Site icon Vistara News

ಹಿರಿಯ ಚಿಂತಕ, ವಿಮರ್ಶಕ ಜಿ.ರಾಜಶೇಖರ್‌ ನಿಧನ

g rajashekhar

ಉಡುಪಿ: ಹಿರಿಯ ಸಾಹಿತಿ ಹಾಗೂ ವಿಮರ್ಶಕರಾಗಿದ್ದ ಜಿ.ರಾಜಶೇಖರ್‌ ಅವರು ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ರಾತ್ರಿ ೧೧.೧೫ಕ್ಕೆ ನಿಧನರಾದರು. ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರರು ಇದ್ದಾರೆ.
ಉಡುಪಿಯಲ್ಲಿ ೧೯೪೬ರಲ್ಲಿ ಜನಿಸಿದ್ದ ಜಿ. ರಾಜಶೇಖರ ಅವರ ಪ್ರಸಿದ್ಧ ಕೃತಿ ಬಹುವಚನ ಭಾರತ. ೨೦೧೫ರಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಿಸಿದ್ದರೂ, ಸ್ವೀಕರಿಸಲು ನಿರಾಕರಿಸಿದ್ದರು. ಪರಿಸರ ಮತ್ತು ಸಮಾಜವಾದ, ಕಾಗೋಡು ಸತ್ಯಾಗ್ರಹ, ಬರ್ಟೋಲ್ಟ್‌ ಬ್ರೆಕ್ಟ್‌ ಪರಿಚಯ, ದಾರು ಪ್ರತಿಮ ಪೂಜಿವೇ (ಅನುವಾದ), ಕೋಮುದಾದದ ಕರಾಳ ಮುಖಗಳು, ಹರ್ಷಮಂದರ್‌ ಬರಹಗಳು (ಸಹ ಲೇಖಕ-ಕೆ.ಫಣಿರಾಜ್)‌ ಅವರ ಇತರ ಕೃತಿಗಳಾಗಿವೆ.
ಸಾಹಿತ್ಯ, ಸಮಾಜ, ರಾಜಕಾರಣ ಮತ್ತು ಸಾಂಸ್ಕೃತಿಕ ವಿಚಾರಗಳಿಗೆ ಸಂಬಂಧಿಸಿ ಸತತವಾಗಿ ಬರೆಯುತ್ತಿದ್ದ ಜಿ.ರಾಜಶೇಖರ್‌ ಹೋರಾಟಗಾರರಾಗಿಯೂ ಗುರುತಿಸಿಕೊಂಡಿದ್ದರು. ಉಡುಪಿಯಲ್ಲಿ ಪದವಿ ಶಿಕ್ಷಣ ಪೂರೈಸಿದ ಬಳಿಕ ಕೆಲ ಕಾಲ ಶಿಕ್ಷಕರಾಗಿದ್ದರು. ಬಳಿಕ ಎಲ್‌ಐಸಿಯಲ್ಲಿ ಉದ್ಯೋಗಿಯಾಗಿ ಸೇವೆ ಸಲ್ಲಿಸಿದ್ದರು.
ಜನಪರ ಹೋರಾಟಗಳ ಬಗ್ಗೆ ಜಿ.ರಾಜಶೇಖರ ಅವರಿಗೆ ಕಾಳಜಿ ಇತ್ತು. ಶಾಂತವೇರಿ ಗೋಪಾಲಗೌಡರ ನೇತೃತ್ವದಲ್ಲಿ ಕಾಗೋಡಿನಲ್ಲಿ ಚಾರಿತ್ರಿಕ ರೈತ ಚಳುವಳಿ ನಡೆದು, ಉಳುವವನೇ ಹೊಲದ ಒಡೆಯ ಎಂಬ ನೀತಿ ಜಾರಿಯಾದಾಗ, ಕಾಗೋಡಿನ ಸಣ್ಣ ರೈತರನ್ನು ಸಂದರ್ಶಿಸಿ, ಅಧ್ಯಯನ ನಡೆಸಿದ್ದರು. ವಿವರವಾದ ಲೇಖನಗಳನ್ನು ಬರೆದಿದ್ದರು. ರುಜುವಾತು ನಿಯತಕಾಲಿಕದಲ್ಲಿ ಈ ಲೇಖನಗಳು ಪ್ರಕಟವಾಗಿತ್ತು. ಬಳಿಕ ಲೇಖನಗಳ ಸಂಕಲನದ ಕೃತಿಯೂ ಬಿಡುಗಡೆಯಾಯಿತು. ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಉಡುಪಿ ಶಾಖೆಯ ಅಧ್ಯಕ್ಷರಾಗಿದ್ದರು.

Exit mobile version