Site icon Vistara News

Bengaluru Traffic | ಸಂಚಾರ ಕಿರಿಕಿರಿಗೆ ಶಾಲೆಗಳೇ ಕಾರಣ; ಇದು ಟ್ರಾಫಿಕ್‌ ಪೊಲೀಸ್‌ ರಿಪೋರ್ಟ್‌!

ನಗರದಲ್ಲಿ ಟ್ರಾಫಿಕ್

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಟ್ರಾಫಿಕ್‌ಗಳು (Bengaluru Traffic) ಹೆಚ್ಚಾಗಲು ಶಾಲೆಗಳೇ ಪ್ರಮುಖ ಕಾರಣ. ಆದರೆ, ಈ ಬಗ್ಗೆ ನಿಯಮಗಳನ್ನು ಪಾಲಿಸಲು ಸೂಚಿಸಿದರೆ ಶಾಲಾ ಆಡಳಿತ ಮಂಡಳಿಯವರು ಕ್ಯಾರೇ ಅನ್ನುತ್ತಿಲ್ಲ!

ರಾಜಧಾನಿಯಲ್ಲಿ ಅತಿ ಹೆಚ್ಚು ಟ್ರಾಫಿಕ್‌ ಸಮಸ್ಯೆ ಆಗುತ್ತಿರಲು ಕಾರಣವನ್ನು ಕಂಡುಕೊಳ್ಳಲು ಸಂಚಾರಿ ಪೊಲೀಸರು ಕೆಲವು ಪ್ರದೇಶಗಳಲ್ಲಿ ಅಧ್ಯಯನ ನಡೆಸಿದ್ದು, ಶಾಲೆಗಳಿಂದಲೂ ಟ್ರಾಫಿಕ್‌ ಜಾಮ್‌ ಆಗುತ್ತಿದೆ ಎಂಬ ಅಂಶವನ್ನು ಕಂಡುಕೊಂಡಿದ್ದಾರೆ. ಈ ಮಾಹಿತಿಯನ್ನು ಹಿರಿಯ ಅಧಿಕಾರಿಗಳ ಜತೆ ಹಂಚಿಕೊಂಡಿದ್ದು, ಈಗಾಗಲೇ ಶಾಲಾ ಆಡಳಿತ ಮಂಡಳಿಗಳಿಗೆ ನೋಟಿಸ್‌ ನೀಡಿದ್ದಾರೆ.

ಶಾಲೆ ಬಿಡುವ ವೇಳೆ ಹಾಗೂ ಶುರುವಾಗುವ ಸಮಯದಲ್ಲಿ ಅತಿಹೆಚ್ಚು ಟ್ರಾಫಿಕ್‌ ಜಾಮ್‌ ಆಗುತ್ತಿದೆ. ಏಕೆಂದರೆ ಈ ಎರಡೂ ವೇಳೆಯಲ್ಲಿ 10-15 ನಿಮಿಷ ಮೊದಲೇ ಪಾಲಕರು ರಸ್ತೆಯಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿಕೊಂಡಿರುತ್ತಾರೆ. ಹೀಗಾಗಿ ರಸ್ತೆಯುದ್ದಕ್ಕೂ ವಾಹನಗಳ ಸಾಲು ನಿಂತು ಟ್ರಾಫಿಕ್‌ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಸಂಚಾರಿ ಪೊಲೀಸರು ವರದಿಯಲ್ಲಿ ತಿಳಿಸಿದ್ದಾರೆ.

ಶಾಲೆಗಳಿಗೆ ಷರತ್ತುಬದ್ಧ ನೋಟಿಸ್‌- ಇನ್ನೂ ಉತ್ತರ ಇಲ್ಲ

ಟ್ರಾಫಿಕ್‌ ಸಮಸ್ಯೆ ಕುರಿತು ಹಿರಿಯ ಅಧಿಕಾರಿಗಳ ಜತೆ ನಡೆದ ಸಭೆಯಲ್ಲಿ ಸಂಚಾರಿ ಪೊಲೀಸರು ನೈಜ ಕಾರಣ ಸಹಿತ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅವರ ವರದಿ ಮೇರೆಗೆ ನಗರದ ಎಲ್ಲ ಶಾಲೆಗಳಿಗೆ ಪೊಲೀಸರಿಂದ ನೋಟಿಸ್‌ ಜಾರಿ ಮಾಡಲಾಗಿದೆ. ನೋಟಿಸ್‌ ಜತೆ ಕೆಲ ಷರತ್ತುಗಳನ್ನೂ ಸಂಚಾರಿ ಪೊಲೀಸರು ನೀಡಿದ್ದಾರೆ. ಆದರೆ, ನೋಟಿಸ್‌ ನೀಡಿ 20 ದಿನ ಕಳೆದರೂ ಹಲವು ಶಾಲೆಗಳಲ್ಲಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆಗಳು ದೊರೆಯುತ್ತಿಲ್ಲ. ಆಡಳಿತ ಮಂಡಳಿಗಳು ಈ ಬಗ್ಗೆ ಗಮನ ಕೊಡುತ್ತಿಲ್ಲ ಎಂದು ಸಂಚಾರಿ ಪೊಲೀಸರು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ | ತಪ್ಪು ಮಾಡದಿದ್ದರೂ ಬೀಳುತ್ತೆ ಟ್ರಾಫಿಕ್‌ ದಂಡ !: ಪಾರಾಗಲು ಇಲ್ಲಿವೆ 6 ಸೂತ್ರಗಳು

ನೋಟಿಸ್‌ನಲ್ಲಿ ಏನಿದೆ?

  1. ಸಂಸ್ಥೆಗೆ ಸಂಬಂಧಿಸಿದ ವಾಹನಗಳು ಎಷ್ಟಿದೆ? ಇರುವ ವಾಹನಗಳಿಗೆ ಪಾರ್ಕಿಂಗ್‌ ಕುರಿತಾಗಿ ಕೈಗೊಂಡಿರುವ ಕ್ರಮಗಳು ಯಾವುದು?
  2. ಶಿಕ್ಷಣ ಸಂಸ್ಥೆಗಳಿಗೆ ಬರುವ ಖಾಸಗಿ ವಾಹನಗಳ ಸಂಖ್ಯೆ ಎಷ್ಟು? ಆ ವಾಹನಗಳು ನಿಲ್ಲುವುದಕ್ಕೆ ಪಾರ್ಕಿಂಗ್‌ ವ್ಯವಸ್ಥೆ ಇದೆಯೇ ಅಥವಾ ಇಲ್ಲವೇ?
  3. ಖಾಸಗಿ ಹಾಗೂ ಶಾಲಾ ವಾಹನದಲ್ಲಿ ಶಾಲಾ/ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಎಷ್ಟು?
  4. ಶಿಕ್ಷಣ ಸಂಸ್ಥೆಗೆ ಬರುವ ವಿದ್ಯಾರ್ಥಿಗಳ ಪೋಷಕರು ವಿದ್ಯಾರ್ಥಿಗಳನ್ನು ರಸ್ತೆಯಲ್ಲಿ ಬಿಟ್ಟು ಹೋಗುತ್ತಾರೋ? ಅಥವಾ ಶಾಲಾ ಕಾಲೇಜು ಆವರಣದ ಪಾರ್ಕಿಂಗ್‌ನಲ್ಲಿ ಬಿಟ್ಟು ಹೋಗುತ್ತಾರೋ?
  5. ಶಾಲಾ, ಕಾಲೇಜು ವಾಹನದಲ್ಲಿ ಚಾಲಕರ ಜತೆ ಸಹಾಯಕರು ಇದ್ದಾರೆಯೇ? ಅಥವಾ ಇಲ್ಲವೇ?
  6. ಶಿಕ್ಷಕರು‌ ಹಾಗೂ ಸಿಬ್ಬಂದಿ ಶಾಲಾ/ಕಾಲೇಜಿಗೆ ಹೇಗೆ ಬರುತ್ತಾರೆ? ಸ್ವಂತ ವಾಹನದಲ್ಲಿ ಬಂದರೆ ಅವರಿಗೆ ವಾಹನ ನಿಲ್ಲಿಸುವುದಕ್ಕೆ ವ್ಯವಸ್ಥೆ ಏನು ಮಾಡಲಾಗಿದೆ?
  7. ಶಾಲಾ ಮಕ್ಕಳು ರಸ್ತೆ ದಾಟಿಸಲು ಸೆಕ್ಯುರಿಟಿ ಗಾರ್ಡ್‌ಗಳ ನೇಮಕ‌ ಇದೆಯೇ, ಇಲ್ಲವೇ..?
  8. ಶಾಲಾ ಕಟ್ಟಡದ ಬಿಬಿಎಂಪಿ ಅನುಮತಿ‌ ಪತ್ರ ಹಾಗೂ ಪಾರ್ಕಿಂಗ್ ಜಾಗದ ವಿವರದ ದಾಖಲೆ ಇದೆಯಾ?

ಹೀಗೆ ಎಂಟು ಪ್ರಶ್ನೆಗಳನ್ನು ಕಳೆದ ತಿಂಗಳೇ ಪೊಲೀಸರು ಕೇಳಿ ನೋಟಿಸ್‌ ನೀಡಿದ್ದರು. ಆದರೆ, ಇದುವರೆಗೂ ಕೆಲ ಶಾಲೆಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದೇ ರೀತಿ ಮುಂದುವರಿದರೆ ಕಾನೂನು ಅಡಿಯಲ್ಲಿ ಕ್ರಮ ತೆಗೆದುಕೊಂಡು ನೋಟಿಸ್‌ ನೀಡಲು ಸಂಚಾರಿ ಪೊಲೀಸರು ಚಿಂತನೆ ನಡೆಸಿದ್ದಾರೆ. ಅಲ್ಲದೆ, ಕೂಡಲೇ ಈ ಎಂಟು ಪ್ರಶ್ನೆಗಳಿಗೆ ಉತ್ತರವನ್ನು ನೀಡಬೇಕು ಎಂಬ ಎಚ್ಚರಿಕೆಯನ್ನೂ ಆಡಳಿತ ಮಂಡಳಿಗೆ ನೀಡಿದ್ದಾರೆ.

ಇದನ್ನೂ ಓದಿ : ಟ್ರಾಫಿಕ್‌ ಕಿರಿಕ್‌ | ಹೆಬ್ಬಾಳ ಜಂಕ್ಷನ್ ಬಳಿ ಇಂದಿನಿಂದ ಹೊಸ ರೂಲ್ಸ್

Exit mobile version