ಇದನ್ನೂ ಓದಿ | Student Missing | ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ನಿಗೂಢ ನಾಪತ್ತೆ: 25 ದಿನದ ಬಳಿಕ ಪ್ರಕರಣ ಬೆಳಕಿಗೆ