ಬೆಂಗಳೂರು: ಅಭಿವೃದ್ಧಿಶೀಲ ರಾಷ್ಟ್ರಗಳ ಗ್ರಾಮೀಣ ಪ್ರದೇಶಗಳಲ್ಲಿ ಸೌರವಿದ್ಯುತ್ ಸೌಲಭ್ಯವನ್ನು ಹೆಚ್ಚಿಸಲು, ಆಧುನಿಕ ಫೋಟೋ ವೋಲ್ಟಾಯಿಕ್ (ಪಿವಿ) ತಂತ್ರಜ್ಞಾನವನ್ನು ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಮೂಲಕ ಬೆಸೆದು ಪ್ರಸರಿಸುವಲ್ಲಿ ಮಹತ್ವದ ಪಾತ್ರ ವಹಿಸಿರುವ ಅಮೆರಿಕಾದ ರಿಚರ್ಡ್ ಹ್ಯಾನ್ಸೆನ್ ಅವರಿಗೆ ಸೆಲ್ಕೋ ಸಂಸ್ಥೆಯು (Selco India) 2023ನೇ ಸಾಲಿನ ಪ್ರತಿಷ್ಠಿತ ಸೂರ್ಯಮಿತ್ರ ವಾರ್ಷಿಕ ಪ್ರಶಸ್ತಿಯನ್ನು ಘೋಷಿಸಿದೆ.
ಬೆಂಗಳೂರಿನ ವೈಯಾಲಿ ಕಾವಲ್‌ನಲ್ಲಿರುವ ಚೌಡಯ್ಯ ಸ್ಮಾರಕ ಭವನದಲ್ಲಿ ಇದೇ ಮೇ 27ರಂದು ಸೂರ್ಯಮಿತ್ರ ಪ್ರಶಸ್ತಿ ಪ್ರದಾನ ಸಮಾರಂಭವು ನಡೆಯಲಿದೆ ಎಂದು ಸೆಲ್ಕೋ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋಹನ ಭಾಸ್ಕರ ಹೆಗಡೆ ತಿಳಿಸಿದ್ದಾರೆ.
ರಿಚರ್ಡ್ ಹ್ಯಾನ್ಸೆನ್ ಅವರು 1984ರಿಂದ ಮೊದಲ ಬಾರಿಗೆ ಉತ್ತರ ಅಮೇರಿಕಾದ ಡೊಮಿನಿಕನ್ ರಿಪಬ್ಲಿಕ್‌ನಲ್ಲಿ ಮೈಕ್ರೋಫೈನಾನ್ಸ್ ಪರಿಹಾರಗಳೊಂದಿಗೆ ಪಿವಿ ತಂತ್ರಜ್ಞಾನವನ್ನು ಪರಿಚಯಿಸಲು ಲಾಭರಹಿತ ಕಾರ್ಯಕ್ರಮವನ್ನು ಮುನ್ನೆಡೆಸಿದರು. ನಂತರ ಅವರು 1989 ರಲ್ಲಿ ಇದೇ ಮಾದರಿಯನ್ನು ಹೊಂಡುರಾಸ್‌ನಲ್ಲಿ ಅಮೆರಿಕದ ಇಂಧನ ಇಲಾಖೆ ಜತೆಗೆ ಒಪ್ಪಂದ ಮಾಡಿಕೊಂಡು ಪುನರಾವರ್ತಿಸಿದರು. ಈ ಕಾರ್ಯವು ಜಾಗತಿಕವಾಗಿ ಗಮನಾರ್ಹ ಪುನರಾವರ್ತನೆಗೆ ಕಾರಣವಾಯಿತು.
ಇದನ್ನೂ ಓದಿ: Artificial Intelligence: 98 ವಿವಿಧ ಭಾಷೆಗಳಲ್ಲಿ ಹನುಮಾನ್ AI ತಂತ್ರಜ್ಞಾನ; ಏನಿದರ ವಿಶೇಷ?
ಪ್ರಸ್ತುತ ಎನರ್ಜಿ ಅಕ್ಸೆಸ್ ಫೌಂಡೇಷನ್ (www.energyaccessfoundation.org) ನ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ರಿಚರ್ಡ್ ಹ್ಯಾನ್ಸೆನ್, ಜಾಗತಿಕವಾಗಿ ಸುಸ್ಥಿರ ಶಕ್ತಿಯೆಡೆಗಿನ ಪರಿವರ್ತನೆಗೆ ಸಹಾಯ ಮಾಡುವ ಉದ್ದೇಶದಿಂದ 1993 ರಲ್ಲಿ ರಿಚರ್ಡ್ ಸೋಲುಜ್ ಇಂಕ್ (Soluz Inc.,) ಎಂಬ ಸಾಮಾಜಿಕ ಉದ್ಯಮವನ್ನು ಸ್ಥಾಪಿಸಿದರು. ಇದು ಪಿವಿ ಉತ್ಪನ್ನಗಳು ಮತ್ತು ಸಂಬಂಧಿತ ಮೈಕ್ರೋಫೈನಾನ್ಸ್ ಪರಿಹಾರಗಳನ್ನು ಪೂರೈಸುವ ಒಂದು ಅಂಗಸಂಸ್ಥೆಯಾಗಿ ಕೆಲಸ ಮಾಡುತ್ತಿದೆ.
ರಿಚರ್ಡ್ ಹ್ಯಾನ್ಸೆನ್, ಅಮೆರಿಕದ ಯುನೈಟೆಡ್ ಸ್ಟೇಟ್ಸ್ ಏಜೆನ್ಸಿ ಫಾರ್ ಇಂಟರ್ ನ್ಯಾಷನಲ್ ಡೆವಲಪ್ಮೆಂಟ್ (ಯುಎಸ್‌ಎಐಡಿ), ವಿಶ್ವ ಬ್ಯಾಂಕ್ ಮತ್ತು ಇಂಟರ್-ಅಮೆರಿಕನ್ ಅಭಿವೃದ್ಧಿ ಬ್ಯಾಂಕ್ ಸೇರಿದಂತೆ ಬಾಂಗ್ಲಾದೇಶ, ಬೊಲಿವಿಯಾ, ಡೊಮಿನಿಕನ್ ರಿಪಬ್ಲಿಕ್, ಇಥಿಯೋಪಿಯಾ, ಹೈಟಿ, ಭಾರತ, ನೇಪಾಳ, ನಿಕರಾಗುವಾ, ಫಿಲಿಪೈನ್ಸ್ ದೇಶಗಳು ಮತ್ತು ಪ್ರಮುಖ ಸಂಸ್ಥೆಗಳಿಗೆ ಸಲಹಾ ಸೇವೆಗಳನ್ನು ಒದಗಿಸಿದ್ದಾರೆ ಎಂದು ಸೆಲ್ಕೋ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋಹನ ಭಾಸ್ಕರ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ನಿಗದಿಗಿಂತ ಹೆಚ್ಚಿನ ಫೀಸ್ ತೆಗೆದುಕೊಂಡರೆ ಕ್ರಮ; ಖಾಸಗಿ ಶಾಲೆಗಳಿಗೆ ಮಧು ಬಂಗಾರಪ್ಪ ಖಡಕ್ ಎಚ್ಚರಿಕೆ
ಸೂರ್ಯಮಿತ್ರ ಪ್ರಶಸ್ತಿ
ಪ್ರತಿಷ್ಠಿತ ರಾಮೋನ್ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತರಾಗಿರುವ ಡಾ. ಎಚ್. ಹರೀಶ್ ಹಂದೆ ಅವರು ಸ್ಥಾಪಿಸಿ ಮುನ್ನಡೆಸುತ್ತಿರುವ ಸೆಲ್ಕೋ ಸಂಸ್ಥೆಯು ಪ್ರತಿಷ್ಠಿತ ಸೂರ್ಯಮಿತ್ರ ವಾರ್ಷಿಕ ಪ್ರಶಸ್ತಿಯನ್ನು 2012ರಿಂದ ಕೊಡಮಾಡುತ್ತಾ ಬಂದಿದೆ. ಈ ಪ್ರಶಸ್ತಿಯನ್ನು, ಸುಸ್ಥಿರ ಅಭಿವೃದ್ಧಿಗೆ ಗಮನಾರ್ಹ ಕೊಡುಗೆ ನೀಡುವ ಹರಿಕಾರರು ಮತ್ತು ಗ್ರಾಮೀಣ ಜನತೆಯ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತಂದ ಅಸಾಧಾರಣ ವ್ಯಕ್ತಿಗಳು ಅಥವಾ ಸಂಸ್ಥೆಗಳಿಗೆ ನೀಡಲಾಗುತ್ತದೆ.
ಸೆಲ್ಕೋ ಇಂಡಿಯಾ ಸಂಸ್ಥೆ
1995ರಲ್ಲಿ ಸ್ಥಾಪಿತವಾದ ಸೆಲ್ಕೋ ಇಂಡಿಯಾ ಸಂಸ್ಥೆಯು, ಮಾನ್ಯತೆ ಪಡೆದ ಸಾಮಾಜಿಕ ಉದ್ಯಮವಾಗಿದ್ದು, ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ ನವೀಕರಿಸಬಹುದಾದ ಇಂಧನ ಆಧಾರಿತ ಪರಿಹಾರಗಳನ್ನು ಒದಗಿಸುವ ಮೂಲಕ ಬಡತನ ನಿರ್ಮೂಲನೆಯಲ್ಲಿ ವಿಶಿಷ್ಟ ಮಾದರಿಯ ಕೆಲಸ ಮಾಡುತ್ತಿದೆ. ಕರ್ನಾಟಕದ ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಸೆಲ್ಕೋ ಇಂಡಿಯಾ, ದೇಶಾದ್ಯಂತ ಏಳು ರಾಜ್ಯಗಳಲ್ಲಿ ಸೌರ ಇಂಧನದ ಮೂಲಕ ಶಿಕ್ಷಣ, ಆರೋಗ್ಯ ರಕ್ಷಣೆ, ಜೀವನೋಪಾಯ ಮತ್ತು ಗ್ರಾಮೀಣಾಭಿವೃದ್ಧಿಗೆ ಪೂರಕವಾದ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ.
ಇದನ್ನೂ ಓದಿ: Book Release: ಬೆಂಗಳೂರಿನಲ್ಲಿ ಮೇ 12ರಂದು ಡಾ.ಗಣಪತಿ ಭಟ್ ಅವರ ʼಕನ್ನಡದಲ್ಲಿ ಶ್ರೀ ಶಂಕರʼ ಪುಸ್ತಕ ಲೋಕಾರ್ಪಣೆ
ಈ ವಲಯಗಳ ಸುಸ್ಥಿರ ಅಭಿವೃದ್ಧಿಗೆ ಬೇಕಾದ ಹಣಕಾಸು, ಕೌಶಲ್ಯಾಭಿವೃದ್ಧಿ, ಪೂರೈಕೆ ಸರಪಳಿ ಮತ್ತು ನೀತಿ-ನಿರೂಪಗಳ ಚೌಕಟ್ಟನ್ನು ಬಲಪಡಿಸುವ ಕೆಲಸಗಳ ಮೂಲಕ ಎಲ್ಲರೂ ಬಳಸಲು ಸಾಧ್ಯವಾಗುವಂತೆ ವಿಕೇಂದ್ರೀಕೃತ ಇಂಧನ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿದೆ. ಭಾರತವು ಹೊಂದಿರುವ, ಹವಾಮಾನ ಬದಲಾವಣೆ ತಗ್ಗಿಸುವಿಕೆ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ತಲುಪುವ ಬದ್ಧತೆಯ ಸಂದರ್ಭದಲ್ಲಿ ಸೆಲ್ಕೋದ ಈ ಕಾರ್ಯವು ಹೆಚ್ಚು ಪ್ರಸ್ತುತವಾಗಿದೆ. ಸೆಲ್ಕೋದ ಈ ಎಲ್ಲ ಸಮಾಜಮುಖಿ ಕೆಲಸಗಳಿಗಾಗಿ ಆಶ್ಡೆನ್ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.