Site icon Vistara News

Sevalal Jayanthi: ಸಂತ ಸೇವಾಲಾಲ್‌ ಮಹಾಮಠ ಪ್ರತಿಷ್ಠಾನಕ್ಕೆ ₹10 ಕೋಟಿ ಅನುದಾನ: ಸಿಎಂ ಬೊಮ್ಮಾಯಿ

#image_title

ದಾವಣಗೆರೆ: ಬಂಜಾರ ಸಮಾಜ ವೈಶಿಷ್ಟ್ಯಪೂರ್ಣ ಸಮಾಜವಾಗಿದ್ದು, ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ವ್ಯಾಪಿಸಿದೆ. ಸಂತ ಸೇವಾಲಾಲ್‌ರ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿದ್ದು, ಶ್ರೀ ಸಂತ ಸೇವಾಲಾಲ್‌ ಮಹಾಮಠ ಪ್ರತಿಷ್ಠಾನಕ್ಕೆ (Sevalal Jayanthi) 10 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಜಿಲ್ಲೆಯ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಮಂಗಳವಾರ ಆಯೋಜಿಸಿದ್ದ ಶ್ರೀ ಸಂತ ಸೇವಾಲಾಲ್ ಅವರ 284ನೇ ಜಯಂತಿ ಉದ್ಘಾಟಿಸಿ ಮಾತನಾಡಿದರು.

ವಿಶೇಷ ವಸತಿ ಶಾಲೆ

ಸುರಗೊಂಡನಗೊಪ್ಪ ಇಡೀ ದೇಶಕ್ಕೆ ತಿಳಿಯಬೇಕು, ಸಮಗ್ರವಾಗಿ ಅಭಿವೃದ್ಧಿಯಾಗಬೇಕು. ಅದಕ್ಕಾಗಿ ಹಕ್ಕುಪತ್ರಗಳನ್ನು ನೀಡಿರುವ ಗ್ರಾಮಗಳಲ್ಲಿ ಮನೆ ಇಲ್ಲದವರಿಗೆ ಮನೆ ಕಟ್ಟಿಕೊಳ್ಳಲು ಎಸ್.ಸಿ.ಎಸ್.ಪಿ, ಟಿ.ಎಸ್.ಪಿ ಅಡಿಯಲ್ಲಿ ಲಿಡ್ಕರ್ ಮಾದರಿ ಕಾರ್ಯಕ್ರಮವನ್ನು ರೂಪಿಸಲಾಗುವುದು. ಈ ಸಮಾಜದ ಮಕ್ಕಳು ಶಿಕ್ಷಣವನ್ನು ಪಡೆಯಲು ಸರ್ಕಾರ ಸಂಪೂರ್ಣ ಬೆಂಬಲ ನೀಡುತ್ತದೆ. ಈ ಸಮುದಾಯದ ವಸತಿ ಹೆಚ್ಚಿರುವಲ್ಲಿ ವಿಶೇಷ ವಸತಿ ಶಾಲೆಗಳನ್ನು ನಿರ್ಮಿಸಲಾಗುವುದು. ಕೊಪ್ಪಳದ ಬಹದ್ದೂರ್ ಬಂಡೆಯಲ್ಲಿ ಹೆರಿಟೇಜ್ ವಿಲೇಜ್, ಬೀದರ್ ಜಿಲ್ಲೆಯಲ್ಲಿ ಕೌಶಲ್ಯ ತರಬೇತಿ ನೀಡುವ ಕಾರ್ಯಕ್ರಮವನ್ನು ತಾಂಡಾ ಅಭಿವೃದ್ಧಿ ನಿಗಮದಿಂದ ವಿಶೇಷ ಅನುದಾನ ನೀಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಭರವಸೆಯಿತ್ತರು.

ಇದನ್ನೂ ಓದಿ | Siddaramaiah: ಕರ್ನಾಟಕ ರಾಜಕಾರಣದಲ್ಲಿ ನಾನು ಎಂದೆಂದಿಗೂ ಪ್ರಸ್ತುತನಾಗಿಯೇ ಇರುತ್ತೇನೆ: ಸಿದ್ದರಾಮಯ್ಯ

ವೈಶಿಷ್ಟ್ಯಪೂರ್ಣ ಬಂಜಾರ ಸಮಾಜ

ಶ್ರೀ ಸಂತ ಸೇವಾಲಾಲರು ನ್ಯಾಮತಿಯಲ್ಲಿ ಹುಟ್ಟಿ, ಸಮಾಜವನ್ನು ಜಾಗೃತಗೊಳಿಸಿ, ತಮ್ಮ ಸಿದ್ಧಾಂತಗಳನ್ನು ಜನರಿಗೆ ಮುಟ್ಟಿಸಿ ಬದುಕುವ ದಾರಿಯನ್ನು ತೋರಿಸಿದ್ದಾರೆ. ಸತ್ಯವನ್ನು ನುಡಿಯಿರಿ, ಪ್ರಾಣಿ ಹಿಂಸೆ ಮಾಡದಿರಿ, ದಯೆಯೇ ಧರ್ಮ, ದುಡಿಮೆಯಿಂದ ಬದುಕು ಎಂಬ ಮಂತ್ರಗಳಿಂದ ಈ ಸಮಾಜವನ್ನು ಉದ್ಧಾರ ಮಾಡುವ ಕೆಲಸ ಮಾಡಿದ್ದಾರೆ. ಅವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತ. ಬಂಜಾರ ಸಮಾಜ ವೈಶಿಷ್ಟ್ಯಪೂರ್ಣ ಸಮಾಜವಾಗಿದ್ದು, ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ವ್ಯಾಪಿಸಿದೆ ಎಂದರು.

ಧಾರವಾಡದಲ್ಲಿ ಕರ್ನಾಟಕ ಕಾಲೇಜಿನಲ್ಲಿ ವ್ಯಾಸಂಗ ಪಡೆಯಲು 200 ಎಸ್‌ಸಿ ಮಕ್ಕಳ ಆಯ್ಕೆಯಲ್ಲಿ 98 ಜನ ಬಂಜಾರ ಸಮುದಾಯಕ್ಕೆ ಸೇರಿದವರಾಗಿದ್ದಾರೆ. 14 ಜನ ನ್ಯಾಯಾಧೀಶರ ನೇಮಕಾತಿಯಲ್ಲಿ 6 ಜನ ಈ ಸಮುದಾಯದವರಾಗಿದ್ದಾರೆ. ಎಲ್ಲ ರಂಗದಲ್ಲಿ ಅಭಿವೃದ್ಧಿಹೊಂದುವ ಬಂಜಾರ ಸಮುದಾಯಕ್ಕೆ ಸಮಾನ ಅವಕಾಶಗಳು ದೊರೆಯಬೇಕಿದೆ. ನಮ್ಮ ಸರ್ಕಾರ ಕಳೆದ ಹಲವು ದಶಕಗಳ ಬೇಡಿಕೆಯಾಗಿದ್ದ ಎಸ್‌ಸಿ ಮೀಸಲಾತಿಯನ್ನು ಶೇ.15 ರಿಂದ ಶೇ.17 ಮತ್ತು ಎಸ್‌ಟಿಗೆ ಶೇ.3 ರಿಂದ ಶೇ.17ಕ್ಕೆ ಹೆಚ್ಚಿಸಿದೆ. ಇದರಿಂದ ಶಿಕ್ಷಣ ಮತ್ತು ಉದ್ಯೋಗದಲ್ಲಿ ದೊಡ್ಡ ಪ್ರಮಾಣದ ಅವಕಾಶಗಳು ದೊರೆಯಲಿವೆ ಎಂದು ತಿಳಿಸಿದರು.

ಮಾರ್ಚ್‌ನಲ್ಲಿ 52 ಸಾವಿರ ಜನರಿಗೆ ಹಕ್ಕುಪತ್ರ

ತಾಂಡಾ ಅಭಿವೃದ್ಧಿ ನಿಗಮದಿಂದ 960 ಕೋಟಿ ರೂ.ಗಳನ್ನು ನಿಮಗಕ್ಕೆ ನೀಡಿದ್ದು, ಅಭಿವೃದ್ಧಿಗೆ ಕ್ರಮ ವಹಿಸಲಾಗಿದೆ. ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿ 52 ಸಾವಿರ ಜನರಿಗೆ ಹಕ್ಕುಪತ್ರವನ್ನು ಇತ್ತೀಚೆಗೆ ಪ್ರಧಾನಿಗಳಿಂದ ಕೊಡಿಸಲಾಗಿದೆ. ಮಾರ್ಚ್ ತಿಂಗಳಲ್ಲಿ ಹೊನ್ನಾಳಿ ತಾಲೂಕಿನ ನ್ಯಾಮತಿ ಬಳಿ ಗೊಲ್ಲರಹಟ್ಟಿ, ಕುರುಬರಹಟ್ಟಿ, ಲಂಬಾಣಿ ತಾಂಡಾಗಳಿಗೆ ಇನ್ನೂ 52 ಸಾವಿರ ಜನರಿಗೆ ಹಕ್ಕು ಪತ್ರ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಇದನ್ನೂ ಓದಿ: Kalburgi Politics: ಅಪ್ಪನ ಸೋಲಿಸಿದ್ದೆವು, ಮಗನನ್ನೂ ಸೋಲಿಸುವೆ: ಪ್ರಿಯಾಂಕ್‌ ಖರ್ಗೆ ವಿರುದ್ಧ ತೊಡೆ ತಟ್ಟಿದ ಬಾಬುರಾವ್‌ ಚಿಂಚನಸೂರು

ಸರ್ಕಾರದ ಬೆಂಬಲ

ಶಿಕ್ಷಣ, ಉದ್ಯೋಗ, ಸೂರು, ಕುಲ ಕಸುಬಿಗೆ ಆರ್ಥಿಕ ಬೆಂಬವನ್ನು ಕಾಯಕ ಯೋಜನೆಯಡಿ ನೀಡಲಾಗುವುದು. ಬದಲಾವಣೆಯ ಕಾಲದಲ್ಲಿ ಜಾಗೃತರಾಗಿ ಭವಿಷ್ಯದ ಬಗ್ಗೆ ಚಿಂತನೆ ಮಾಡಬೇಕು. ಯುವಕರು ಸ್ವಾವಲಂಬಿಗಳಾಗಿ ಉನ್ನತ ಮಟ್ಟಕ್ಕೆ ಬೆಳೆಯಬೇಕು ಎಂದರು.

ಸಚಿವ ಪ್ರಭು ಚವ್ಹಾಣ್, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಶಾಸಕ ಪಿ.ರಾಜೀವ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

Exit mobile version