Site icon Vistara News

Self Harming: ನೇಣು ಬಿಗಿದುಕೊಂಡು ಅತಿಥಿ ಉಪನ್ಯಾಸಕಿ ಸಾವು

Self Harming Guest lecturer hangs herself to death

ಹಾಸನ: ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಗಾಯಿತ್ರಿ ಬಡಾವಣೆಯಲ್ಲಿ ನೇಣು ಬಿಗಿದುಕೊಂಡು ಅತಿಥಿ ಉಪನ್ಯಾಸಕಿ ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ.

ಕು. ದೀಪಾ (34) ಆತ್ಮಹತ್ಯೆಗೆ ಶರಣಾದ ಅತಿಥಿ ಉಪನ್ಯಾಸಕಿಯಾಗಿದ್ದಾರೆ. ಇವರು ಚನ್ನರಾಯಪಟ್ಟಣದ ಗಾಯತ್ರಿ ಬಡಾವಣೆಯ ನಿವಾಸಿ ಸೋಮಶೇಖರ್ ಹಾಗೂ ಭಾಗ್ಯ ದಂಪತಿ ಪುತ್ರಿಯಾಗಿದ್ದಾರೆ. ಚನ್ನರಾಯಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

Self Harming Guest lecturer hangs herself to death

ಆದರೆ, ಗುರುವಾರ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈಕೆಯ ಸಹೋದರ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದು, ವಿಷಯ ತಿಳಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ.

ಪಾಸ್ ಆಗಿದ್ದರೂ ಫೇಲ್ ಎಂದು ತಿಳಿದು ನೇಣಿಗೆ ಶರಣಾದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ

ಮಂಡ್ಯ: ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ (SSLC Result 2024) ಪ್ರಕಟಗೊಂಡಿದೆ. ಮಂಡ್ಯದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯೊಬ್ಬಳು ನೇಣಿಗೆ ಶರಣಾಗಿದ್ದಾಳೆ. ಪರೀಕ್ಷೆಯಲ್ಲಿ ಪಾಸ್ ಆಗಿದ್ದರೂ ಫೇಲ್ ಎಂದು ತಿಳಿದು ನೇಣಿಗೆ ಶರಣಾದ್ದಾಳೆ.

ಅಮೃತ (16) ನೇಣಿಗೆ ಶರಣಾದ ವಿದ್ಯಾರ್ಥಿನಿ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹುಲಿಗೆರೆಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಅಮೃತ ನಗರಕೆರೆ ಗ್ರಾಮದ ಸರ್ಕಾರಿ ಅನುದಾನಿತ ಪೂರ್ಣಿಮಾ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದ ಅಮೃತ ಶೇ.57 ಅಂಕ ಪಡೆದು ತೇರ್ಗಡೆ ಹೊಂದಿದ್ದಳು.

ಆದರೆ ಪರೀಕ್ಷೆಯಲ್ಲಿ ಫೇಲ್‌ ಆಗಿಬಿಟ್ಟೆ ಎಂದು ತಿಳಿದು ಮನೆಯಲ್ಲಿ ಯಾರು ಇಲ್ಲದಾಗ ನೇಣಿಗೆ ಶರಣಾಗಿದ್ದಾಳೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ.

ಕಟ್ಟಡದ ಮೇಲಿಂದ ಬಿದ್ದು ಯುವಕ ಸೂಸೈಡ್‌

ಬೆಂಗಳೂರು: ಪಿ.ಜಿ ಮೇಲಿಂದ ಬಿದ್ದು ಯುವಕ ಆತ್ಮಹತ್ಯೆ (Self harming) ಮಾಡಿಕೊಂಡಿದ್ದಾನೆ. ಬೆಂಗಳೂರಿನ ವೈಟ್ ಫಿಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಅಂಬೇಡ್ಕರ್ ನಗರದಲ್ಲಿ ಘಟನೆ ನಡೆದಿದೆ. ಕಲಬುರಗಿ ಮೂಲದ 28ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ:SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

ಘಟನಾ ಸ್ಥಳಕ್ಕೆ ವೈಟ್ ಫಿಲ್ಡ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯುವಕ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದ ಎನ್ನಲಾಗಿದೆ. ಆದರೆ ಅಲೆದಾಡಿ ಸುಸ್ತಾದ ಯುವಕನಿಗೆ ಎಲ್ಲೂ ಕೆಲಸ ಸಿಕ್ಕಿರಲಿಲ್ಲ ಎನ್ನಲಾಗಿದೆ. ಇದರಿಂದ ಮನನೊಂದು ತಾನು ವಾಸವಿದ್ದ ಪಿಜಿ ಕಟ್ಟಡದ ಮೇಲಿಂದ ಬಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version