Site icon Vistara News

Self Harm: ಸಮಾಜ ಸೇವಕ, ರಂಗ ಕಲಾವಿದ ಕಾಪು ಲೀಲಾಧರ ಶೆಟ್ಟಿ ದಂಪತಿ ಆತ್ಮಹತ್ಯೆ

kaup liladhara shetty

ಉಡುಪಿ: ಕಾಪು- ಉಡುಪಿ ಪ್ರಾಂತ್ಯದಲ್ಲಿ ಸಮಾಜ ಸೇವಕರಾಗಿ, ರಂಗಕಲಾವಿದರಾಗಿ, ಜನಾನುರಾಗಿಯಾಗಿ ಖ್ಯಾತಿ ಗಳಿಸಿದ್ದ ಕಾಪು ಲೀಲಾಧರ ಶೆಟ್ಟಿ ದಂಪತಿಗಳು ನಿನ್ನೆ ರಾತ್ರಿ ಆತ್ಮಹತ್ಯೆ (Self Harm) ಮಾಡಿಕೊಂಡಿದ್ದಾರೆ.

ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟಿರುವುದಾಗಿ ತಿಳಿದು ಬಂದಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ. ನಿನ್ನೆ ತಡರಾತ್ರಿ ಕಾಪುವಿನ ತಮ್ಮ ಮನೆಯಲ್ಲಿ ಪತ್ನಿ ವಸುಂಧರಾ ಜೊತೆ ಕಾಪು ಲೀಲಾಧರ ಶೆಟ್ಟಿ ನೇಣಿಗೆ ಶರಣಾಗಿದ್ದಾರೆ. ತಮ್ಮ ಮನೆಯ ಪಕ್ಕಾಸಿಗೆ ಸೀರೆಯನ್ನು ಬಿಗಿದು, ಅದರ ಎರಡೂ ತುದಿಗೆ ದಂಪತಿ ನೇಣು ಹಾಕಿಕೊಂಡಿದ್ದಾರೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲೀಲಾಧರ ಶೆಟ್ಟಿಯವರು ಸಮಾಜ ಸೇವಕ, ಹಿರಿಯ ರಂಗ ಕಲಾವಿದ, ಧಾರ್ಮಿಕ ಮತ್ತು ಸಾಮಾಜಿಕ ಮುಂದಾಳು ಆಗಿದ್ದರಲ್ಲದೆ, ಧರಣಿ ಸಮಾಜ ಸೇವಾ ಸಂಸ್ಥೆಯ ಅಧ್ಯಕ್ಷ, ಕಾಪು ಬಂಟರ ಸಂಘದ ಪ್ರಧಾನ ಕಾರ್ಯದರ್ಶಿಯೂ ಆಗಿದ್ದರು. ಅವರಿಗೆ 68 ವರ್ಷ ಹಾಗೂ ಪತ್ನಿ ವಸುಂಧರಾ ಶೆಟ್ಟಿಯವರಿಗೆ 58 ವರ್ಷ ವಯಸ್ಸಾಗಿತ್ತು. ಕೌಟುಂಬಿಕ ಕಾರಣಗಳಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಲೀಲಾಧರ ಶೆಟ್ಟಿ ರಂಗ ಕಲಾವಿದ, ಸಂಘಟಕ ಹಾಗೂ ಹಾಗೂ ಕಲಾಪೋಷಕರಾಗಿದ್ದರು. ಕಾಪು ರಂಗತರಂಗ ನಾಟಕ ತಂಡವನ್ನು ಕಟ್ಟಿ ನಾಟಕ ಕಲೆಯನ್ನು ಪ್ರಸಾರಗೊಳಿಸಲು ಅಪರಿಮಿತವಾಗಿ ಶ್ರಮಿಸಿದ್ದರು. ಸಮಾಜ ಸೇವೆಗಾಗಿ ಜಿಲ್ಲಾ ರಾಜ್ಯೋತ್ಸವ, ಸಮಾಜರತ್ನ ಪುರಸ್ಕಾರ ಸಹಿತವಾಗಿ ಹಲವಾರು ಪ್ರಶಸ್ತಿ, ಪುರಸ್ಕಾರ, ಗೌರವ ಪಡೆದಿದ್ದರು. ಸಾವಿರಾರು ಮಂದಿಗೆ ಶಿಕ್ಷಣ, ಉದ್ಯೋಗ ದೊರೆಯಲು ಕಾರಣರಾಗಿದ್ದರು.

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ಅತ್ಯಾಪ್ತರಾಗಿದ್ದ ಲೀಲಾಧರ ಶೆಟ್ಟಿ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಮತ್ತು ಜೆಡಿಎಸ್ ಅಭ್ಯರ್ಥಿಯಾಗಿಯೂ ಚುನಾವಣೆಗೆ ಸ್ಪರ್ಧಿಸಿದ್ದರು. ಬಹಳಷ್ಟು ರಾಜಕೀಯ ಮತ್ತು ಸಾಮಾಜಿಕ ನಾಯಕರಿಗೆ ಮಾರ್ಗದರ್ಶಕರಾಗಿದ್ದ ಅವರು ಮಜೂರು ನಾಗರಿಕ ಸಮಿತಿ ಮೂಲಕ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿ ಗ್ರಾ. ಪಂ. ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಆಸುಪಾಸಿನ ಹಲವಾರು ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ಧಾರದಲ್ಲಿ ಮುಂಚೂಣಿಯಲ್ಲಿದ್ದರು. ಪ್ರಸ್ತುತ ಕರಂದಾಡಿ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷರಾಗಿ, ಹೊಸಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಗ್ರಾಮ ಪ್ರಚಾರ ಸಮಿತಿ ಪ್ರಧಾನ ಸಂಚಾಲಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು.

ಬುಧವಾರ ಸಂಜೆ 4 ಗಂಟೆಗೆ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಲೀಲಾಧರ ಶೆಟ್ಟಿ ಅವರ ಅಕಾಲಿಕ ಮರಣ ಕಾಪುವಿನ ಜನತೆಯನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಮಂಗಳವಾರ ಮಧ್ಯರಾತ್ರಿಯಿಂದಲೇ ನೂರಾರು ಮಂದಿ ಸಂಬಂಧಿಕರು, ಅಭಿಮಾನಿಗಳು, ಹಿತೈಷಿಗಳು ಮನೆ ಮತ್ತು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ.

ಇದನ್ನೂ ಓದಿ: Techie Death : ಟ್ರಕ್ಕಿಂಗ್‌ನಲ್ಲಿ ಮಿಸ್‌ ಆದವನು ಶವವಾಗಿ ಪತ್ತೆ; 3000 ಅಡಿ ಎತ್ತರದಿಂದ ಹಾರಿ ಆತ್ಮಹತ್ಯೆ!

Exit mobile version