ಬೆಳಗಾವಿ: ಅವರೆಲ್ಲ ಬೆಳಗಾವಿಯ ಮದರಸಾವೊಂದರ ವಿದ್ಯಾರ್ಥಿನಿಯರು. ನಗರದ ವಿವಿಧ ಶಾಲಾ-ಕಾಲೇಜಿನಲ್ಲಿ ವ್ಯಾಸಂಗ ಮಾಡ್ತಿದ್ದರು. ವೀಕೆಂಡ್ ಎನ್ನುವ ಕಾರಣಕ್ಕೆ ನಲವತ್ತು ವಿದ್ಯಾರ್ಥಿನಿಯರು ಜತೆಯಾಗಿ ಕಿತವಾಡ್ ಫಾಲ್ಸ್‌ಗೆ ತೆರಳಿದ್ದರು. ಅವರಲ್ಲಿ ಕೆಲವರು ವಯೋಸಹಜ ಎಂಬಂತೆ ಸೆಲ್ಫಿಗೆ ಮರುಳಾಗಿದ್ದಾರೆ. ಸೆಲ್ಫಿಯಲ್ಲಿ (selfie tragedy) ಮೈಮರೆತ ಆ ಕ್ಷಣ ಅವರ ಬದುಕಿನ ಕೊನೆ ಕ್ಷಣವಾಗಿದೆ. ಫೋಟೊ ತೆಗೆದುಕೊಳ್ಳುತ್ತಿದ್ದ ಐವರು ವಿದ್ಯಾರ್ಥಿನಿಯರೂ ನೀರಿಗೆ ಉರುಳಿಬಿದ್ದಿದ್ದಾರೆ. ಅವರನ್ನು ನಾಲ್ವರ ಉಸಿರು ಅಲ್ಲೇ ನಿಂತು ಹೋಗಿದೆ. ಮತ್ತೊಬ್ಬ ವಿದ್ಯಾರ್ಥಿನಿಯರ ಸ್ಥಿತಿಗೂ ಚಿಂತಾಜನಕವಾಗಿದೆ.
ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿರುವ ಕಿತವಾಡ ಫಾಲ್ಸ್ ಪ್ರವಾಸಿಗರ ನೆಚ್ಚಿನ ತಾಣ. ವರ್ಷದ ಹನ್ನೆರಡು ತಿಂಗಳು ಬೆಳಗಾವಿ ಸೇರಿದಂತೆ ಗಡಿ ಭಾಗದ ಜನ ಇಲ್ಲಿ ಪ್ರವಾಸಕ್ಕೆ ತೆರಳುತ್ತಾರೆ. ಮಹಾರಾಷ್ಟ್ರದ ಚಂದಗಡ ತಾಲೂಕಿನಲ್ಲಿರುವ ಕಿತವಾಡ ಫಾಲ್ಸ್‌ಗೆ ಬೆಳಗಾವಿ ಕಾಮತ್ ಗಲ್ಲಿಯಲ್ಲಿರುವ ಮದರಸಾ ವೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ನಲವತ್ತು ಯುವತಿಯರು ವೀಕೆಂಡ್ ಟ್ರಿಪ್‌ಗೆ ಅಂತ ತೆರಳಿದ್ದರು. ಈ ವೇಳೆ ಗುಂಪು ಗುಂಪಾಗಿ ತಮಗೆ ಬೇಕಾದ ಕಡೆಗಳಲ್ಲಿ ನಿಂತು ಎಂಜಾಯ್ ಮಾಡುತ್ತಿದ್ದರು.
ಆದರೆ ಏನಾಯಿತೋ ಗೊತ್ತಿಲ್ಲ. ನೋಡನೋಡುತ್ತಿದ್ದಂತೆ ಐವರು ಯುವತಿಯರು ಕಾಲು ಜಾರಿ ಜಲಪಾತದಲ್ಲಿ ಬಿದ್ದಿದ್ದಾರೆ. ಉಳಿದವರಿಗೂ ಈಜು ಬಾರದ ಕಾರಣಕ್ಕೆ ರಕ್ಷಣೆ ಸಾಧ್ಯವಾಗಿಲ್ಲ. ಹೀಗಾಗಿ ನಾಲ್ವರು ಸ್ಥಳದಲ್ಲೇ ಮೃತರಾಗಿದ್ದರೆ ಒಬ್ಬಾಕೆ ಯುವತಿಯ ಸ್ಥಿತಿ ಚಿಂತಾಜನಕವಾಗಿದೆ.
ಪ್ರವಾಸಿಗರ ಸಹಾಯದಿಂದ ಐವರನ್ನು ಬೀಮ್ಸ್‌ಗೆ ಕರೆತರಲಾಗಿತ್ತು. ಅಸ್ವಸ್ಥಳಾಗಿದ್ದ ಯುವತಿಯನ್ನು ಬೀಮ್ಸ್‌ನಿಂದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತರನ್ನು ಉಜ್ವಲ ನಗರದ ಆಸಿಯಾ ಮುಜಾವರ್(17), ಅನಗೋಳದ ಕುದ್‌ಶೀಯಾ ಹಾಸಂ ಪಟೇಲ್(20), ರಕ್‌ಶಾರ್ ಬಿಸ್ತಿ(20), ತಸ್ಮೀಯಾ ಭಿಸ್ತಿ(20) ಎಂದು ಗುರುತಿಸಲಾಗಿದೆ.
ಮುಗಿಲು ಮುಟ್ಟಿದ ಆಕ್ರಂದನ
ವಿಷಯ ತಿಳಿಯುತ್ತಿದ್ದಂತೆ ಬಿಮ್ಸ್ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ಎದುರು ಕುಟುಂಬಸ್ಥರು ಮತ್ತು ಸಂಬಂಧಿಕರು ಜಮಾವಣೆಗೊಂಡರು. ಈ ವೇಳೆ ಮಕ್ಕಳ ಸಾವಿನ ಸುದ್ದಿ ತಿಳಿದು ಆಗಮಿಸಿದ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾವಣೆಗೊಳ್ಳುತ್ತಿದ್ದ ಹಿನ್ನೆಲೆ ಒಂದು ಕೆಎಸ್‌ಆರ್‌ಪಿ ತುಕಡಿ ಸೇರಿ ಐವತ್ತಕ್ಕೂ ಅಧಿಕ ಸಿಬ್ಬಂದಿಯನ್ನು ಬೀಮ್ಸ್‌ಗೆ ನಿಯೋಜಿಸಲಾಗಿತ್ತು.
ಇತ್ತ ನಾಲ್ವರು ಯುವತಿಯರ ಗುರುತು ಪತ್ತೆ ಹಚ್ಚಿದ ಬಳಿಕ ಮೃತದೇಹಗಳನ್ನ ಮರಣೋತ್ತರ ಪರೀಕ್ಷೆ ಶವಾಗಾರಕ್ಕೆ ರವಾನಿಸಲಾಯಿತು. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಬಿಮ್ಸ್ ಸರ್ಜನ್ ಅಣ್ಣಾಸಾಹೇಬ್ ಪಾಟೀಲ್ ಮತ್ತು ಡಿಸಿಪಿ ರವೀಂದ್ರ ಗಡಾದಿ ಘಟನೆಯ ಮಾಹಿತಿ ಪಡೆದರು.
ಬಳಿಕ ಮಾತನಾಡಿದ ಡಿಸಿಪಿ ರವೀಂದ್ರ ಗಡಾದಿ, ಇಂದು ಬೆಳಗ್ಗೆ ನಗರದ ಮದರಸಾವೊಂದರಿಂದ ಯುವತಿಯರು ಕಿತವಾಡ ಫಾಲ್ಸ್ ಟ್ರಿಫ್‌ಗೆ ಅಂತಾ ತೆರಳಿದ್ದರು. ಈ ವೇಳೆ ಕಾಲು ಜಾರಿ ಬಿದ್ದು ನಾಲ್ವರು ಮೃತಪಟ್ಟಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆ ಬಳಿ ಭದ್ರತೆ ಒದಗಿಸಿದ್ದೇವೆ. ಮಕ್ಕಳ ಜತೆ ಯಾರಾದರೂ ಶಿಕ್ಷಕರು ತೆರಳಿದ್ದರಾ ಎಂಬ ಮಾಹಿತಿ ಪಡೆಯುತ್ತಿದ್ದೇವೆ ಈ ರೀತಿ ಪ್ರವಾಸಕ್ಕೆ ಮಕ್ಕಳನ್ನ ಕರೆದುಕೊಂಡು ಹೋದಾಗ ಹೆಚ್ಚಿನ ಮುಂಜಾಗ್ರತಾ ವಹಿಸಬೇಕು. ಕಿತವಾಡ ಫಾಲ್ಸ್ ಬಳಿ ಸೂಕ್ತ ಭದ್ರತೆ ಹಾಗೂ ಮುಂಜಾಗ್ರತಾ ಕ್ರಮ ಇಲ್ಲದಿರುವ ಕುರಿತು ಮಹಾರಾಷ್ಟ್ರ ಪೊಲೀಸರ ಜತೆಗೆ ಚರ್ಚಿಸಲಾಗುವುದು ಎಂದರು.
ಇದನ್ನೂ ಓದಿ | Drowned | ಶಿರಸಿಯಲ್ಲಿ ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು