ಬೆಂಗಳೂರು: ಅದು ಸೀಮಂತದ ಮನೆ. ಎಲ್ಲರೂ ಸಂಭ್ರಮದಿಂದ ಓಡಾಡಿಕೊಂಡಿದ್ದರು. ಆದರೆ, ಕ್ಷಣಮಾತ್ರದಲ್ಲಿ ಅದು ರಣರಂಗವಾಗಿ ಮಾರ್ಪಟ್ಟಿತ್ತು. ಯಾರೋ ಹೊರಗಿನಿಂದ ಬಂದರು. ಜೋರು ಜೋರು ಜಗಳ ಶುರುವಾಯಿತು. ಕೈ ಕೈ ಮಿಲಾಯಿಸಿದರು, ಪಂಚ್ ಕೊಟ್ಟರು, ಮಹಿಳೆಯೊಬ್ಬರನ್ನು ಎತ್ತಿ ಮೇಲಿನಿಂದ ಎಸೆದೇ ಬಿಟ್ಟರು ಎನ್ನುವ ಸೀನ್ ಕ್ರಿಯೇಟ್ ಆಯಿತು. ಬಳಿಕ ಹೊರಗಡೆ ನೆಲದಲ್ಲಿ ಬಿದ್ದು ಹೊರಳಾಡಿದರು, ಗೋಳಾಡಿದರು. ಕೊನೆಗೆ ಇಟ್ಟಿಗೆಯನ್ನೇ ಎತ್ತಿ ಎಸೆದರು, ಬೇಕಾಬಿಟ್ಟಿ ಬೈದಾಡಿಕೊಂಡರು!
ಇದಿಷ್ಟೂ ಆಗಿದ್ದು ಚಂದ್ರಾ ಲೇಔಟ್‌ನಲ್ಲಿ ನಡೆಯುತ್ತಿದ್ದ ಸೀಮಂತ ಕಾರ್ಯಕ್ರಮದಲ್ಲಿ. ಅಲ್ಲಿ ತೇಜಸ್ ಎಂಬ ಯುವಕನ ಹೆಂಡತಿಗೆ ಸೀಮಂತದ ಕಾರ್ಯಕ್ರಮ ಆಯೋಜನೆಯಾಗಿತ್ತು. ಎಲ್ಲವೂ ಚೆನ್ನಾಗಿಯೇ ನಡೆಯುತ್ತಿತ್ತು. ಅಷ್ಟು ಹೊತ್ತಿಗೆ ನಡೆದದ್ದು ತೇಜಸ್‌ನ ಮೊದಲ ಹೆಂಡತಿಯ ಎಂಟ್ರಿ!
ಹೌದು ಈ ತೇಜಸ್‌ಗೆ ೨೦೧೮ರಲ್ಲಿ ಚೈತ್ರಾ ಎಂಬ ಯುವತಿ ಜತೆ ಮದುವೆಯಾಗಿತ್ತು. ಮದುವೆ ನಂತರವೂ ತೇಜಸ್ ಬೇರೊಬ್ಬಳ ಜತೆ ಸಂಬಂಧ ಹೊಂದಿದ್ದಾನೆ ಎಂಬ ಆರೋಪದಲ್ಲಿ ಆಗಾಗ ದಂಪತಿ ನಡುವೆ ಜಗಳ ನಡೆಯುತ್ತಿತ್ತು. ಪ್ರತಿ ದಿನ ಇದೇ ವಿಷಯ ಕಿರಿಕಿರಿ ಅಂಥ ಭಾವಿಸಿದ ತೇಜಸ್ ಚೈತ್ರಾ ಮೇಲೆ ಹಲ್ಲೆ ಮಾಡಿದ್ದನಂತೆ. ಚೈತ್ರಾ ತನ್ನ ಹೆಂಡತಿ ಎಂದು ಎಲ್ಲೂ ಹೇಳಿಕೊಳ್ಳುತ್ತಿರಲಿಲ್ಲವಂತೆ. ಸೋಷಿಯಲ್ ಮೀಡಿಯಾದಲ್ಲಿ ಎಲ್ಲೂ ಮದುವೆ ವಿಚಾರ ಪ್ರಸ್ತಾಪಿಸಿರಲಿಲ್ಲವಂತೆ. ಈ ಎಲ್ಲ ವಿಚಾರಗಳು ಸೇರಿ ಸಂಬಂಧ ಸಂಪೂರ್ಣ ಹಳಸಿಹೋಗಿದೆ. ಅವರಿಬ್ಬರೂ ಡೈವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದು, ಪ್ರಕರಣದ ವಿಚಾರಣೆ ಕೋರ್ಟ್‌ನಲ್ಲಿ ಇನ್ನೂ ನಡೆಯುತ್ತಿದೆ. ಅಂತಿಮ ತೀರ್ಪು, ಪರಿಹಾರದ ಲೆಕ್ಕಾಚಾರ ಇನ್ನಷ್ಟೇ ಆಗಬೇಕಾಗಿದೆ.
ಇದರ ನಡುವೆಯೇ ತೇಜಸ್ ಬೇರೊಬ್ಬ ಹುಡುಗಿಯನ್ನು ಮದುವೆಯಾಗಿ ಆಕೆ ಗರ್ಭಿಣಿಯೂ ಆಗಿ ಸೀಮಂತದ ಹಂತಕ್ಕೆ ಬಂದಿತ್ತು. ಹೀಗೆ ತನ್ನ ಕಣ್ತಪ್ಪಿಸಿ ಬೇರೆ ಮದುವೆಯಾದ ತೇಜಸ್‌ನಿಗೆ ಪಾಠ ಕಲಿಸಬೇಕು ಎಂದು ತೀರ್ಮಾನಿಸಿದ ಚೈತ್ರಾ ಕೊನೆಗೆ ಆಯ್ಕೆ ಮಾಡಿಕೊಂಡಿದ್ದು ಸೀಮಂತ ಕಾರ್ಯಕ್ರಮದ ದಿನವನ್ನು!
ಗುರುವಾರ ಸೀಮಂತದ ಮನೆಗೆ ಹೋದ ಚೈತ್ರಾ ಜೋರಾಗಿಯೇ ಗಲಾಟೆ ಮಾಡಿದ್ದಾರೆ. ಡೈವೋರ್ಸ್ ಫೈನಲ್ ಆಗದೆ ಹೇಗೆ ಎರಡನೇ ಮದುವೆ ಮಾಡಿಕೊಳ್ಳುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಈ ಹಂತದಲ್ಲಿ ಎರಡೂ ಕಡೆಯವರ ನಡುವೆ ಮಾರಾಮಾರಿಯೇ ನಡೆದುಹೋಗಿದೆ.
ಇದನ್ನೂ ಓದಿ: UKG student fail: ಯುಕೆಜಿ ವಿದ್ಯಾರ್ಥಿನಿ ಫೇಲ್; ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ ಶಿಕ್ಷಣ ಇಲಾಖೆ
ಚೈತ್ರಾ ಕುಟುಂಬಸ್ಥರು ಮಹಿಳಾ ಸಂಘಟನೆಯೊಂದಿಗೆ ಹೋಗಿದ್ದಾರೆ. ಈ ವೇಳೆ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿದೆ. ಚೈತ್ರಾ ತಾಯಿಗೆ ಇಟ್ಟಿಗೆ ಕಲ್ಲು ಎಸೆದು ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ.