ಬೆಂಗಳೂರು: ಇಲ್ಲಿನ ಕಾಡುಗೋಡಿ ಸಮೀಪದ ಸಾಯಿ ಗಾರ್ಡನ್‌ನಲ್ಲಿ ಮಕ್ಕಳನ್ನು ಕೊಂದು ದಂಪತಿ ಆತ್ಮಹತ್ಯೆ ಶರಣಾಗಿದ್ದಾರೆ. ಒಂದೇ ಕುಟುಂಬದ ನಾಲ್ವರು (Self Harming) ಮೃತಪಟ್ಟಿದ್ದಾರೆ. ಆತ್ಮಹತ್ಯೆಗೂ ಮುನ್ನ ಪತ್ನಿ ಹಾಗೂ ಮಕ್ಕಳನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ಪತಿ ವೀರಾರ್ಜುನ ವಿಜಯ್ (31), ಪತ್ನಿ ಹೇಮಾವತಿ (29) ಇಬ್ಬರು ಹೆಣ್ಣುಮಕ್ಕಳು ಮೃತಪಟ್ಟಿದ್ದಾರೆ.
ವೀರಾರ್ಜುನ ವಿಜಯ್ ಐಟಿಪಿಎಲ್‌ನಲ್ಲಿರುವ ಯೂರೋ ಪಿಲ್ಸ್ ಎಂಬಲ್ಲಿ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಪತ್ನಿ ಹೇಮಾವತಿ ಮನೆಯಲ್ಲೇ ಇರುತ್ತಿದ್ದರು. ಎರಡುವರೆ ವರ್ಷದ ಮೋಕ್ಷ ಹಾಗೂ ನಾಲ್ಕು ವರ್ಷದ ಸೃಷ್ಟಿ ಎಂಬ ಇಬ್ಬರು ಹೆಣ್ಣುಮಕ್ಕಳು ಇದ್ದರು.
ಮೂರು ದಿನಗಳ ಹಿಂದೆಯೇ ಆತ್ಮಹತ್ಯೆಗೆ ಶರಣು!
ಹೇಮಾವತಿ ಸೋದರ ಕಳೆದ ಮೂರು ದಿನಗಳಿಂದ ಫೋನ್ ಮಾಡುತ್ತಿದ್ದಾರೆ. ಆದರೆ ಯಾರು ಫೋನ್ ಸ್ವೀಕರಿಸದೆ ಇದ್ದಾಗ ಗುರುವಾರ (ಆ.3) ಬೆಳಗ್ಗೆ ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಬಂದಿದ್ದಾರೆ. ಮನೆ ಬಾಗಿಲು ಎಷ್ಟೇ ತಟ್ಟಿದ್ದರೂ ತೆರೆಯದೇ ಇದ್ದಾಗ ಅನುಮಾನಗೊಂಡು ಮನೆಯ ಕಿಟಕಿಯಿಂದ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ತಲುಪಿಸಿದ್ದಾರೆ.
ವೀರಾರ್ಜುನ ವಿಜಯ್ ಹಾಗೂ ಹೇಮಾವತಿ ಮೂಲತಃ ಆಂಧ್ರ ಪ್ರದೇಶ ಮೂಲದವರು ಎಂದು ತಿಳಿದು ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಕಾಡುಗೋಡಿ ಪೊಲೀಸರು (Kadugodi police station) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಬಾಗಿಲು ಮುರಿದು ಒಳ ಪ್ರವೇಶಿಸಿದ್ದಾರೆ. ಎಫ್ಎಸ್ಎಲ್ ತಂಡ ಕೂಡ ದೌಡಾಯಿಸಿದೆ.
ಈ ಸಂಬಂಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಶುರು ಮಾಡಿದ್ದಾರೆ. ನಾಲ್ವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಈ ಘಟನೆಗೆ ನಿಖರ ಕಾರಣವೇನು ಎಂಬುದು ತಿಳಿದು ಬಂದಿಲ್ಲ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ