Site icon Vistara News

Public Protests: ನಾಳೆ ಸರ್ಕಾರಕ್ಕೆ ತಟ್ಟಲಿದೆ ಸಾಲು ಸಾಲು ಪ್ರತಿಭಟನೆಗಳ ಬಿಸಿ

Anganwadi Workers

#image_title

ಬೆಂಗಳೂರು: ಚುನಾವಣೆ ಹತ್ತಿರ ಬರುತ್ತಿರುವಂತೆ ಸರ್ಕಾರದಿಂದ ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆಗಳೂ ಹೆಚ್ಚುತ್ತಿವೆ. ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ನಾಳೆ ಹಲವಾರು ಪ್ರತಿಭಟನೆಗಳು ರಾಜಧಾನಿಯಲ್ಲಿ ನಡೆಯಲಿದ್ದು, ಸರ್ಕಾರಕ್ಕೆ ಬಿಸಿ ಮುಟ್ಟಿಸಲಿವೆ.

ಸರ್ಕಾರಿ ನೌಕರರ ಸಂಘದ ಸದಸ್ಯರು 7ನೇ ವೇತನ ಆಯೋಗದ ಶಿಫಾರಸುಗಳ ಜಾರಿ ಹಾಗೂ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಜಾರಿ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಿದ್ದಾರೆ. ಇತ್ತೀಚೆಗೆ ಸರ್ಕಾರ ಸರ್ಕಾರಿ ನೌಕರರ ಕೆಲವು ಬೇಡಿಕೆ ಈಡೇರಿಸಿದ್ದರೂ, ನೌಕಕರು ತೃಪ್ತರಾಗಿಲ್ಲ.

ಇನ್ನೊಂದು ಕಡೆ ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರಿಂದಲೂ ಪ್ರತಿಭಟನೆ ನಡೆಯಲಿದೆ. ಇವರು ಗ್ರ್ಯಾಚ್ಯುಟಿ ಹಾಗೂ ಪಿಂಚಣಿಗೆ ಆಗ್ರಹಿಸುತ್ತಿದ್ದಾರೆ. ಸಾರಿಗೆ ನೌಕರರಿಂದಲೂ ಪ್ರತಿಭಟನೆ ನಡೆಯಲಿದೆ. ಪ್ರತಿ ನಾಲ್ಕು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಮಾಡುತ್ತಿದ್ದ ನಿಗಮಗಳು ಆರು ವರ್ಷ ಕಳೆದರೂ ವೇತನ ಪರಿಷ್ಕರಣೆ ಬಗ್ಗೆ ಪ್ರಸ್ತಾಪ ಮಾಡಿಲ್ಲ ಎಂಬುದು ಇವರ ಸಿಟ್ಟು. ಮತ್ತೊಂದೆಡೆ ಕೆಲಸ ಕಾಯಂ ಹಾಗೂ ವೇತನ ಏರಿಕೆಗೆ ಆಗ್ರಹಿಸಿ ಪೌರಕಾರ್ಮಿಕರು ಬೀದಿಗಿಳಿಯುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಏರುತ್ತಿರುವ ಮುಷ್ಕರಗಳ ಸಂಖ್ಯೆ ಸರ್ಕಾರಕ್ಕೆ ತಲೆನೋವಾಗಲಿದೆ.

ಯಾವ್ಯಾವ ಸೇವೆಗಳು ಸ್ಥಗಿತ?

ಸರ್ಕಾರಿ ನೌಕರರ ಮುಷ್ಕರದಿಂದಾಗಿ ಶಾಲಾ ಕಾಲೇಜುಗಳು, ತ್ಯಾಜ್ಯ ವಿಲೇವಾರಿ, ಕಂದಾಯ ಸೇವೆಗಳು ವ್ಯತ್ಯಯವಾಗಲಿವೆ. ಆರೋಗ್ಯ ಇಲಾಖೆ, ಗ್ರಾಮ ಪಂಚಾಯಿತಿ, ನಗರ ಸ್ಥಳೀಯ ಸಂಸ್ಥೆಗಳು, ಬಿಬಿಎಂಪಿ ನೌಕರರ ಸೇವೆ, ಅರಣ್ಯ ಇಲಾಖೆ, ತಹಶೀಲ್ದಾರ್ ಕಚೇರಿ, ಆಸ್ಪತ್ರೆಗಳಲ್ಲಿ ಓಪಿಡಿ ಸೇವೆ ಬಂದ್ ಆಗಬಹುದು.

ಪಾಲಿಕೆ ವಿರುದ್ಧ ಸಿಡಿದೆದ್ದ ಪೌರಕಾರ್ಮಿಕರು

ಪೌರಕಾರ್ಮಿಕರ ಮುಷ್ಕರದಿಂದಾಗಿ ಪಾಲಿಕೆ ಮುಂದೆ ಕಸದ ರಾಶಿ ಬಿದ್ದಿದೆ. ಕೆಲಸ ಕಾಯಂಗೊಳಿಸುವಂತೆ ಪೌರಕಾರ್ಮಿಕರು ಆಗ್ರಹಿಸಿದ್ದು, ತಾತ್ಕಾಲಿಕ ಪಟ್ಟಿ ರದ್ದಿಗೆ ಒತ್ತಾಯಿಸಿದ್ದಾರೆ. ನಿನ್ನೆ ಪಾಲಿಕೆಗೆ ಡೆಡ್‌ಲೈನ್ ನೀಡಿದ್ದ ಪೌರಕಾರ್ಮಿಕರು ಇಂದು ಬಿಬಿಎಂಪಿ ಪ್ರಧಾನ ಕಚೇರಿಯ ಮುಂದೆ ಕಸ ಗುಡಿಸದೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಯಂ ಪಟ್ಟಿಯಲ್ಲಿರುವವರು ಮಾತ್ರ ಕೆಲಸಕ್ಕೆ ಹಾಜರಾಗಿದ್ದು, ಇತರರು ಕೆಲಸಕ್ಕೆ ಗೈರುಹಾಜರಾಗಿದ್ದಾರೆ.

ಇದನ್ನೂ ಓದಿ: 7th Pay Commission: ಸರ್ಕಾರಿ ನೌಕರರ ಮುಷ್ಕರಕ್ಕೆ ಫಾರ್ಮಸಿ ಅಧಿಕಾರಿಗಳು, ವೈದ್ಯಾಧಿಕಾರಿಗಳ ಸಂಘ ಬೆಂಬಲ

Exit mobile version