ಕಾರವಾರ: ತನ್ನಿಬ್ಬರು ಗಂಡು ಮಕ್ಕಳನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ಮಹಿಳೆಯೊಬ್ಬರು ಸಮುದ್ರಕ್ಕೆ ಹಾರಿದ (Self Harming) ಘಟನೆ ನಡೆದಿದೆ. ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೆಡ್‌ಬಂದರ್ ಬಳಿ ಸಮುದ್ರದಲ್ಲಿ ಶನಿವಾರ ಸಂಜೆ ಈ ದುರ್ಘಟನೆ ನಡೆದಿದೆ.
ನಿವೇದಿತಾ ನಾಗರಾಜ ಭಂಡಾರಿ ಸಮುದ್ರಕ್ಕೆ ಹಾರಿದವರು. ಸಾಂತಗಲ್ ಗ್ರಾಮದ ನಿವಾಸಿಯಾಗಿರುವ ನಿವೇದಿತಾ ನಿನ್ನೆ ಶನಿವಾರ ಮನೆಯಿಂದ ಸ್ಕೂಟಿಯಲ್ಲಿ ಇಬ್ಬರೂ ಗಂಡುಮಕ್ಕಳನ್ನು ಕರೆತಂದಿದ್ದರು. ಕುಮಟಾದ ಪಿಕ್‌ಅಪ್ ಬಸ್‌ನಿಲ್ದಾಣದ ಬಳಿ ಮಕ್ಕಳನ್ನು ಬಿಟ್ಟು ವಾಪಸ್ ಬರುವುದಾಗಿ ಹೇಳಿ ತೆರಳಿದ್ದಾರೆ.
ಆತ್ಮಹತ್ಯೆಗೂ ಮುನ್ನ ಸ್ಕೂಟಿ ಡಿಕ್ಕಿಯೊಳಗೆ ತನ್ನ ಮಾಂಗಲ್ಯ ಸರ, ಕಾಲುಂಗುರ, ಮೊಬೈಲ್ ಇಟ್ಟು ಸಮುದ್ರಕ್ಕೆ ಹಾರಿದ್ದಾರೆ. ನಿವೇದಿತಾ ಸಮುದ್ರಕ್ಕೆ ಹಾರುವುದನ್ನು ಲೈಫ್ ಗಾರ್ಡ್ ಗಮನಿಸಿ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ಅಲೆಗಳ ಅಬ್ಬರ ಹೆಚ್ಚಿದ್ದರಿಂದ ಮಹಿಳೆ ಕಣ್ಮರೆಯಾಗಿದ್ದಾರೆ.
ಡೆತ್‌ನೋಟ್ ನೋಟ್ ಪತ್ತೆ
ಮಕ್ಕಳನ್ನ ಬಿಟ್ಟು ತಾಯಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಕೂಟಿಯಲ್ಲಿ ಮಹಿಳೆ ಬರೆದಿಟ್ಟ ಡೆತ್‌ನೋಟ್ ಪತ್ತೆ ಆಗಿದೆ. ಡೆತ್‌ನೋಟ್‌ನಲ್ಲಿ ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿಕೊಂಡಿದ್ದಾರೆ. ಏನೋ ಸಾಧನೆ ಮಾಡಬೇಕು ಅಂದುಕೊಂಡಿದ್ದೆ, ಜೀವನ ಸಾವಿನ ಅಂಚಿಗೆ ಬಂದಿದೆ. ನನ್ನ ಹೆಣ ಸಿಗಬಾರದು ಅಂತಲೇ ಸಮುದ್ರಕ್ಕೆ ಹಾರುತ್ತಿರುವುದಾಗಿ ನಿವೇದಿತಾ ಭಂಡಾರಿ ಪತ್ರ ಬರೆದಿದ್ದಾರೆ.
ಸ್ಥಳಕ್ಕೆ ಕುಮಟಾ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಸಮುದ್ರದಲ್ಲಿ ಕಣ್ಮರೆಯಾಗಿರುವ ನಿವೇದಿಳಿಗಾಗಿ ಹುಡುಕಾಟ ಮುಂದುವರಿದಿದೆ. ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಿದ್ದೆಗೆ ಜಾರಿದ ಹೆಂಡ್ತಿಗೆ ದೊಣ್ಣೆಯಿಂದ ಹೊಡೆದು ಕೊಂದ ಗಂಡ!
ಆನೇಕಲ್: ನಿದ್ದೆಗೆ ಜಾರಿದ ಪತ್ನಿಯನ್ನು ದೊಣ್ಣೆಯಿಂದ ಹೊಡೆದು ಪತಿಯೊಬ್ಬ ಕೊಂದು (Murder case) ಹಾಕಿದ್ದಾನೆ. ಹತ್ಯೆಗೆ ಅಕ್ರಮ ಸಂಬಂಧವೇ (immoral relationship) ಕಾರಣ ಎನ್ನಲಾಗಿದೆ. ಬೆಂಗಳೂರು ಗ್ರಾಮಾಂತರದ ಆನೇಕಲ್ ತಾಲೂಕಿನ ತಮ್ಮನಾಯಕನಹಳ್ಳಿಯಲ್ಲಿ ಈ ಘಟನೆ ನಡೆದಿದೆ.
ಲಕ್ಷ್ಮಮ್ಮ (40) ಮೃತ ದುರ್ದೈವಿ. ಮಹದೇವಯ್ಯ (45) ಕೊಲೆಗೈದ ಪತಿಯಾಗಿದ್ದಾನೆ. ಈ ದಂಪತಿಗೆ ಆರು ಜನ ಮಕ್ಕಳಿದ್ದು, ಮಹದೇವಯ್ಯ ಆನೇಕಲ್‌ನ ಸ್ಟ್ರೈಡ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇತ್ತ ಪತ್ನಿ ಲಕ್ಷ್ಮಮ್ಮ ಗಾರೇ ಕೆಲಸ ಮಾಡಿಕೊಂಡಿದ್ದರು.
ಲಕ್ಷ್ಮಮ್ಮ ಕೆಲಸ ಸ್ಥಳದಲ್ಲಿ ಗಾರೇ ಕೆಲಸ ಮಾಡುವ ವ್ಯಕ್ತಿಯ ಜತೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ಬಗ್ಗೆ ಹಲವು ಬಾರಿ ಲಕ್ಷ್ಮಮ್ಮ ಹಾಗೂ ಮಹದೇವಯ್ಯ ನಡುವೆ ಗಲಾಟೆಯೂ ನಡೆದಿತ್ತು. ಪತ್ನಿಯ ವಿಚಾರ ಇಡೀ ತಮ್ಮನಾಯಕನಹಳ್ಳಿ ಗ್ರಾಮದ ಜನಕ್ಕೆ ತಿಳಿದಿತ್ತು.
ಇತ್ತ ಜನರು ಅಕ್ರಮ ಸಂಬಂಧದ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು. ಇದರಿಂದ ಮನನೊಂದ ಮಹದೇವಯ್ಯ ಮನೆಯಲ್ಲಿ ಮಲಗಿದ್ದ ಪತ್ನಿ ಲಕ್ಷ್ಮಮ್ಮ ತಲೆಗೆ ದೊಣ್ಣೆಯಿಂದ ಬಲವಾಗಿ ಹೊಡೆದಿದ್ದಾರೆ. ಹೊಡೆದ ರಭಸಕ್ಕೆ ಗಂಭೀರ ಗಾಯಗೊಂಡ ಲಕ್ಷ್ಮಮ್ಮ ಸ್ಥಳದಲ್ಲೇ ಜೀವ ಬಿಟ್ಟಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಆನೇಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಆನೇಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.