Site icon Vistara News

Sedition case: ಪಾಕ್‌ ಪರ ಘೋಷಣೆ ವಿವಾದ; ಬೀದಿಗಿಳಿದ ಜೆಡಿಎಸ್‌; ಬಂಧನಕ್ಕೆ ಪಟ್ಟು

Sedition case Pro Pakistan sloganeering controversy JDS protest

ಬೆಂಗಳೂರು: ಆರೂವರೆ ಕೋಟಿ ಕನ್ನಡಿಗರ ಹೃದಯವಾದ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್‌ (Pakistan Zindabad) ಎಂದು ಕೂಗಲಾಗಿದೆ. ಇಂಥ ದೇಶದ್ರೋಹದ (Sedition case) ಘೋಷಣೆ ಕೂಗಿರುವ ದೇಶದ್ರೋಹಿಗಳನ್ನು ಕೂಡಲೇ ಬಂಧಿಸಬೇಕು. ಅಲ್ಲದೆ, ರಾಜ್ಯಸಭೆ ಸ್ಥಾನದಿಂದ ನಾಸಿರ್ ಹುಸೇನ್ (Nasir Hussain) ಅವರನ್ನು ವಜಾ ಮಾಡಬೇಕು ಎಂದು ಜೆಡಿಎಸ್ (JDS Karnataka) ಒತ್ತಾಯ ಮಾಡಿದೆ.

ರಾಜ್ಯಸಭೆಯ ನೂತನ ಸದಸ್ಯರಾಗಿ ಆಯ್ಕೆಯಾದ ಸೈಯ್ಯದ್ ನಾಸಿರ್ ಹುಸೇನ್ ಬೆಂಬಲಿಗರು ದೇಶ ವಿರೋಧಿ ಘೋಷಣೆ ಕೂಗಿದ್ದು, ಅವರ ವಿರುದ್ಧ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಚ್.ಎಂ. ರಮೇಶ್ ಗೌಡ ನೇತೃತ್ವದಲ್ಲಿ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರಮೇಶ್ ಗೌಡ, ರಾಜ್ಯಸಭೆ ಸ್ಥಾನದಿಂದ ನಾಸಿರ್ ಹುಸೇನ್ ಅವರನ್ನು ವಜಾ ಮಾಡಬೇಕು ಹಾಗೂ ದೇಶದ್ರೋಹದ ಘೋಷಣೆಗಳನ್ನು ಕೂಗಿದ ದ್ರೋಹಿಗಳನ್ನು ತಕ್ಷಣವೇ ಬಂಧಿಸಬೇಕು ಎಂದು ಸರ್ಕಾರವನ್ನು ಒತ್ತಾಯ ಮಾಡಿದರು.

ಕಾಂಗ್ರೆಸ್ ಸರ್ಕಾರ ಇಂಥ ಕಿಡಿಗೇಡಿಗಳು, ದ್ರೋಹಿಗಳನ್ನು ವ್ಯವಸ್ಥಿತವಾಗಿ ಪೋಷಣೆ ಮಾಡುತ್ತಿದೆ. ಈವರೆಗೂ ಸರ್ಕಾರ ಇಂಥ ದೇಶದ್ರೋಹಿ ಕೃತ್ಯವನ್ನು ಖಂಡಿಸಿಲ್ಲ. ಬದಲಿಗೆ ಆ ಕೃತ್ಯವನ್ನು ಸಮರ್ಥನೆ ಮಾಡಿಕೊಳ್ಳುತ್ತಿದೆ ಎಂದು‌ ರಮೇಶ್ ಗೌಡ ಕಿಡಿಕಾರಿದರು.

ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ತಕ್ಷಣವೇ ದೇಶದ್ರೋಹದ ಘೋಷಣೆಯನ್ನು ಖಂಡಿಸಿ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿತ್ತು. ಆದರೆ, ಆ ಪಕ್ಷದ ಮುಖಂಡರೂ ಖಂಡಿಸುವ ಮಾತಿರಲಿ, ಅವರನ್ನೇ ಸಮರ್ಥನೆ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ರಮೇಶ್ ಗೌಡ ಆರೋಪ ಮಾಡಿದರು.

ದೇಶ ಒಡೆಯುತ್ತಿರುವ ಕಾಂಗ್ರೆಸ್‌ ನಾಯಕರು

ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ, ಭಾರತ್ ನ್ಯಾಯ ಯಾತ್ರೆಗಳನ್ನು ಮಾಡುತ್ತಿದ್ದರೆ, ಅವರದೇ ಪಕ್ಷದ ನಾಯಕರು, ಕಾರ್ಯಕರ್ತರು, ಬೆಂಬಲಿಗರು ದೇಶವನ್ನು ಒಡೆಯುವ ಮಾತನಾಡುತ್ತಿದ್ದಾರೆ ಎಂದು ರಮೇಶ್ ಗೌಡ ದೂರಿದರು.

ನಗರ ಜೆಡಿಎಸ್ ಘಟಕದ ಕಾರ್ಯಾಧ್ಯಕ್ಷ ಜಿ.ಟಿ. ರೇವಣ್ಣ, ಪರಿಶಿಷ್ಟ ವಿಭಾಗದ ವೇಲು, ಯುವ ಘಟಕದ ಯುವ ಕಾರ್ಯಾಧ್ಯಕ್ಷ ಚಂದ್ರಶೇಖರ್, ಮಾದೇಗೌಡ ಹಾಗೂ ಮತ್ತು ಎಲ್ಲ ವಿಧಾನಸಭೆ ಕ್ಷೇತ್ರಗಳ ಅಧ್ಯಕ್ಷರು ಹಾಗೂ ಬಿಜೆಪಿಯ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ: Sedition case: ಭಾರತದಲ್ಲಿ ಪಾ’ಕೈ’ಸ್ತಾನ ಬೆಂಬಲಿಸುವವರ ‘ಕೈಗಳ ಹೆಡೆಮುರಿ ಕಟ್ಟಿ; ಕಾಂಗ್ರೆಸ್‌ ಮೇಲೆ ಬಿಜೆಪಿ ಕಿಡಿ

ನಗರ ಜೆಡಿಎಸ್ ಕಾರ್ಯಾಧ್ಯಕ್ಷ ಕೆ.ವಿ. ನಾರಾಯಣಸ್ವಾಮಿ, ಕಾರ್ಯಾಧ್ಯಕ್ಷ ಜಿ.ಟಿ.ರೇವಣ್ಣ, ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಅಫ್ರೋಜ್ ಬೇಗ್, ಸೈಯದ್ ತಾಸಿನ್, ಕಾರ್ಮಿಕ ಘಟಕದ ಅಧ್ಯಕ್ಷ ಗೋಪಾಲಗೌಡ, ಹಿರಿಯ ಉಪಾಧ್ಯಕ್ಷ ಎಂ. ನಾಗರಾಜು, ಯುವ ಜನತಾದಳದ ನಗರ ಘಟಕದ ಅಧ್ಯಕ್ಷ ಪ್ರವೀಣ್ ಕುಮಾರ್, ಐ.ಟಿ. ಘಟಕದ ಅಧ್ಯಕ್ಷ ಫಣಿರಾಜ್, ಯುವ ಜೆಡಿಎಸ್ ಕಾರ್ಯಾಧ್ಯಕ್ಷ ಚಂದ್ರಶೇಖರ್, ಮುಖಂಡರಾದ ಪ್ರಶಾಂತಿ, ತುಳಸಿರಾಮ್, ಮಾದೇಗೌಡ ಸೇರಿದಂತೆ ಬೆಂಗಳೂರು ವಿವಿಧ ವಿಧಾನಸಭೆ ಕ್ಷೇತ್ರಗಳ ಅಧ್ಯಕ್ಷರು, ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

Exit mobile version