ಬೆಳಗಾವಿ: ವೀರಶೈವ ಲಿಂಗಾಯತ ಒಳ ಪಂಗಡಗಳನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡಬೇಕು ಎಂದು ಶ್ರೀಶೈಲ ಪೀಠದ ಜಗದ್ಗುರುಗಳ ನೇತೃತ್ವದಲ್ಲಿ ನಗರದ ಗಾಂಧಿ ಭವನದಲ್ಲಿ ಭಾನುವಾರ ನಡೆದ ವೀರಶೈವ ಲಿಂಗಾಯತ ಸಮಾಜದ ಸಮಾವೇಶದಲ್ಲಿ ಹಕ್ಕೊತ್ತಾಯ ಮಾಡಲಾಯಿತು. ಮೀಸಲಾತಿ (OBC Reservation) ಬಗ್ಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಮಠಾಧೀಶರು ಹಾಗೂ ಸಮಾಜದ ಮುಖಂಡರು ಒತ್ತಾಯ ಮಾಡಿದರು.
ಸಮುದಾಯವನ್ನು ಕೇಂದ್ರ ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡಲು ಶಿಫಾರಸು ಮಾಡಲು ವಿಳಂಬ ಮಾಡಿದರೆ ರಾಜ್ಯ ಸರ್ಕಾರದ ವಿರುದ್ಧ ಹೋರಾಟದ ಎಚ್ಚರಿಕೆಯನ್ನು ವೀರಶೈವ ಲಿಂಗಾಯತ ಮಠಾಧೀಶರು ನೀಡಿದ್ದು, ಮೀಸಲಾತಿಗಾಗಿ ಬೆಂಗಳೂರಿನಲ್ಲಿ ಹೋರಾಟ ಮಾಡಲು, ದಾವಣಗೆರೆಯಲ್ಲಿ ನಡೆಯುವ ವೀರಶೈವ ಮಹಾಸಭಾದ ಸಮಾವೇಶದಲ್ಲಿ ದಿನಾಂಕ ನಿಗದಿಪಡಿಸುವುದಾಗಿ ಎಂದು ಮಠಾಧೀಶರು ಘೋಷಿಸಿದ್ದಾರೆ.
ಇದನ್ನೂ ಓದಿ | Attibele Fire Accident : ಪಟಾಕಿ ದುರಂತ ನಡೆಯದಂತೆ ಸರ್ಕಾರದಿಂದ ನೀತಿ: ಡಿ.ಕೆ. ಶಿವಕುಮಾರ್
ರಾಜ್ಯ ಸರ್ಕಾರ ಮಾಡುವ ಶಿಫಾರಸನ್ನು ತಕ್ಷಣವೇ ಅಂಗೀಕಾರ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಶ್ರೀಶೈಲ ಪೀಠದ ಡಾ. ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಜಗದ್ಗುರು ಹಾಗೂ ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿಗ ಒತ್ತಾಯಿಸಿದ್ದಾರೆ. 25ಕ್ಕೂ ಅಧಿಕ ವೀರಶೈವ ಲಿಂಗಾಯತ ಸ್ವಾಮೀಜಿಗಳು, ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ, ಶಾಸಕ ಮಹಾಂತೇಶ ಕೌಜಲಗಿ, ವಿಧಾನಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಮಾಜಿ ಶಾಸಕರಾದ ಮಹಾದೇವಪ್ಪ ಯಾದವಾಡ, ಡಾ. ವಿಶ್ವನಾಥ ಪಾಟೀಲ ಸಮಾವೇಶದಲ್ಲಿ ಭಾಗಿಯಾಗಿದ್ದರು.
ಶಾಮನೂರು ಹೇಳಿಕೆಯನ್ನು ಸಮರ್ಥಿಸಿಕೊಂಡ ಶ್ರೀಶೈಲ ಶ್ರೀಗಳು
ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳನ್ನು ಕಡೆಗಣಿಸುತ್ತಿರುವ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಯನ್ನು ಶ್ರೀಶೈಲ ಶ್ರೀ ಡಾ. ಚನ್ನಸಿದ್ದರಾಮ ಪಂಡಿರಾತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಮರ್ಥಿಸಿಕೊಂಡಿದ್ದಾರೆ.
ಶಾಮನೂರು ಶಿವಶಂಕರಪ್ಪನವರ ಹೇಳಿಕೆ ಸತ್ಯಕ್ಕೆ ದೂರವಾಗಿಲ್ಲ. ಯಾವ ಮಟ್ಟದಲ್ಲಿ ನಮ್ಮ ಸಮಾಜದ ಅಧಿಕಾರಿಗಳಿಗೆ ಉನ್ನತ ಸ್ಥಾನಮಾನಗಳು ಸಿಗಬೇಕಿತ್ತೋ ಆ ಮಟ್ಟದಲ್ಲಿ ಸಿಗುತ್ತಿಲ್ಲ. ಹೆಚ್ಚಿನ ಪ್ರಮಾಣದಲ್ಲಿ ವೀರಶೈವ ಅಧಿಕಾರಿಗಳನ್ನು ಪರಿಗಣಿಸಬೇಕು. ಪಕ್ಷ ಇದನ್ನೆಲ್ಲ ತಿಳಿದುಕೊಳ್ಳಬೇಕು. ವೀರಶೈವ ಲಿಂಗಾಯತ ಅಧಿಕಾರಿಗಳಿಗೆ ಸ್ಥಾನಮಾನ ಗೌರವ ನೀಡಬೇಕು ಹೇಳಿದರು.
ಲಿಂಗಾಯತ ಧರ್ಮದ ಎಲ್ಲಾ ಒಳಪಂಗಡಳನ್ನು ಒಬಿಸಿ ಪಟ್ಟಿಗೆ ಸೇರಿಸಬೇಕು. ವೀರಶೈವ ಲಿಂಗಾಯತ ಒಳಪಂಗಡಗಳನ್ನು ಕೇಂದ್ರದ ಒಬಿಸಿಗೆ ಸೇರಿಸಲು ಸರ್ಕಾರ ಶಿಫಾರಸು ಮಾಡಬೇಕು, ಶೀಘ್ರದಲ್ಲಿಯೇ ಈ ವಿಚಾರವಾಗಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡುತ್ತೇವೆ ಎಂದು ತಿಳಿಸಿದರು.
ಸರ್ಕಾರ ನಮ್ಮ ಬೇಡಿಕೆಯನ್ನು ಶೀಘ್ರ ಈಡೇರಿಸಬೇಕು
ದಿಂಗಾಲೇಶ್ವರ ಶ್ರೀಗಳು ಮಾತನಾಡಿ, ವೀರಶೈವ ಲಿಂಗಾಯತ ಮಠಾಧೀಪತಿಗಳ ಬೇಡಿಕೆ ಒಂದೇ ಆಗಿದೆ. ಕೇಂದ್ರದ ಒಬಿಸಿ ಪಟ್ಟಿಗೆ ವೀರಶೈವ ಲಿಂಗಾಯತ ಒಳಪಂಗಡಗಳನ್ನು ಸೇರಿಸಬೇಕು. ಅದರ ಹಕ್ಕೊತ್ತಾಯದ ಉದ್ದೇಶ ಇಟ್ಟುಕೊಂಡು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದೇವೆ. ಸರ್ಕಾರ ನಮ್ಮ ಬೇಡಿಕೆಯನ್ನು ಶೀಘ್ರ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ | Karnataka Politics : 2024ಕ್ಕೆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಖಚಿತ; ಡಿಕೆಶಿ ಜತೆ ಇನ್ನೆಂದೂ ಕೈಜೋಡಿಸಲ್ಲ: ಎಚ್‌ಡಿಕೆ
ಬಹುಸಂಖ್ಯಾತರಾಗಿರುವ ವೀರಶೈವರಿಗೆ ನ್ಯಾಯ ಒದಗಿಸಬೇಕು. ಸರ್ಕಾರ ಯಾವುದೇ ಬರಲಿ, ಯಾವುದೇ ಹೋಗಲಿ ನಮ್ಮ ಹಕ್ಕೊತ್ತಾಯ ಮುಂದುವರಿಯುತ್ತದೆ ಎಂದ ಅವರು, ಶಾಮನೂರು ಶಿವಶಂಕರಪ್ಪ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಸರ್ಕಾದಲ್ಲಿ ಅವರು ಇದ್ದಾರೆ. ಅವರಿಗೆ ಸರಿ ಅನಿಸಿದ್ದನ್ನು ಹೇಳಿದ್ದಾರೆ. ಈಗ ನಾವು ಒಬಿಸಿ ವಿಚಾರವಾಗಿ ಬಂದಿದ್ದೇವೆ, ಅದನ್ನು ಟಿಸಿಲುಗೊಳಿಸುವುದು ಬೇಡ ಎಂದ ಹೇಳಿದರು.