ಮಂಗಳೂರು: ಹಾಸ್ಟೆಲ್‌ನಲ್ಲಿ ನೇಣು ಬಿಗಿದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ (Self Harming) ಮಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯಲ್ಲಿ ನಡೆದಿದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿ ಮನೋಜ್ (18) ಆತ್ಮಹತ್ಯೆ ಮಾಡಿಕೊಂಡವನು.
ಆಳ್ವಾಸ್ ಸಂಸ್ಥೆ ಹಾಸ್ಟೆಲ್‌ನ ಬಾತ್ ರೂಂನಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾನೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಗದಗ ಜಿಲ್ಲೆ ಮುಂಡರಗಿ ತಾಲೂಕಿನ ತರ್ಚಿಹಾಳದ ಮಲ್ಲಪ್ಪ ಎಂಬುವವರ ಮಗ ಮನೋಜ್ ಮೂಡಬಿದ್ರೆಯಲ್ಲಿ ವ್ಯಾಸಂಗ ಮಾಡುತ್ತಿದ್ದ.
ವಿಷಯ ತಿಳಿಯುತ್ತಿದ್ದಂತೆ ಹಾಸ್ಟೆಲ್‌ಗೆ ಪೋಷಕರು ದೌಡಾಯಿಸಿದ್ದು, ಘಟನಾ ಸ್ಥಳಕ್ಕೆ ಬರುವವರೆಗೂ ಮೃತದೇಹವನ್ನು ಹೊರ ತೆಗೆಯದಂತೆ ಪಟ್ಟು ಹಿಡಿದರು. ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಮನೋಜ್ ಪೋಷಕರು ಸೂಕ್ತ ತನಿಖೆ ನಡೆಸುವಂತೆ ಮೂಡಬಿದ್ರೆ ಪೊಲೀಸರಿಗೆ ಮನವಿ ಮಾಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ತನಿಖೆಯನ್ನು ಮುಂದುವರಿಸಿದ್ದಾರೆ.
ಕೋಲಾರದಲ್ಲಿ ಮರಕ್ಕೆ ನೇಣು ಬಿಗಿದುಕೊಂಡ ವ್ಯಕ್ತಿ
ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರದ ಮೆಟ್ಟುಬಂಡೆ ರಾಷ್ಟ್ರೀಯ ಹೆದ್ದಾರಿ ಬಳಿ ನಡೆದಿದೆ. ಕೋಲಾರ ಹೊರವಲಯದ ಟಮಕ ನಿವಾಸಿ ಮಲ್ಲಿಕಾರ್ಜುನ್ (37) ಮೃತಪಟ್ಟವರು.
ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲೇ ಬೈಕ್ ಹಾಗೂ ಆತನ ಜೇಬಿನಲ್ಲಿ ಎಸ್‌ಎಲ್‌ವಿ ಎಂಟರ್ ಪ್ರೈಸರ್ಸ್‌ನ ಕಾರ್ಡ್‌ವೊಂದು ಪತ್ತೆಯಾಗಿದೆ. ಸದ್ಯ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.
ಹಿಂಬದಿಯಿಂದ ಗುದ್ದಿ ಮಹಿಳೆಯರ ಮೇಲೆ ಹರಿದ ಟ್ಯಾಂಕರ್; ಸಿಸಿ ಕ್ಯಾಮೆರಾದಲ್ಲಿ ಸೆರೆ
ಬಳ್ಳಾರಿ: ನಡೆದು ಹೋಗುತ್ತಿದ್ದ ಮಹಿಳೆಯರಿಬ್ಬರಿಗೆ ಪೆಟ್ರೋಲ್ ಟ್ಯಾಂಕರ್ ಡಿಕ್ಕಿ (Road Accident) ಹೊಡೆದಿದೆ. ಪರಿಣಾಮ ಸ್ಥಳದಲ್ಲಿಯೇ ಓರ್ವ ಮಹಿಳೆ ಮೃತಪಟ್ಟಿದ್ದರೆ, ಮತ್ತೊಬ್ಬ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಳ್ಳಾರಿ ನಗರದ ಮೋತಿ ಸರ್ಕಲ್‌ನಲ್ಲಿ ಭಾನುವಾರ ಈ ದುರ್ಘಟನೆ ನಡೆದಿದೆ.
ಮುಂಡರಗಿ ಗ್ರಾಮದ ರಫಿಯಾ ಬೇಗಂ (26) ಮೃತ ದುರ್ದೈವಿ. ಸಬೀನಾ ಎಂಬಾಕೆ ಗಾಯಗೊಂಡಿದ್ದು ವಿಮ್ಸ್‌ನಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ಇನ್ನು ಅಪಘಾತದ ದೃಶ್ಯವೆಲ್ಲವೂ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಮಹಿಳೆಯರು ಜತೆಯಾಗಿ ನಡೆದು ಹೋಗುತ್ತಿದ್ದರು. ಇನ್ನೇನು ರಸ್ತೆ ದಾಟಬೇಕೆಂದು ಹೋದಾಗ ಹಿಂದಿನಿಂದ ಬಂದು ಪೆಟ್ರೋಲ್ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕೆಳಗೆ ಬಿದ್ದಿದ್ದಾರೆ. ಈ ವೇಳೆ ರಫೀಯಾ ಬೇಗಂ ಮೇಲೆ ಟ್ಯಾಂಕರ್ ಹರಿದಿದೆ. ಪರಿಣಾಮ ಗಂಭೀರ ಗಾಯಗೊಂಡು ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಗಂಭೀರ ಗಾಯಗೊಂಡಿರುವ ಸಬೀನಾಳನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಸದ್ಯ ಸಬೀನಾಗೆ ಚಿಕಿತ್ಸೆ ಮುಂದುವರಿದಿದ್ದು, ಸ್ಥಿತಿ ಚಿಂತಾಜನಕವಾಗಿದೆ. ಬಳ್ಳಾರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಟ್ಯಾಂಕರ್ ಹಾಗೂ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬೈಕ್ ಸವಾರರಿಬ್ಬರ ಜೀವ ತೆಗೆದ ಅಪಘಾತಗಳು
ವಿಜಯಪುರ/ಮೈಸೂರು: ಬೈಕ್ ಮತ್ತು ಹೆಚ್.ಪಿ ಟ್ಯಾಂಕರ್ ನಡುವೆ ಮುಖಾಮುಖಿ (Road Accident) ಡಿಕ್ಕಿಯಾಗಿದೆ. ಪರಿಣಾಮ ಸವಾರ ಸ್ಥಳದಲ್ಲೇ ಅಸುನೀಗಿರುವ ಘಟನೆ ವಿಜಯಪುರ ನಗರದ ಬೇಗಂ ತಲಾಬ್ ಬಳಿ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟಿರುವ ಬೈಕ್ ಸವಾರನ ಹೆಸರು ಹಾಗೂ ಮಾಹಿತಿ ಲಭ್ಯವಾಗಿಲ್ಲ. ಅಲ್ಲದೇ, ಅಪಘಾತದ ಬಳಿಕ ಟ್ಯಾಂಕರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಸ್ಥಳಕ್ಕೆ ವಿಜಯಪುರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ವಿಜಯಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ