Site icon Vistara News

Sekhar Rao | ಕರ್ಣಾಟಕ ಬ್ಯಾಂಕ್‌ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಶೇಖರ್ ರಾವ್ ನೇಮಕ

Sekhar Rao

ಮಂಗಳೂರು: ದೇಶದ ಖಾಸಗಿ ರಂಗದ ಪ್ರತಿಷ್ಠಿತ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಕರ್ಣಾಟಕ ಬ್ಯಾಂಕ್‌ನ ನೂತನ ಕಾರ್ಯನಿರ್ವಾಹಕ ನಿರ್ದೇಶಕರಾಗಿ (Executive Director) ಶೇಖರ್ ರಾವ್‌ ಅವರನ್ನು ನೇಮಕ ಮಾಡಲಾಗಿದೆ. ಅಧಿಕಾರ (ಹೆಚ್ಚುವರಿ ನಿರ್ದೇಶಕರ ನೆಲೆಯಲ್ಲಿ)) ವಹಿಸಿಕೊಂಡ ದಿನಾಂಕದಿಂದ ಜಾರಿಗೆ ಬರುವಂತೆ ಮೂರು ವರ್ಷಗಳ ಅಧಿಕಾರಾವಧಿಗೆ (Sekhar Rao) ಇವರು ನೇಮಕಗೊಂಡಿದ್ದಾರೆ.

ಜನವರಿ 13ರಂದು ನಡೆದ ಕರ್ಣಾಟಕ ಬ್ಯಾಂಕ್ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಈವರ ನೇಮಕಾತಿಗೆ ಮಾನ್ಯತೆ ನೀಡಲಾಗಿದೆ. ಶೇಖರ್ ರಾವ್ ಅವರು ಬ್ಯಾಂಕಿಂಗ್, ಮಾಹಿತಿ ತಂತ್ರಜ್ಞಾನ, ವ್ಯವಹಾರ ನಿರ್ವಹಣೆ, ಕಾರ್ಯತಂತ್ರಗಳಂತಹ ವಿವಿಧ ಕ್ಷೇತ್ರಗಳಲ್ಲಿ ಸುಮಾರು ೨೯ ವರ್ಷಗಳ ಅನುಭವ ಹೊಂದಿದ್ದು, ಬ್ಯಾಂಕಿಂಗ್ ಮತ್ತು ಹಣಕಾಸು ವಲಯದಲ್ಲಿ (BFSI) ಸುಮಾರು 19 ವರ್ಷಗಳ ಸುದೀರ್ಘ ಅನುಭವ ಹೊಂದಿದ್ದಾರೆ.

ಇದನ್ನೂ ಓದಿ | BE Good Do Good | ಭೌತಿಕ ಆಕರ್ಷಣೆಗಳು ಹೆಚ್ಚಾಗಿರುವ ವರ್ತಮಾನಕ್ಕೆ ವಿವೇಕಾನಂದರು ಅನಿವಾರ್ಯ; ಹರಿಪ್ರಕಾಶ್​ ಕೋಣೆಮನೆ

ಇನ್ನು ಕೇಂದ್ರೀಕೃತ ಕಾರ್ಯಾಚರಣೆ ಘಟಕಗಳ ಸ್ಥಾಪನೆ ಮತ್ತು ನಿರ್ವಹಣೆ ವ್ಯವಹಾರ ತಂತ್ರಗಳು ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಯೋಜನೆಗಳಿಗೆ ಸೂಕ್ತ ಸಲಹೆ-ಸೂಚನೆಗಳನ್ನು ನೀಡುವುದು, ಬ್ಯಾಂಕ್‌ಗಳ ಡಿಜಿಟಲ್ ಚಾನೆಲ್‌ಗಳ ನಿರ್ವಹಣೆ ಹೊಸ ವ್ಯವಹಾರಗಳ ನಿರ್ವಹಣೆ, ಡಿಸ್ಟ್ರಿಬ್ಯೂಷನ್ ಚಾನೆಲ್‌ಗಳ ವಿಸ್ತರಣೆ, ಶಾಖೆಗಳ ವಿಸ್ತರಣೆ ಹಾಗೂ ನಿರ್ವಹಣೆ, ಶಾಖೆಗಳು ಮತ್ತು ದೊಡ್ಡ ಮಟ್ಟದ ವ್ಯಾಪಾರ ಘಟಕಗಳ ನಿರ್ವಹಣೆ ಮತ್ತು ಫಿನ್‌ಟೆಕ್‌ ಸ್ಟಾರ್ಟ್‌ಅಪ್‌ನ ಸ್ಥಾಪನೆ ಮುಂತಾದ ಕ್ಷೇತ್ರಗಳಲ್ಲಿ ವಿಶೇಷ ಪರಿಣತಿಯನ್ನು ಇವರು ಹೊಂದಿದ್ದಾರೆ.

ಈ ಮುಂಚೆ ಇವರು 2020ರ ಏಪ್ರಿಲ್‌ನಿಂದ ಫಿನ್‌ಟೆಕ್‌ ʼಸ್ಯಾವಿ ಇಂಡಿಯಾದ (Savvy India) ಸಹ ಸಂಸ್ಥಾಪಕರಾಗಿ ಮತ್ತು ನಿರ್ದೆಶಕರಾಗಿ ಕಾರ್ಯನಿರ್ವಹಿಸಿದ್ದು, ಸುಮಾರು ಆರು ವರ್ಷಗಳ ಕಾಲ ಸಿಎಸ್‌ಬಿ ಬ್ಯಾಂಕ್ ಲಿಮಿಟೆಡ್‌ನ ಕಾರ್ಯಾಚರಣೆ (operations) ಮತ್ತು ಐಟಿ ವಿಭಾಗದ ಮುಖ್ಯಸ್ಥರಾಗಿ, ಆರ್‌ಬಿಎಲ್ ಬ್ಯಾಂಕ್ ಲಿಮಿಟೆಡ್, ಐಎನ್‌ಜಿ ವೈಶ್ಯ ಬ್ಯಾಂಕ್ ಲಿಮಿಟೆಡ್, ಐಸಿಐಸಿಐ ಬ್ಯಾಂಕ್ ಲಿಮಿಟೆಡ್, ಏಷ್ಯನ್ ಪೇಂಟ್ಸ್ ಇಂಡಿಯಾ ಲಿಮಿಟೆಡ್, ಗುಡ್ಡಾಸ್ ನೆರೋಲಾಕ್ ಪೇಂಟ್ಸ್ ಲಿಮಿಟೆಡ್ (ಈಗ ಕನ್ಸಾಯ್ ನೆರೋಲಾಕ್ ಪೇಂಟ್ಸ್ ಲಿಮಿಟೆಡ್) ಮುಂತಾದ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.

ಬ್ಯಾಂಕ್‌ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಸಿಇಒ ಮಹಾಬಲೇಶ್ವರ ಎಂ. ಎಸ್. ಅವರು ಪ್ರತಿಕ್ರಿಯಿಸಿ, “ನಮ್ಮ ನಿರ್ದೇಶಕರ ಮಂಡಳಿಗೆ ಶೇಖರ್ ರಾವ್ ಅವರನ್ನು ಸ್ವಾಗತಿಸಲು ಸಂತೋಷಪಡುತ್ತೇನೆ. ಬ್ಯಾಂಕಿಂಗ್, ಮಾಹಿತಿ ತಂತ್ರಜ್ಞಾನ, ಫಿನ್‌ಟೆಕ್‌ನಂತಹ ಅನೇಕ ಕ್ಷೇತ್ರಗಳಲ್ಲಿ ಅಪಾರ ಅನುಭವವನ್ನು ಪಡೆದಿರುವ ಅವರು ಕರ್ಣಾಟಕ ಬ್ಯಾಂಕಿಗೆ ಉತ್ತಮ ಕೊಡುಗೆ ನೀಡಲಿದ್ದಾರೆ ಎಂದು ಶುಭ ಹಾರೈಸಿದರು.

ಇದನ್ನೂ ಓದಿ | ED raid | ಮಂಗಳೂರಿನ ಉದ್ಯಮಿಗೆ ಸೇರಿದ 17 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಿದ ಜಾರಿ ನಿರ್ದೇಶನಾಲಯ

Exit mobile version