ಕೋಲಾರ: ಸರ್ಕಾರಿ ಶಾಲೆಯ ಗೇಟ್ ಕುಸಿದು ಇಬ್ಬರು ಪುಟಾಣಿ ಮಕ್ಕಳು ಗಾಯಗೊಂಡ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಬೀಡಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ. ನಾಲ್ಕು ವರ್ಷದ ಮಗು ನಂದನ್‌ನ ಬಲಗಾಲು ಮುರಿದಿದ್ದರೆ, ಮೂರು ವರ್ಷದ ಹೆಣ್ಣು ಮಗುವಿನ ತಲೆಗೆ ಗಾಯವಾಗಿದೆ.
ಬೀಡಗಾನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಎದುರು ಘಟನೆ ನಡೆದಿದೆ. ಈ ಮಕ್ಕಳು ಇನ್ನೂ ಶಾಲೆಗೆ ಸೇರ್ಪಡೆಯಾಗಿರಲಿಲ್ಲ. ಇತರ ಮಕ್ಕಳ ಜತೆಗೆ ಕುಳಿತು ಅವರು ಪಾಠ ಕೇಳುತ್ತಾ, ಆಟವಾಡುತ್ತಾ ಇದ್ದರು. ಈ ವೇಳೆ ಗೇಟ್ ಅವರ ಮೇಲೆ ಕುಸಿದು ಬಿದ್ದು ದುರಂತ ಸಂಭವಿಸಿದೆ.
ಒಂದು ತಿಂಗಳ ಹಿಂದಷ್ಟೇ ಕಾಂಪೌಂಡ್‌ಗೆ ಈ ಗೇಟ್ ಅಳವಡಿಸಲಾಗಿದ್ದು, ಅದನ್ನು ಗಟ್ಟಿಯಾಗಿ ಅಳವಡಿಸದೆ ಇರುವುದರಿಂದ ಅದು ಬಿದ್ದಿದೆ ಎಂದು ಹೇಳಲಾಗಿದೆ. ನರೇಗಾ ಕಾಮಗಾರಿಯಡಿ ಇದನ್ನು ನಿರ್ಮಿಸಲಾಗಿದ್ದು, ನರೇಗಾ ಯೋಜನೆ ಗುತ್ತಿಗೆದಾರರು ನಿರ್ಲಕ್ಷ್ಯದಿಂದ ಮಾಡಿದ ಕಾಮಗಾರಿ ಮಕ್ಕಳಿಗೆ ಸಮಸ್ಯೆ ಉಂಟು ಮಾಡಿದೆ ಎನ್ನಲಾಗುತ್ತಿದೆ.
ಸ್ಥಳಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವಂತೆ ಮಕ್ಕಳ ಪಾಲಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : Bengaluru Cylinder Blast: ಬೆಂಗಳೂರಿನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ; ಮಕ್ಕಳು ಸೇರಿ 10 ಜನರಿಗೆ ಗಂಭೀರ ಗಾಯ