ಕಲಬುರಗಿ: ಕಲಬುರಗಿಯಲ್ಲಿ ಬಿಜೆಪಿ ವಿಜಯ ಸಂಕಲ್ಪ ರಥ ಯಾತ್ರೆಯ ಜಿಲ್ಲಾ ಪ್ರವಾಸ ಕೈಗೊಂಡಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹೆಲಿಕಾಪ್ಟರ್ ಭದ್ರತಾ ಲೋಪದ ಹಿನ್ನೆಲೆಯಲ್ಲಿ ಜೇವರ್ಗಿ ಪಟ್ಟಣದಲ್ಲಿ ಲ್ಯಾಂಡ್ ಆಗದೆ, ಕೆಲಕಾಲ ಹಾರಾಟ ನಡೆಸುತ್ತಲೇ ಇತ್ತು. ಹೆಲಿಪ್ಯಾಡ್‌ನಲ್ಲಿ ಪ್ಲಾಸ್ಟಿಕ್ ಚೀಲಗಳನ್ನು ಸ್ವಚ್ಛಗೊಳಿಸದೇ ಇರುವುದರಿಂದ ಲ್ಯಾಂಡಿಂಗ್ ವೇಳೆ ಹೆಲಿಕಾಪ್ಟರ್‌ನತ್ತ ಚೀಲಗಳು ತೂರಿಬಂದಿವೆ. ಈ ಹಿನ್ನೆಲೆಯಲ್ಲಿ ಪೈಲೆಟ್ ಲ್ಯಾಂಡ್ (Helicopter landing) ಮಾಡದೇ ಹಾರಾಟ ನಡೆಸಿದ್ದಾರೆ.
ಜೇವರ್ಗಿ ಪಟ್ಟಣದ ಹೊರವಲಯದಲ್ಲಿ ಹೆಲಿಪ್ಯಾಡ್ ಅನ್ನು ನಿರ್ಮಿಸಲಾಗಿದೆ. ಶಿಷ್ಟಾಚಾರದ ಪ್ರಕಾರ ಹೆಲಿಪ್ಯಾಡ್ ಅನ್ನು ಸಂಪೂರ್ಣವಾಗಿ ಸ್ವಚ್ಛವಾಗಿಡಬೇಕು. ಆದರೆ, ಪಿಡಬ್ಲ್ಯುಡಿ ಇಲಾಖೆಯವರು ಹೆಲಿಪ್ಯಾಡ್ ಸುತ್ತಮುತ್ತ ಯಾವುದೇ ಸ್ವಚ್ಛತೆಯನ್ನು ಮಾಡಿಲ್ಲ. ಅಲ್ಲಲ್ಲಿ ಹಲವಾರು ಪ್ಲಾಸ್ಟಿಕ್ ಚೀಲಗಳು ಬಿದ್ದುಕೊಂಡಿದ್ದವು. ಇದೇ ವೇಳೆ ಹೆಲಿಕಾಪ್ಟರ್ ಬಂದಿದ್ದು, ಲ್ಯಾಂಡಿಂಗ್ ಮಾಡಲು ನೋಡುವಾಗ ಪ್ಲಾಸ್ಟಿಕ್ ಚೀಲಗಳು ಹಾರಿ ಬಂದಿವೆ.
ಈ ವೇಳೆ ಪೈಲೆಟ್ ಹೆಲಿಕಾಪ್ಟರ್ ಅನ್ನು ಲ್ಯಾಂಡ್ ಮಾಡದೆ ಹೋಗಿದ್ದರಿಂದ ಎಚ್ಚೆತ್ತ ಪೊಲೀಸರು ತಕ್ಷಣವೇ ಪ್ಲಾಸ್ಟಿಕ್ ಚೀಲಗಳನ್ನು ತೆರವುಗೊಳಿಸಿದರು. ನಂತರ ಒಂದೆರಡು ಸುತ್ತು ಹಾರಾಟ ನಡೆಸಿದ ಹೆಲಿಕಾಪ್ಟರ್ ಅನ್ನು ಲ್ಯಾಂಡ್ ಮಾಡಲಾಯಿತು. ಯಾವುದೇ ರೀತಿಯ ಸ್ವಚ್ಛತೆ ಕೈಗೊಳ್ಳದೆ ಲ್ಯಾಂಡಿಂಗ್‌ಗೆ ಪಿಡಬ್ಲ್ಯೂಡಿ ಇಲಾಖೆ ಅನುಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಪೈಲೆಟ್ ಜೋಸೆಫ್ ಅಸಮಾಧಾನ ವ್ಯಕ್ತಪಡಿಸಿದ್ದು, ಹೆಲಿಕಾಪ್ಟರ್ ಲ್ಯಾಂಡಿಂಗ್‌ಗೆ ಬೇಕಾದ ಎಲ್ಲ ನಿಯಮಗಳನ್ನು ಉಲ್ಲಂಘನೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಭದ್ರತಾ ವೈಫಲ್ಯವಾದರೂ ಪಿಡಬ್ಲ್ಯೂಡಿ ಇಲಾಖೆ ಸ್ಥಳಕ್ಕೆ ಬರಲಿಲ್ಲ ಎನ್ನಲಾಗಿದೆ.
ಲ್ಯಾಂಡಿಂಗ್ ವೇಳೆ ನಡೆದ ಅವಾಂತರ ವಿಡಿಯೊ ಇಲ್ಲಿದೆ
ಇಂತಹ ಸಂದರ್ಭದಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಮಾಡಬಾರದು ಎಂದು ನಮಗೆ ತರಬೇತಿಯಲ್ಲಿ ಹೇಳಿಕೊಡಲಾಗಿರುತ್ತದೆ. ಲ್ಯಾಂಡಿಂಗ್ ಸಮಯದಲ್ಲಿ ಶಿಷ್ಟಾಚಾರವನ್ನು ಫಾಲೋ ಮಾಡಬೇಕಿತ್ತು. ಆದರೆ, ಅದ್ಯಾವುದನ್ನೂ ಫಾಲೋಅಪ್ ಮಾಡಲಾಗಿಲ್ಲ ಎನ್ನುವುದು ಗೊತ್ತಾಗಿದೆ ಎಂದು ಪೈಲೆಟ್ ಜೋಸೆಫ್ ತಿಳಿಸಿದ್ದಾರೆ.