ಚಿಕ್ಕಬಳ್ಳಾಪುರ: ವೈದ್ಯನಾಗಬೇಕೆಂಬ ಕನಸು ಕಂಡಿದ್ದ ವಿದ್ಯಾರ್ಥಿಯೊಬ್ಬ ಕೆರೆಗೆ ಹಾರಿ ಆತ್ಮಹತ್ಯೆ (Self Harming) ಮಾಡಿಕೊಂಡಿರುವ ದುರ್ಘಟನೆ ನಡೆದಿದೆ. ಶಿಡ್ಲಘಟ್ಟ ನಗರದ ನಿವಾಸಿ ನಯಾಜ್ ಪಾಷ ಮೃತ ದುರ್ದೈವಿ.
ಇತ್ತೀಚೆಗೆ ನಡೆದ ಸಿಇಟಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿತ್ತು. ಇದರಿಂದ ನಯಾಜ್ ಪಾಷ ತೀವ್ರವಾಗಿ ನೊಂದಿದ್ದ. ಮನೆಯಲ್ಲಿ ಮಂಕಾಗಿ ಕುಳಿತಿರುತ್ತಿದ್ದ. ಇದೇ ವಿಚಾರವಾಗಿ ನಿನ್ನೆ ರಾತ್ರಿ ಕುಟುಂಬಸ್ಥರೊಂದಿಗೆ ಗಲಾಟೆ ಮಾಡಿಕೊಂಡಿದ್ದ.
ಕಡಿಮೆ ಅಂಕ ಬಂದಿದ್ದು ಭಾರಿ ನೋವನ್ನು ತಂದಿತ್ತು. ಹೀಗಾಗಿ ಮನನೊಂದು ಶಿಡ್ಲಘಟ್ಟ ನಗರದ ಅಮ್ಮನ ಕೆರೆಗೆ ಹಾರಿ ಮೃತಪಟ್ಟಿದ್ದಾನೆ. ವೈದ್ಯನಾಗಬೇಕೆಂಬ ಆಸೆ ಹೊಂದಿದ್ದ ಆತನೊಂದಿಗೆ ಕೆರೆಯಲ್ಲಿ ಕೊಚ್ಚಿ ಹೋಗಿದೆ. ರಾತ್ರಿ ಮನೆಯಿಂದ ಸಿಟ್ಟಿನಿಂದ ಹೊರಟ ಮಗ ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಕೆರೆಯಲ್ಲಿ ತೇಲುತ್ತಿದ್ದ ಮೃತದೇಹವನ್ನು ಪೊಲೀಸರು ಮೇಲಕ್ಕೆ ಎತ್ತಿದ್ದು, ಮರಣೋತ್ತರ ಪರೀಕ್ಷೆಗಾಗಿ ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Weather report : ಇನ್ನೊಂದು ವಾರ ಕಾಣೆಯಾಗುವ ಸೂರ್ಯ; ಬೆಂಗಳೂರು, ಕರಾವಳಿಯಲ್ಲಿ ಭಾರಿ ಮಳೆ
ಅನುಮಾನಾಸ್ಪದವಾಗಿ ಗೃಹಿಣಿ ಸಾವು
ಹಾಸನ: ವಿವಾಹಿತ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದು (Woman Death), ಆಕೆಯ ಗಂಡನ ಮನೆಯವರು ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಮೃತ ಮಹಿಳೆಯ ಪೋಷಕರು ಆರೋಪಿಸಿದ್ದಾರೆ.
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ನೆಟ್ಟೆಕೆರೆ ಗ್ರಾಮದಲ್ಲಿ ಘಟನೆ ನಡೆದಿದೆ. ಅನುಷಾ (21) ಮೃತ ಮಹಿಳೆ. ನಾಲ್ಕೂವರೆ ವರ್ಷದ ಹಿಂದೆ ನೆಟ್ಟೆಕೆರೆ ಗ್ರಾಮದ ಕಿರಣ್ ಎಂಬಾತನ ಜತೆಗೆ ಅನುಷಾ ಮದುವೆಯಾಗಿತ್ತು. ಹೃದಯಾಘಾತದಿಂದ ಅನುಷಾ ಸಾವು ಸಂಭವಿಸಿದೆ ಎಂದು ನಿನ್ನೆ ಆಕೆಯ ಪೋಷಕರಿಗೆ ಪತಿಯ ಸಂಬಂಧಿಕರು ಮಾಹಿತಿ ನೀಡಿದ್ದರು.
ನಿನ್ನೆ ನೆಟ್ಟೆಕೆರೆ ಗ್ರಾಮಕ್ಕೆ ಬಂದು ಮೃತದೇಹ ನೋಡಿದ ಮಹಿಳೆ ಸಂಬಂಧಿಕರು, ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ನೇಣಿನಿಂದ ಸಾವಾಗಿದೆ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಹೇಳಿದ್ದಾರೆ. ನೇಣಿನಿಂದ ಅನುಷಾ ಮೃತಪಟ್ಟಿದ್ದರೂ ತವರಿನ ಸಂಬಂಧಿಕರಿಗೆ ಹೃದಯಾಘಾತ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ. ನೇಣಿನಿಂದ ಸಾವಾಗಿದೆ ಎಂದಾಗಿದ್ದರೆ ಇದು ಅತ್ಮಹತ್ಯೆಯೊ ಕೊಲೆಯೊ ಎನ್ನುವ ಬಗ್ಗೆ ಅನುಮಾನ ಪರಿಹಾರ ಆಗಬೇಕಿದೆ. ಹೀಗಾಗಿ ಘಟನೆ ಸಂಬಂಧಿಸಿ ಸಮಗ್ರ ತನಿಖೆ ಆಗಬೇಕು ಎಂದು ಅನುಷಾ ಕುಟುಂಬ ಸದಸ್ಯರು ಒತ್ತಾಯಿಸಿದ್ದಾರೆ.
ನುಗ್ಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹಾಸನದ ವೈದ್ಯಕೀಯ ಬೋಧಕ ಆಸ್ಪತ್ರೆಯಲ್ಲಿ ಮರಣೋರ ಪರೀಕ್ಷೆ ನಡೆಸಿ ಪೊಲೀಸರು ಮೃತದೇಹ ಹಸ್ತಾಂತರಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ