ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಚರಿಸುವ ಕಾನ್‌ವೇಯಲ್ಲಿ ಭದ್ರತಾ ವೈಫಲ್ಯ ಉಂಟಾಗಿದೆ. ಭಾನುವಾರ (ಮಾ. 26) ರಾತ್ರಿ ಬೆಂಗಳೂರು ಪ್ರವಾಸ ಮುಗಿಸಿ ಅಮಿತ್ ಶಾ ಅವರು ಎಚ್‌ಎಲ್‌ಎಲ್ ವಿಮಾನ ನಿಲ್ದಾಣಕ್ಕೆ ತೆರಳುವ ವೇಳೆ ಈ ಘಟನೆ ನಡೆದಿದ್ದು, ಈ ಸಂಬಂಧ ಇಬ್ಬರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಗೃಹ ಸಚಿವರ ಸಂಚಾರಕ್ಕಾಗಿ ತೆರವುಗೊಳಿಸಲಾದ ರಸ್ತೆಯಲ್ಲಿ ಸಫೀನಾ ಪ್ಲಾಜಾ ಮಾರ್ಗವಾಗಿ ಮಣಿಪಾಲ್ ಸೆಂಟರ್‌ವರೆಗೂ ಕಾನ್‌ವೇ ಜತೆಗೆ ಇಬ್ಬರು ಬೈಕರ್ಸ್ ತೆರಳಿದ್ದಾರೆ. ದಿಡೀರ್ ಎಂದು ಕಾನ್‌ವೇ ಪ್ರವೇಶಿಸಿದ ಇಬ್ಬರು ಸವಾರರು ಪೊಲೀಸರು ತಡೆದರೂ ಕಾನ್‌ವೇ ಮಧ್ಯದಲ್ಲೇ ಸುಮಾರು 300 ಮೀಟರ್ ತೆರಳಿದ್ದರು.
ಮಣಿಪಾಲ್ ಸೆಂಟರ್ ಬಳಿ ಬೈಕ್ ಸವಾರರಿಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರನ್ನು ತಡರಾತ್ರಿವರೆಗೂ ವಿಚಾರಣೆ ನಡೆಸಲಾಗಿದ್ದು, ಈ ವೇಳೆ ಇಬ್ಬರೂ ವಿದ್ಯಾರ್ಥಿಗಳು, ಉದ್ದೇಶಪೂರ್ವಕವಾಗಿ ಬಂದಿಲ್ಲ ಎನ್ನುವುದು ತಿಳಿದುಬಂದಿದೆ. ಭಾರತಿನಗರ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲಿಸಿ ವಿಚಾರಣೆ ಮುಂದುವರಿಸಲಾಗಿದೆ. ಮೊನ್ನೆ ಕಾನ್‌ವೇ ರಿಹರ್ಸಲ್ ವೇಳೆ ಸರಣಿ ಅಪಘಾತ ಸಹ ನಡೆದಿತ್ತು. ಈ ಸಂಬಂಧ ಇಬ್ಬರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಇಮ್ರಾನ್ ಹಾಗೂ ಜಿಬ್ರಾನ್ ವಶಕ್ಕೆ
ಭಾರತಿನಗರ ಪೊಲೀಸರ ವಶದಲ್ಲಿರುವ ನೀಲಸಂದ್ರದ ನಿವಾಸಿಗಳಾಗಿರುವ ಇಮ್ರಾನ್ ಹಾಗೂ ಜಿಬ್ರಾನ್ ಇಬ್ಬರು ಆರ್‌ಟಿ ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳೆಂದು ತಿಳಿದು ಬಂದಿದೆ. ಇವರಿಬ್ಬರು ಫ್ರೇಜರ್ ಟೌನ್‌ನಲ್ಲಿ ಬೈಕ್ ಅನ್ನು ಸರ್ವಿಸ್ ಕೊಟ್ಟು, ಸ್ಕೂಟರ್‌ನಲ್ಲಿ ವಾಪಸ್ ಆಗುತ್ತಿದ್ದರು ಎಂದು ತನಿಖೆಯಲ್ಲಿ ಗೊತ್ತಾಗಿದೆ. ಘಟನೆ ಸಂಬಂಧ ನಗರ ಪೊಲೀಸ್ ಆಯುಕ್ತರಿಗೆ ವರದಿ ನೀಡಲು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಮುಂದಾಗಿದ್ದಾರೆ. ವರದಿ ಸಲ್ಲಿಸಿ ಆಯುಕ್ತರೊಂದಿಗೆ ಚರ್ಚಿಸಿ ಬಳಿಕ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.
ಇದನ್ನೂ ಓದಿ: Modi in Karnataka: ಮೋದಿ ರೋಡ್ ಶೋ ವೇಳೆ ಭದ್ರತಾ ವೈಫಲ್ಯ; ನಿಷೇಧಿತ ಪ್ರದೇಶಕ್ಕೆ ನುಗ್ಗಿದ ಇಬ್ಬರು ವಶಕ್ಕೆ