Site icon Vistara News

ಆಜಾನ್‌ V/s ಭಜನೆ: ರಾಜ್ಯಾದ್ಯಂತ ಹನುಮಾನ್‌ ಚಾಲೀಸಾ ಅಭಿಯಾನ

ಬೆಂಗಳೂರು: ಆಜಾನ್‌ ಕೂಗುವ ಮೈಕ್‌ಗಳನ್ನು ಮಸೀದಿಗಳಿಂದ ತೆರವು ಮಾಡದಿರುವುದನ್ನು ಪ್ರತಿಭಟಿಸಿ ರಾಜ್ಯದೆಲ್ಲೆಡೆ ಸಂಘ ಪರಿವಾರದ ಕಾರ್ಯಕರ್ತರು ಸುಪ್ರಭಾತ ಮತ್ತು ಭಜನೆಯನ್ನು ಮೊಳಗಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಆಜಾನ್‌-ಭಜನೆ ವಿವಾದ ತೀವ್ರ ಸ್ವರೂಪ ಪಡೆದಿದೆ.

“ಸುಪ್ರೀಂ ಕೋರ್ಟ್ ಆದೇಶದಂತೆ ಮಸೀದಿಗಳಲ್ಲಿನ ಆಜಾನ್ ಸದ್ದಿಗೆ ಕಡಿವಾಣ ಹಾಕಬೇಕು. ಮೈಕ್‌ ಗಳನ್ನು ತೆರವುಗೊಳಿಸಬೇಕು,ʼʼ ಎಂದು ಆಗ್ರಹಿಸಿ ಶ್ರೀರಾಮ ಸೇನೆ ಮುಖಂಡ ಪ್ರಮೋದ್‌ ಮುತಾಲಿಕ್‌ ಅವರು ರಾಜ್ಯ ಸರಕಾರಕ್ಕೆ ಮೇ 9ರ ಗಡುವು ವಿಧಿಸಿದ್ದರು. ಆದರೆ ಸರಕಾರ ಇದುವರೆಗೂ ಮೈಕ್‌ ಗಳನ್ನು ತೆರವು ಮಾಡಿಲ್ಲ ಎಂದು ಆಪಾದಿಸಿ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ರಾಜ್ಯದ ಸಾವಿರಾರು ದೇವಾಲಯಗಳಲ್ಲಿ ಹನುಮಾನ್ ಚಾಲೀಸಾ ಹಾಗೂ ಭಕ್ತಿ ಗೀತೆಗಳನ್ನು ಮೊಳಗಿಸಲಾಯಿತು.

ದಾವಣಗೆರೆಯ ವಿನೋಭಾ ನಗರದ ಮೂರು ಮಸೀದಿಗಳ ಮಧ್ಯೆ ಇರುವ ಆಂಜನೇಯ ದೇವಸ್ಥಾನದಲ್ಲಿ ಸಂಜೆ 6 ಗಂಟೆಗೆ ಹನುಮಾನ್‌ ಚಾಲೀಸಾ ಮೊಳಗಿಸಲು ಶ್ರೀ ರಾಮ ಸೇನೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅದೇ ರೀತಿ ವಿಜಯಪುರದಲ್ಲಿ ಭಜನಾ ಅಭಿಯಾನದ ಕಾವು ಜೋರಾಗಿದೆ. ಜಮಖಂಡಿ‌ಯ ರಸ್ತೆ ಪಕ್ಕ ಭಕ್ತಿ ಗೀತೆ ಹಾಗೂ ವಿದ್ಯುತ್ ಚಾಲಿತ ವಾದ್ಯ ಮೊಳಗಿಸಿ ಅಭಿಯಾನ ನಡೆಸಲಾಯಿತು. ಹಿಂದೂ ಪರ ಯುವಕರು ಇಲ್ಲಿಯ ಬಸವೇಶ್ವರ ‌ದೇವಸ್ಥಾನದಲ್ಲಿ ಸಂಜೆ ಭಜನೆ ಮಾಡಲು ಮುಂದಾಗಿದ್ದಾರೆ. ಆಜಾನ್‌ ಗೆ ಬಳಕೆ ಮಾಡುವ ಧ್ವನಿವರ್ದಕ ತೆರವು ಮಾಡಲು ಒತ್ತಾಯಿಸಿದ್ದಾರೆ. ಆಜಾನ್ ಗೆ ಬಳಸುವ ಧ್ವನಿವರ್ಧಕ ತೆಗೆಯುವವರೆಗೂ ಅಭಿಯಾನ ಮುಂದುವರಿಯುತ್ತದೆ ಎಂದು ಸಂಘ ಪರಿವಾರದ ಕಾಯಕರ್ತರು ಹೇಳಿದ್ದಾರೆ.

ಇದನ್ನೂ ಓದಿ : ಛೋಟಾ ಪಾಕಿಸ್ತಾನ್‌ ಎಂದ ಇಬ್ಬರ ಬಂಧನ: ಎನ್‌ಕೌಂಟರ್‌ ಮಾಡಿ ಬಿಸಾಕಿ ಎಂದ ಪ್ರಮೋದ್‌ ಮುತಾಲಿಕ್‌

ಮನೆ ಮನೆ ರಾಮ ಅಭಿಯಾನ

ಬೆಂಗಳೂರಿನಲ್ಲಿ “ಮನೆ ಮನೆ ರಾಮ ಅಭಿಯಾನʼ ಶುರುವಾಗಿದೆ. ಹೊಸಪೇಟೆ ನಗರದಲ್ಲೂ ಹನುಮಾನ್‌ ಚಾಲೀಸಾ ಸದ್ದು ಜೋರಾಗಿದೆ. ಈ ಕುರಿತಂತೆ ವಿವೇಕನಗರದ ಬಳಿಯ ಆಂಜನೇಯ ದೇವಸ್ಥಾನದಲ್ಲಿ ಹನುಮಾನ್ ಚಾಲೀಸಾ ಹಾಕುವುದಾಗಿ ಶ್ರೀರಾಮ ಸೇನೆ ಮುಖಂಡರು ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ವಿವೇಕನಗರದ ಆಂಜನೇಯ ದೇವಸ್ಥಾನದ ಬಳಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು.

ಋಷಿಕುಮಾರ ಸ್ವಾಮೀಜಿ ಭಾಗಿ

ಬೆಂಗಳೂರಿನ ಉಲ್ಲಾಳು ಬಳಿಯ ಹಲವಾರು ಹಿಂದೂ ಭಕ್ತರ ಮನೆಯಲ್ಲಿ “ಮನೆ ಮನೆ ರಾಮ ಜಪʼ ಕೇಳಿ ಬಂತು. ಇಲ್ಲಿ ಋಷಿಕುಮಾರ ಸ್ವಾಮೀಜಿ ಅವರ ನೇತೃತ್ವದಲ್ಲಿ ಬೆಳಗ್ಗೆ 5.30ರಿಂದ ರಾಮತಾರಕ ಮಂತ್ರ ಪಠಣ ನಡೆಯಿತು. ಸ್ವಾಮೀಜಿ ಅವರಿಗೆ ನೂರಾರು ಹಿಂದೂ ಕಾರ್ಯಕರ್ತರು ಬೆಂಬಲ ನೀಡಿದರು. ಈ ಸಂದರ್ಭದಲ್ಲಿ ಹಲವಾರು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ಕೆಂಗೇರಿ ಉಪನಗರದಲ್ಲಿಯೂ ಶ್ರೀ ರಾಮ ಮಂತ್ರ ಜಪಿಸಲಾಗಿದೆ. ವೃದ್ಧೆಯೊಬ್ಬರು ಬೆಳಗಿನ ಜಾವ 5.30ಕ್ಕೆ ಈ ಅಭಿಯಾನದಲ್ಲಿ ಭಾಗಿಯಾಗಿದ್ದು ಗಮನ ಸೆಳೆಯಿತು.

ಪ್ರಮೋದ್‌ ಮುತಾಲಿಕ್‌ ಆಕ್ರೋಶ

ಈ ವಿಚಾರಕ್ಕೆ ಸಂಬಂಧಿಸಿ ಶ್ರೀ ರಾಮ ಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದು, “ಸರಕಾರ ಕೇವಲ ನೋಟಿಸ್ ಕೊಟ್ಟು ಕಣ್ಣೊರೆಸುವ ಕೆಲಸ ಮಾಡುತ್ತಿದೆ. ಮುಖ್ಯಮಂತ್ರಿ, ಗೃಹ ಸಚಿವರು ಮತ್ತು ಎಲ್ಲ ಜಿಲ್ಲಾಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡುತ್ತೇವೆ,ʼʼ ಎಂದು ಎಚ್ಚರಿಸಿದ್ದಾರೆ.

“ಆಜಾನ್‌ನಿಂದ ರೋಗಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಸೋಮವಾರ ಆರಂಭವಾದ ನಮ್ಮ ಅಭಿಯಾನ ಮುಂದುವರಿಯುತ್ತದೆ. ಬೆಂಗಳೂರಿನಲ್ಲಿ ಕಾರ್ಯಕರ್ತರನ್ನು ಪೊಲೀಸರು ವಶಪಡಿಸಿಕೊಂಡಿರುವುದು ಖಂಡನೀಯ. ಭಜನೆ ಮಾಡುವುದು ಅಪರಾಧವೆ? ನಮಗೆ ಪೂಜೆ ಮಾಡುವ ಸ್ವಾತಂತ್ರ್ಯವೂ ಇಲ್ಲವೇ,ʼʼ ಎಂದವರು ಪ್ರಶ್ನಿಸಿದ್ದಾರೆ.

“ಸೋಮವಾರ ಬೆಳಗ್ಗೆಯಿಂದಲೇ ನಾವು ಸುಪ್ರಭಾತ ಮತ್ತು ಹನುಮಾನ್‌ ಚಾಲೀಸಾ ಪಠಣ ಮಾಡಿದ್ದೇವೆ. ಬೆಳಗ್ಗೆ ಮತ್ತು ಸಂಜೆ ಚಾಲೀಸಾ ಪಠಿಸುತ್ತೇವೆ. ಸರಕಾರದ ನಿಯಮದ ಪ್ರಕಾರ ನಾವು ನಿಗದಿತ ಸೌಂಡ್ ನಲ್ಲಿ ಪಠಣೆ ಮಾಡುತ್ತೇವೆ,ʼʼ ಎಂದು ಶ್ರೀರಾಮ ಸೇನೆಯ ಪ್ರಾಂತೀಯ ಅಧ್ಯಕ್ಷ ಸಂಜೀವ ಮರಡಿ ಹೇಳಿದ್ದಾರೆ.

ಸಚಿವ ಅಂಗಾರ ಹೇಳಿದ್ದೇನು?

ಪ್ರಮೋದ್‌ ಮುತಾಲಿಕ್‌ ಬಿಜೆಪಿ ಸರಕಾರದ ವಿರುದ್ಧ ಕಿಡಿಕಾರಿರುವ ಕುರಿತು ಮೀನುಗಾರಿಕೆ ಸಚಿವ ಅಂಗಾರ ಪ್ರತಿಕ್ರಿಯಿಸಿದ್ದು, “”ಯಾರು ಏನೇ ಹೇಳಿದರೂ ಬಿಜೆಪಿಯ ಮೂಲ ಉದ್ದೇಶದಲ್ಲಿ ಯಾವುದೇ ಬದಲಾವಣೆ ಇಲ್ಲ. 1957 ರಲ್ಲಿ ಜನಸಂಘ ಹುಟ್ಟಿಕೊಂಡಿತ್ತು. ಜನಸಂಘದ ಉದ್ದೇಶವನ್ನು ಇವತ್ತಿಗೂ ಪಾಲಿಸುತ್ತಿದ್ದೇವೆ. ಈ ದೇಶವನ್ನು ಮತ್ತೊಮ್ಮೆ ಪರಮ ವೈಭವಕ್ಕೆ ಕೊಂಡೊಯ್ಯುವುದು ನಮ್ಮ ಗುರಿ. ಈ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ,ʼʼ ಎಂದಿದ್ದಾರೆ.

ಸರಕಾರ ಸಂಘರ್ಷಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಕೋರ್ಟ್ ತೀರ್ಪು ಪಾಲಿಸಲು ಸರಕಾರ ಬದ್ಧವಾಗಿದೆ. ಎಲ್ಲ ತೀರ್ಮಾನಗಳನ್ನು ತಕ್ಷಣ ಮಾಡಲು ಸಾಧ್ಯವಿಲ್ಲ. ಕಾನೂನು ಪಾಲನೆ ಮಾಡುವ ಕೆಲಸವನ್ನು ಸರಕಾರ ಮಾಡುತ್ತದೆ,ʼʼ ಎಂದಿದ್ದಾರೆ.

ಇದನ್ನೂ ಓದಿ : ವಕ್ಫ್‌ ಬೋರ್ಡ್‌ ಅಭಿಯಾನಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ: ಧಾರ್ಮಿಕ ವಿವಾದದಿಂದ CM ಅಂತರ

Exit mobile version