ಉಡುಪಿ: ಅಡ್ಡ ಬಂದ ಹಿನ್ನೆಲೆಯಲ್ಲಿ ಬ್ರೇಕ್ ಹಾಕಿದ ಪರಿಣಾಮವಾಗಿ ಬೈಕ್ ಸ್ಕಿಡ್ ಆಗಿ ಬಿದ್ದು ಶಿಕ್ಷಕಿಯೊಬ್ಬರು ಮೃತಪಟ್ಟಿದ್ದಾರೆ. ಕುಂದಾಪುರದ ಸಮೀಪದ ವಂಡ್ಸೆ ಚಿತ್ತೂರು ಬಳಿ ಅಪಘಾತ ನಡೆದಿದೆ.
ಹೆಮ್ಮಾಡಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಅಂಬಿಕಾ ಮೃತಪಟ್ಟವರು. ಅವರು ತಮ್ಮ ಪತಿ ಶ್ರೀಕಾಂತ್ ಅವರ ಜತೆಗೆ ಬೈಕ್ನಲ್ಲಿ ತೆರಳುತ್ತಿದ್ದಾಗ ಅಚಾನಕ್ಕಾಗಿ ದನ ಅಡ್ಡ ಬಂದಿದೆ. ಈ ವೇಳೆ ದನಕ್ಕೆ ಡಿಕ್ಕಿ ಆಗುವುದನ್ನು ತಡೆಯಲು ಬ್ರೇಕ್ ಹಾಕಿದರು. ಈ ವೇಳೆ ಬೈಕ್ ಸ್ಕಿಡ್ ಆಯಿತು. ಬೈಕ್ ರಸ್ತೆಗೆ ಉರುಳಿ ಬಿದ್ದಾಗ ಅಂಬಿಕಾ ಅವರಿಗೆ ತೀವ್ರ ಗಾಯಗಳಾಗಿವೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಗಾಯದ ತೀವ್ರತೆ ಜಾಸ್ತಿ ಇದ್ದುದರಿಂದ ಅವರು ಪ್ರಾಣವನ್ನೇ ಕಳೆದುಕೊಂಡರು.
ಶ್ರೀಕಾಂತ್ ಮತ್ತು ಅಂಬಿಕಾ ದಂಪತಿಗೆ ಒಂದೂವರೆ ವರ್ಷದ ಒಂದು ಹೆಣ್ಣು ಮಗುವಿದೆ. ಅವರು ಸೆಳೆಕೋಡಿನಲ್ಲಿ ಮನೆ ಹೊಂದಿದ್ದು ಅಲ್ಲಿಂದ ಹೆಮ್ಮಾಡಿ ಶಾಲೆಗೆ ಹೋಗುತ್ತಿದ್ದರು. ಶಿಕ್ಷಕಿಯ ಈ ದುರಂತ ಮರಣ ಪ್ರದೇಶದಲ್ಲಿ ಭಾರಿ ನೋವು ತರಿಸಿದ್ದು ಶಾಲೆಯ ಮಕ್ಕಳಂತೂ ಕಣ್ಣೀರುಗರೆಯುತ್ತಿರುವ ದೃಶ್ಯ ಕಂಡುಬಂತು. ಅಂಬಿಕಾ ಅವರು ಮಕ್ಕಳಿಗೆ ಪ್ರಿಯವಾದ ಶಿಕ್ಷಕಿಯಾಗಿದ್ದರು.
ಇದನ್ನೂ ಓದಿ| ಭೀಕರ ಅಪಘಾತ ಯೋಧನ ಪತ್ನಿ, ಮಗು ಸ್ಥಳದಲ್ಲೇ ಸಾವು