Site icon Vistara News

Self Harming: ಖಿನ್ನತೆಯಿಂದ ನೇಣಿಗೆ ಶರಣಾದ ಕೇರಳ ಮೂಲದ ಯುವತಿ

Self Harming

ಬೆಂಗಳೂರು: ಕೇರಳ ಮೂಲದ ಯುವತಿಯೊಬ್ಬಳು ಖಿನ್ನತೆಯಿಂದ ನೇಣಿಗೆ ಶರಣಾಗಿರುವ ಘಟನೆ (Self Harming) ನಗರದ ಕುಮಾರಸ್ವಾಮಿ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಂಜನಾ‌ (26) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.

ನಗರದ ಪಿ.ಜಿ.ಯಲ್ಲಿ ಯುವತಿ ವಾಸವಿದ್ದಳು. ಇತ್ತೀಚೆಗೆ ತಂದೆ ತೀರಿಕೊಂಡಿದ್ದರಿಂದ ಕೆಲ ದಿನಗಳಿಂದ ಒಂಟಿತನ ಹಾಗೂ ಖಿನ್ನತೆಗೆ ಒಳಗಾಗಿದ್ದಳು ಎನ್ನಲಾಗಿದೆ. ಆಗಸ್ಟ್ 3ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಮಹಿಳೆ ಶವ ಪತ್ತೆ

ಆನೇಕಲ್: ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಸಮೀಪದ ಶಿಲೀಂಧ್ರದೊಡ್ಡಿ ಬಾಲಾಜಿ ಬಡಾವಣೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಮಹಿಳೆ ಶವ ಪತ್ತೆಯಾಗಿದೆ.

ಪಾಳು ಬಿದ್ದ ನೀರಿನ ತೊಟ್ಟಿಯಲ್ಲಿ ಸುಮಾರು 30 ವರ್ಷ ವಯಸ್ಸಿನ ಅಪರಿಚಿತ ಮಹಿಳೆ ಶವ ಪತ್ತೆಯಾಗಿದ್ದು, ಕೊಲೆಗೈದು ತೊಟ್ಟಿಯಲ್ಲಿ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ. ಕಳೆದ ನಾಲ್ಕೈದು ದಿನಗಳ ಹಿಂದೆ ಶವ ಎಸೆದು ಹೋಗಿರುವ ಅನುಮಾನಗಳು ಮೂಡಿವೆ. ಬನ್ನೇರುಘಟ್ಟ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Murder Case: ಪತ್ನಿಯನ್ನು ಕೊಂದು ಪರಾರಿಯಾದ, ಪೊಲೀಸರಿಂದ ತಪ್ಪಿಸಿಕೊಳ್ಳಲು ಕಟ್ಟಡದಿಂದ ಜಿಗಿದು ಸತ್ತ!

Murder case

ಕೋಲಾರ: ಪತ್ನಿಯನ್ನು ಕೊಂದು (Murder Case) ಪರಾರಿಯಾಗಿದ್ದ ಪಾತಕಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಕಟ್ಟಡದಿಂದ ಜಿಗಿದು ತೀವ್ರವಾಗಿ ಗಾಯಗೊಂಡು ಸತ್ತುಹೋಗಿದ್ದಾನೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ (Bangalore Crime) ಪತ್ನಿಯನ್ನು ಕೊಂದಿದ್ದ (husband killed wife) ಆರೋಪಿ, ಕೋಲಾರದಲ್ಲಿ (Kolar News) ಸಾವಿಗೀಡಾಗಿದ್ದಾನೆ.

ಕೊಲೆ ನಡೆದ ಐದು ದಿನದ ಬಳಿಕ, ಆರೋಪಿ ತಬ್ರೇಝ್ ಪಾಷಾನ ಬೆನ್ನು ಹತ್ತಿದ ಪೊಲೀಸರಿಗೆ ಆತನ ಹೆಣ ಎದುರಾಗಿದೆ. ಫೇಸ್‌ಬುಕ್ ಲೈವ್ ಮಾಡುತ್ತಲೇ ಪತ್ನಿಯ ಹತ್ಯೆ ಮಾಡಿದ್ದ ಪಾತಕಿ, ಪೊಲೀಸರಿಂದ ತಪ್ಪಿಸಿಕೊಳ್ಳುವ ಆತುರದಲ್ಲಿ ಜೀವ ಕಳೆದುಕೊಂಡಿದ್ದಾನೆ.

ಫಾತಿಮಾ‌ (34) ಪತಿಯಿಂದ ಕೊಲೆಯಾದ ಮಹಿಳೆ. ಬೆಂಗಳೂರಿನ ಚಾಮರಾಜಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಐದು ವರ್ಷಗಳ ಹಿಂದೆಯೇ ಈ ದಂಪತಿ ದೂರವಾಗಿದ್ದರು. ಆರೋಪಿ ತಬ್ರೇಝ್ ಪಾಷಾ ಕಳ್ಳತನ ಕೇಸ್, ಗಾಂಜಾ ಕೇಸ್‌ನಲ್ಲಿ ಭಾಗಿಯಾಗಿದ್ದ. ಇತ್ತ ಅಂಗವಿಕಲ ತಾಯಿಯೊಂದಿಗೆ ಇಬ್ಬರು ಮಕ್ಕಳ ಜತೆ ಫಾತಿಮಾ ವಾಸವಿದ್ದಳು. ಆದರೂ ಆಗಾಗ ಮನೆಗೆ ಬಂದು ಜಗಳ ಮಾಡುತ್ತಿದ್ದ. ಪದೇ ಪದೆ ಮನೆಗೆ ಬರುವಂತೆ ಕಿರುಕುಳ ಕೊಡುತ್ತಿದ್ದ.

ಇತ್ತೀಚೆಗೆ ರಸ್ತೆಯಲ್ಲಿ ಆಕೆಯನ್ನು ಅಡ್ಡ ಹಾಕಿ ಜಗಳ ತೆಗೆದಿದ್ದ ತಬ್ರೇಝ್, ಕೊಲೆ ಮಾಡುತ್ತೇನೆ ಎಂದು ಬೆದರಿಸಿದ್ದ. ಹೀಗಾಗಿ ಫಾತಿಮಾ ತಾಯಿ, ತಬ್ರೇಝ್ ಏನಾದರೂ ಮಾಡುತ್ತಾನೆ ಎಂಬ ಆತಂಕದಿಂದ ಮನೆಗೆ ಸಿಸಿಟಿವಿ ಅಳವಡಿಸಿದ್ದರು. ಸೋಮವಾರ ಬೆಳಗ್ಗೆ 8.30ರ ಸುಮಾರಿಗೆ ಮನೆಗೆ ಬಂದು ಜಗಳ ತೆಗೆದಿದ್ದ ತಬ್ರೇಜ್ ಪಾಷ, ಇಬ್ಬರು ಮಕ್ಕಳನ್ನು ಹೊರಗೆ ಕಳಿಸಿದ್ದ. ತಾಯಿಯ ಮುಂದೆಯೇ ಪತ್ನಿಗೆ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದ.

ಮನೆಗೆ ಬರುವ ಮುನ್ನ ಹಾಗೂ ಹತ್ಯೆಯ ವೇಳೆ ತನ್ನ ಕೃತ್ಯವನ್ನು ಈ ಪಾತಕಿ ಫೇಸ್‌ಬುಕ್‌ ಲೈವ್ ಮಾಡಿದ್ದ. ಕೊಲೆಯ ಬಳಿಕ ಕೋಲಾರಕ್ಕೆ ಕಾಲ್ಕಿತ್ತಿದ್ದ. ಮೊಬೈಲ್ ಬಳಸದೇ ಕೋಲಾರದ ಮಸೀದಿಯಲ್ಲಿ ನಾಲ್ಕು ದಿನ ಉಳಿದುಕೊಂಡಿದ್ದ. ಬಳಿಕ ನಿನ್ನೆ ಕೋಲಾರದ ಚಿಕ್ಕಮ್ಮನ ಮನೆಗೆ ತೆರಳಿದ್ದ.

ಇದನ್ನೂ ಓದಿ: Actor Darshan: ರೇಣುಕಾ ಸ್ವಾಮಿ ಕೊಲೆ ಆರೋಪಿಗಳ ನಡುವೆಯೇ ಚಕಮಕಿ, ಗೋಳಾಟ!

ಆರೋಪಿಯನ್ನು ಬಂಧಿಸಲು ಕೋಲಾರಕ್ಕೆ ತೆರಳಿದ್ದ ಚಾಮರಾಜಪೇಟೆ ಪೊಲೀಸರ ತಂಡ ಚಿಕ್ಕಮ್ಮನ ಮನೆಗೆ ಪ್ರವೇಶಿಸಿದಾಗ, ತಪ್ಪಿಸಿಕೊಳ್ಳುವ ಭರದಲ್ಲಿ ಸುಮಾರು 12 ಅಡಿ ಎತ್ತರದ ಮನೆಯ ಟೆರೇಸ್‌ನಿಂದ ಈತ ಜಿಗಿದಿದ್ದಾನೆ. ಆಗ ಬಿದ್ದು ಅಸ್ವಸ್ಥನಾಗಿದ್ದ. ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಲ್ಲಿ ಸಾವಿಗೀಡಾಗಿದ್ದಾನೆ.

Exit mobile version