ಬೆಂಗಳೂರು: ರಾಜ್ಯದ ಕೆಲವು ದೇವಾಲಯಗಳಲ್ಲಿ ದಲಿತರಿಗೆ ಪ್ರವೇಶ ನಿಷೇಧ ಇನ್ನೂ ಜೀವಂತವಾಗಿದೆ ಎಂಬ ಆತಂಕಕಾರಿ ಅಂಶದ ಮೇಲೆ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಮಿತಿ ಬೆಳಕು ಚೆಲ್ಲಿದೆ.
ವಿಸ್ತಾರ ನ್ಯೂಸ್‌ಗೆ ಈ ಬಗ್ಗೆ ಮಾಹಿತಿ ನೀಡಿದ ಎಸ್‌ಸಿ ಎಸ್‌ಟಿ ಕಲ್ಯಾಣ ಸಮಿತಿ ಅಧ್ಯಕ್ಷ, ಮೂಡಿಗೆರೆಯ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರು, ಕೋಲಾರ ಜಿಲ್ಲೆಯ ಮಾಲೂರು ದೇವಸ್ಥಾನದಲ್ಲಿ ನಡೆದ ಘಟನೆಯನ್ನೂ ಉಲ್ಲೇಖಿಸಿದ್ದಾರೆ. ಸಮಿತಿಯು ಸರಕಾರಕ್ಕೆ ಕೆಲವು ಶಿಫಾರಸುಗಳನ್ನು ಮಾಡಿದ್ದು, ಅದರಲ್ಲಿ ದೇವಸ್ಥಾನ ಪ್ರವೇಶ, ಜಾತಿ ಸರ್ಟಿಫಿಕೇಟು, ಅನುದಾನ ದುರುಪಯೋಗ ಸೇರಿ ಹಲವು ವಿಚಾರಗಳನ್ನು ಉಲ್ಲೇಖಿಸಲಾಗಿದೆ.
ದಲಿತರನ್ನು ದೇವಸ್ಥಾನದಿಂದ ಹೊರಗಿಡುವುದು ಸರಿಯಲ್ಲ. ನಾವು ಸಹ ಹಿಂದುಗಳು. ನಮ್ಮನ್ನು ಯಾಕೆ ದೂರ ಇಡುತ್ತೀರಿ? ಇಂತಹ ತಪ್ಪು ಮಾಡುವವರ ವಿರುದ್ಧ ಕ್ರಮ ಆಗಬೇಕು. ಇವರಿಗೆ ಶಿಕ್ಷೆ ಆಗಬೇಕು. ಇಂತಹ ಪ್ರಕರಣಗಳು ಘಟಿಸಿದರೆ ಅಲ್ಲಿಯ ಜಿಲ್ಲಾಧಿಕಾರಿ, ಎಸ್ಪಿಯನ್ನು ಹೊಣೆ ಮಾಡಬೇಕು. ದೇವಸ್ಥಾನಗಳ ಮುಂದೆ ಶಿಕ್ಷೆಯ ಕುರಿತಂತೆ ಎಚ್ಚರಿಕೆ ಫಲಕ ಹಾಕಬೇಕು ಎಂದು ಸಮಿತಿ ಮನವಿ ಮಾಡಿದೆ.
ಎಸ್‌ಸಿ ಎಸ್‌ಟಿ ಕಲ್ಯಾಣಕ್ಕಾಗಿ ನೀಡಿರುವ ಹಣದ ದುರುಪಯೋಗ ಆಗುತ್ತಿದೆ. ಸಮುದಾಯ ಕಲ್ಯಾಣಕ್ಕೆ ಮೀಸಲಿಟ್ಟ ಹಣವನ್ನು ಅಣೆಕಟ್ಟು ರಿಪೇರಿಗೆ ಬಳಸಿದ್ದಾರೆ, ಕಾಲೇಜು ನವೀಕರಣ ಇತ್ಯಾದಿಗಳಿಗೂ ಬಳಸಲಾಗಿದೆ. ಈ ರೀತಿ ಮಾಡುವುದು ಸರಿಯಲ್ಲ, ಈ ಹಣವನ್ನು ಸಮುದಾಯದ ಕಲ್ಯಾಣಕ್ಕೆ ಬಳಸಬೇಕು ಎಂದು ಶಿಫಾರಸಿನಲ್ಲಿ ಆಗ್ರಹಿಸಲಾಗಿದೆ.
ಅವರಿಗೆ ಎಸ್ಸಿ ಸರ್ಟಿಫಿಕೆಟ್ ಬೇಡ
ʻʻಬೇಡ ಜಂಗಮರಿಗೆ ಪರಿಶಿಷ್ಟ ಜಾತಿ ಸರ್ಟಿಫಿಕೇಟ್ ಕೊಡಬಾರದು. ನಾವು ಅವರ ಕಾಲಿಗೆ ಬೀಳುತ್ತೇವೆ. ಅಂಥವರು ನಮಗೆ ಎಸ್ಸಿ ಮೀಸಲಾತಿ ಸರ್ಟಿಫಿಕೇಟ್ ಕೊಡಿ ಎಂದು ಕೇಳುವುದು ತಪ್ಪುʼʼ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಇದನ್ನು ಓದಿ | ವಿಸ್ತಾರ ವಿಶೇಷ | SCST ಮೀಸಲು ನಂತರ ಸರ್ಕಾರದ ಮತ್ತೊಂದು ಅಸ್ತ್ರ: ಸದಾಶಿವ ಆಯೋಗದ ಕುರಿತು ಮಹತ್ವದ ನಿರ್ಧಾರ