Site icon Vistara News

Vijayapura Earthquake | ವಿಜಯಪುರದಲ್ಲಿ ಸರಣಿ ಭೂಕಂಪನ; ತಜ್ಞರ ಭೇಟಿ, ಭಯಗೊಳ್ಳದಂತೆ ಸಲಹೆ

Earthquake In Karnataka 

ವಿಜಯಪುರ: ಜಿಲ್ಲೆಯ ವಿವಿಧ ಕಡೆ ಸರಣಿ ಭೂಕಂಪನ (Vijayapura Earthquake) ಹಿನ್ನೆಲೆಯಲ್ಲಿ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮಕ್ಕೆ ಬೆಂಗಳೂರಿನ ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಭೂ ವೈಜ್ಞಾನಿಕ ಅಧಿಕಾರಿ ಜಗದೀಶ್ ಹಾಗೂ ಸಹಾಯಕ ಭೂ ವೈಜ್ಞಾನಿಕ ಅಧಿಕಾರಿ ರಮೇಶ ತಿಪ್ಪಾಲ ಅವರನ್ನೊಳಗೊಂಡ ತಂಡ ಭೇಟಿ ನೀಡಿದ್ದು, ಸರ್ಕಾರದ ನಿರ್ದೇಶನದ ಮೇರೆಗೆ ಪರಿಶೀಲನೆ ಕೈಗೊಂಡಿದ್ದಾರೆ.
ಅಲ್ಲದೆ, ಉಕ್ಕಲಿ ಗ್ರಾಮದಲ್ಲಿ ಜಿಲ್ಲಾಡಳಿತದ ಜತೆಗೆ ಅಧಿಕಾರಿಗಳು ಸಭೆ ನಡೆಸಿದ್ದಾರೆ. ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆನಂದ ಕುಮಾರ್‌ ಸೇರಿದಂತೆ ಇತರ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.

ಸಿಸ್ಮೋ ಮೀಟರ್‌ ಅಳವಡಿಕೆ
ಜನರಿಗೆ ಭೂಕಂಪನ ಬಗ್ಗೆ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ತಜ್ಞ ಅಧಿಕಾರಿಗಳು ಜಾಗೃತಿ ಮೂಡಿಸಿದ್ದು, ಗ್ರಾಮದಲ್ಲಿ ಸಿಸ್ಮೋ ಮೀಟರ್ ಅಳವಡಿಸಿದ್ದಾರೆ. ಅಲ್ಲದೆ, ಗ್ರಾಮದ ವಿವಿಧ ಭಾಗಗಳಲ್ಲಿ ಸಂಚರಿಸಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ | ವಿಜಯಪುರ ಸುತ್ತಮುತ್ತ ಮುಂದುವರಿದ ಭೂಕಂಪ, ಇಂದು ತಜ್ಞರ ಭೇಟಿ

ಲಘು ಭೂಕಂಪನ, ಭಯ ಬೇಡ
ಭೂಕಂಪನಕ್ಕೆ ವಿವಿಧ ಕಾರಣಗಳ ಬಗ್ಗೆ ಗ್ರಾಮದವರಿಗೆ ಭೂವಿಜ್ಞಾನಿಗಳು ವಿವರಣೆ ನೀಡಿದ್ದಾರೆ. ಈಗ ಈ ಭಾಗಗಳಲ್ಲಿ ಲಘು ಭೂಕಂಪನ ಆಗುತ್ತಿದ್ದು, ಯಾರೂ ಭಯಗೊಳ್ಳಬಾರದೆಂದು ಸಲಹೆ ನೀಡಿದ್ದಾರೆ. ಅಲ್ಲದೆ, ಭೂಮಿಯಲ್ಲಿ ತೇವಾಂಶ ಹೆಚ್ಚಾದಾಗ, ಭೂ ಚಲನೆ ವೇಳೆ ಈ ಪ್ರಕ್ರಿಯೆ ನಡೆಯುತ್ತದೆ. ಯಾರೂ ಆತಂಕಗೊಳ್ಳದೆ ಸೂಕ್ತ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದಾರೆ.

ಗುರುವಾರ ರಾತ್ರಿಯಿಂದ ಕಂಪನ
ವಿಜಯಪುರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುರುವಾರ ರಾತ್ರಿ ಲಘು ಭೂಕಂಪನದ ಸರಣಿ ಮುಂದುವರಿದಿತ್ತು. ಶುಕ್ರವಾರ ಬೆಳಗಿನ ಜಾವವೂ ಭೂಮಿ ಕಂಪಿಸಿದ ಅನುಭವ ಆಗಿತ್ತು. ಮಧ್ಯರಾತ್ರಿ 2.21 ಹಾಗೂ ಮುಂಜಾನೆ 7 ಗಂಟೆಗೆ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 3.9 ತೀವ್ರತೆಯ ಕಂಪನ ದಾಖಲಾಗಿದೆ. ಕಂಪನದ ಕೇಂದ್ರ 10 ಕಿಲೋಮೀಟರ್ ಆಳದಲ್ಲಿದೆ ಎನ್ನಲಾಗಿದೆ.

ಎಲ್ಲೆಲ್ಲಿ ಕಂಪನ?
ವಿಜಯಪುರ, ಬಸವನಬಾಗೇವಾಡಿ, ಸಿಂದಗಿ, ಇಂಡಿ, ಜಮಖಂಡಿ, ಬಾಗಲಕೋಟೆ, ಸೊಲ್ಲಾಪುರದಲ್ಲೂ ಕಂಪನದ ಅನುಭವವಾಗಿದೆ. ಕಳೆದ ಹಲವು ತಿಂಗಳುಗಳಿಂದ ಪ್ರದೇಶದಲ್ಲಿ ಮತ್ತೆ ಮತ್ತೆ ಭೂಕಂಪನ ಸಂಭವಿಸುತ್ತಿದ್ದು, ಜನತೆ ಆತಂಕದಲ್ಲಿದ್ದಾರೆ.

ಇದನ್ನೂ ಓದಿ | Vijayapura News | ವಿಜಯಪುರ ಡಾಬಾ ಕುರ್ಚಿ ಗಲಾಟೆ; ಚೂರಿ ಇರಿದಿದ್ದ ನಾಲ್ವರ ಅರೆಸ್ಟ್‌

Exit mobile version