Site icon Vistara News

Seabird Naval Base : ಸೀಬರ್ಡ್‌ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ತಾರತಮ್ಯ ನಿವಾರಿಸಲು ಸಿಎಂ ಸೂಚನೆ

Seabird Naval Base meeting

ಬೆಂಗಳೂರು: ಕಾರವಾರದಲ್ಲಿ ಸೀಬರ್ಡ್‌ ನೌಕಾನೆಲೆಯು (Seabird Naval Base) ನಿರ್ಮಿಸುತ್ತಿರುವ ವಾಯುನೆಲೆಯನ್ನು ವಿಸ್ತರಿಸಿ, ಸಿವಿಲ್‌ ಎನ್‌ಕ್ಲೇವ್‌ ನಿರ್ಮಿಸುವ ಯೋಜನೆಗೆ ನಡೆಸುತ್ತಿರುವ ಭೂಸ್ವಾಧೀನ ಪ್ರಕ್ರಿಯೆಯ (Land Acquisition Process_ ಪರಿಹಾರ ನಿಗದಿಯಲ್ಲಿ ತಾರತಮ್ಯ ಆಗಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು 2013ರ ಭೂಸ್ವಾಧೀನ ಕಾಯ್ದೆಯನ್ವಯ ಇದನ್ನು ನಿವಾರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ನಡೆಯುತ್ತಿರುವ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ನಡೆದಿರುವ ತಾರತಮ್ಯ ಕುರಿತು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಶಾಸಕ ಸತೀಶ್‌ ಸೈಲ್‌ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರುವಾರ ಭೇಟಿಯಾಗಿ ಚರ್ಚೆ ನಡೆಸಿದ ಸಂದರ್ಭದಲ್ಲಿ ಈ ಭರವಸೆ ನೀಡಿದರು.

ಬಿಜೆಪಿ ಸರ್ಕಾರ ನಮಗೆ ಅನ್ಯಾಯ ಮತ್ತು ಮೋಸ ಮಾಡಿದ್ದು, ಇದನ್ನು ಸರಿಪಡಿಸಿ ಎಂದು ಸಭೆಯಲ್ಲಿ ಮೂರು ಗ್ರಾಮಗಳ ನಿರಾಶ್ರಿತ ಕುಟುಂಬಗಳು ಮಾಡಿಕೊಂಡ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ವೈಜ್ಞಾನಿಕವಾಗಿ, ನಿಯಮಬದ್ಧವಾಗಿ ಪರಿಹಾರ ಕೊಡುವ ದಿಕ್ಕಿನಲ್ಲಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

ಸಭೆ ನಡೆಸಿ ಚರ್ಚಿಸಲು ಎಂ.ಬಿ. ಪಾಟೀಲ್‌ಗೆ ಸೂಚನೆ

ಮುಖ್ಯ ಕಾರ್ಯದರ್ಶಿಗಳು ಮತ್ತು ಸಂಬಂಧಿಸಿದ ಇತರ ಹಿರಿಯ ಅಧಿಕಾರಿಗಳೊಂದಿಗೆ, ಭೂಸ್ವಾಧೀನ ಪರಿಹಾರ ನಿಗದಿ, ಭೂಮಿ ಕಳೆದುಕೊಂಡವರಿಗೆ ಉದ್ಯೋಗ ನೀಡುವ ಕುರಿತು ಹಾಗೂ ಸೂಕ್ತ ನಿವೇಶನ ನೀಡುವ ಕುರಿತಂತೆ ಸಭೆ ನಡೆಸಿ ಚರ್ಚಿಸುವಂತೆ ಕೈಗಾರಿಕೆ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲರಿಗೆ (MB Patil) ಸೂಚಿಸಿದರು.

ಸೀಬರ್ಡ್‌ ಮೊದಲ ಹಂತದ ಯೋಜನೆಯಡಿ ಭೂಮಿ ಕಳೆದುಕೊಂಡವರ ಕುಟುಂಬದವರಿಗೂ ಉದ್ಯೋಗ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಅವರು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ, ಮೀನುಗಾರಿಕೆ ಮತ್ತು ಬಂದರು ಸಚಿವ ಮಂಕಾಳ ವೈದ್ಯ, ಕಾರವಾರ ಶಾಸಕ ಸತೀಶ್‌ ಸೈಲ್‌, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹ್ಮದ್‌, ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತಾ, ಮುಖ್ಯಮಂತ್ರಿಯವರ ಕಾರ್ಯದರ್ಶಿ ಜಿಯಾವುಲ್ಲಾ, ಹಣಕಾಸು ಇಲಾಖೆ ಕಾರ್ಯದರ್ಶಿ ಪಿ.ಸಿ. ಜಾಫರ್‌, ಮೂಲಸೌಕರ್ಯ ಇಲಾಖೆ ಜಂಟಿ ಕಾರ್ಯದರ್ಶಿ ಹೆಫ್ಸಿಬಾ ರಾಣಿ ಕೊರ್ಲಪಾಟಿ ಮತ್ತಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಏನಿದು ಸಮಸ್ಯೆ?

2020ರಲ್ಲಿ ಉತ್ತರಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಭಾರತೀಯ ನೌಕಾಪಡೆ ಸಹಯೋಗದಲ್ಲಿ ನಾಗರಿಕ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಆಗಿನ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿತ್ತು. ಅದರಂತೆ ಅಂಕೋಲಾ ತಾಲೂಕಿನ ಅಲಗೇರಿ ಹಾಗೂ ಬೇಲೆಕೇರಿ ಗ್ರಾಮದಲ್ಲಿ ಯೋಜನೆಗೆ ಅಗತ್ಯ ಭೂಮಿಯನ್ನು ಗುರುತಿಸಿದ್ದು ನೌಕಾನೆಲೆ ವ್ಯಾಪ್ತಿಯಲ್ಲಿ ನಿರ್ಮಾಣವಾಗುವ ವಿಮಾನ ನಿಲ್ದಾಣಕ್ಕೆ ಅಗತ್ಯ ರನ್‌ವೇಗಾಗಿ ಭೂಸ್ವಾಧೀನ ಪ್ರಕ್ರಿಯೆ ನಡೆಸಬೇಕಿತ್ತು. ಆದರೆ, ಅಲಗೇರಿಯಲ್ಲಿ ಈ ಹಿಂದೆ ನೌಕಾನೆಲೆ ನಿರ್ಮಾಣಕ್ಕಾಗಿ ಜಾಗ ನೀಡಿ ನಿರಾಶ್ರಿತರಾದ ಕುಟುಂಬಸ್ಥರೇ ಇದ್ದು, ಇದೀಗ ಮತ್ತೊಮ್ಮೆ ನಿರಾಶ್ರಿತರಾಗುವುದರಿಂದ ಹೆಚ್ಚಿನ ಪರಿಹಾರಕ್ಕೆ ಗ್ರಾಮಸ್ಥರು ಬೇಡಿಕೆ ಇಟ್ಟಿದ್ದರು.

ಇದನ್ನೂ ಓದಿ: DK Shivakumar : ಬಿಎಸ್‌ವೈ ರಾಜಕೀಯ ಕಾರಣಕ್ಕೆ ಸಿಬಿಐ ತನಿಖೆಗೆ ಆದೇಶ ಕೊಟ್ಟಿದ್ದರು; ಡಿ.ಕೆ.ಶಿವಕುಮಾರ್

ಕಳೆದ ಮೂರು ವರ್ಷಗಳಿಂದಲೂ ಪರಿಹಾರದ ವಿಚಾರವಾಗಿ ಸಾಕಷ್ಟು ಸಭೆಗಳನ್ನು ನಡೆಸಲಾಗಿತ್ತಾದರೂ ಇದುವರೆಗೂ ಸಹ ಯಾವುದೂ ಹೊಂದಾಣಿಕೆಯಾಗದೇ ಭೂಸ್ವಾಧೀನ ಪ್ರಕ್ರಿಯೆಗೆ ಹಿನ್ನಡೆಯಾಗಿತ್ತು. ಹೀಗಾಗಿ ನೌಕಾನೆಲೆ ಸಹಯೋಗದಲ್ಲಿ ಅಂಕೋಲಾದಲ್ಲಿ ನಾಗರಿಕ ವಿಮಾನನಿಲ್ದಾಣ ನಿರ್ಮಾಣ ವಿಚಾರ ಇನ್ನೂ ಆರಂಭಿಕ ಹಂತದಲ್ಲೇ ಉಳಿದಿದೆ. ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಕಾರವಾರ ಶಾಸಕ ಸತೀಶ್‌ ಸೈಲ್‌ ನೇತೃತ್ವದಲ್ಲಿ ಗ್ರಾಮಸ್ಥರೊಂದಿಗೆ ಸಭೆಯನ್ನೂ ನಡೆಸಲಾಗಿತ್ತು. ಈಗ ಜನಪ್ರತಿನಿಧಿಗಳ ನಿಯೋಗವು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.

Exit mobile version