Site icon Vistara News

Sexual Harassment | ನಾಪತ್ತೆಯಾಗಿದ್ದ ಬಾಲಕಿ ಪ್ರಕರಣಕ್ಕೆ ಟ್ವಿಸ್ಟ್‌; ಆಟೋ ಚಾಲಕನಿಂದಲೇ ಅತ್ಯಾಚಾರ

Rape Sexual Harassment Banglore electronic city rape case

ಹಾಸನ: ಚನ್ನರಾಯಪಟ್ಟಣ ತಾಲೂಕಿನ ದಾಸರಹಳ್ಳಿಯ ೧೩ ವರ್ಷದ ಬಾಲಕಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದೆ. ಏನೂ ಗೊತ್ತಿಲ್ಲದಂತೆ ನಟನೆ ಮಾಡಿದ್ದ ಆಟೋ ಚಾಲಕನೇ ಬಾಲಕಿ ಮೇಲೆ ಅತ್ಯಾಚಾರ (Sexual Harassment) ಎಸಗಿದ್ದಾಗಿ ಗೊತ್ತಾಗಿದೆ. ಇದೀಗ ಪೊಲೀಸರಿಗೆ ಸಿಕ್ಕಿರುವ ಬಾಲಕಿಯು ನಡೆದಿದ್ದ ಸಂಪೂರ್ಣ ವೃತ್ತಾಂತವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾಳೆ. ತನಗೆ ಎಷ್ಟರ ಮಟ್ಟಿಗೆ ಲೈಂಗಿಕ ನೋವನ್ನು ಆತ ಕೊಟ್ಟಿದ್ದ ಎಂಬುದನ್ನು ಹೇಳಿಕೊಂಡಿದ್ದು, ಇದೆಲ್ಲದರಿಂದ ಬೇಸರಗೊಂಡು ಊರನ್ನೇ ಬಿಟ್ಟಿದ್ದಾಗಿ ನೊಂದು ನುಡಿದಿದ್ದಾಳೆ.

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಅಣತಿಯ ಶಾಲೆಯೊಂದರ ಏಳನೇ ತರಗತಿಯಲ್ಲಿ ವಿದ್ಯಾರ್ಥಿನಿಯು ನವೆಂಬರ್ 7ರಂದು ನಾಪತ್ತೆಯಾಗಿದ್ದಳು. ಶಾಲೆಗೆ ಹೋದ ಬಾಲಕಿಯು ನಾಪತ್ತೆಯಾಗಿದ್ದ ಬಗ್ಗೆ ಗಾಬರಿಗೊಂಡ ಪೋಷಕರು ನುಗ್ಗೇಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು. ಅಲ್ಲದೆ, ಆಟೋ ಚಾಲಕ ಗಿರೀಶ್‌ ಎಂಬಾತನ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿ ವಿಚಾರಣೆ ನಡೆಸಿದರೂ ಆತ ತನಗೇನೂ ಗೊತ್ತೇ ಇಲ್ಲ ಎಂದು ಹೇಳಿಕೊಂಡಿದ್ದ. ಈಗ ಬಾಲಕಿ ಪತ್ತೆಯಾಗಿದ್ದು, ಪೊಲೀಸರ ಬಳಿ ತಾನು ಏಕೆ ಊರು ಬಿಟ್ಟಿದ್ದೆ ಎಂಬ ಬಗ್ಗೆ ಹೇಳಿಕೆ ನೀಡಿದ್ದಾಳೆ.

ಬಾಲಕಿ ಮೇಲೆ ಅತ್ಯಾಚಾರ
ದಾಸರಹಳ್ಳಿ ಗ್ರಾಮದ ಪಕ್ಕದ ಊರಿನ ಹಾಸ್ಟೆಲ್‌ನಲ್ಲಿದ್ದುಕೊಂಡು ಓದುತ್ತಿದ್ದ ಬಾಲಕಿಯನ್ನು ಶಾಲೆಗೆ ಕರೆದುಕೊಂಡು ಹೋಗಿ ಬರಲು ಪರಿಚಯಸ್ಥ ಆಟೋ ಚಾಲಕ ಗಿರೀಶ್‌ನನ್ನು ನೇಮಿಸಲಾಗಿತ್ತು. ಎಂದಿನಂತೆ ಆಟೋದಲ್ಲಿ ಕರೆದುಕೊಂಡು ಹೋಗಿ ಬರುತ್ತಿದ್ದ ಆತ, ಕೊನೆ ಕೊನೆಗೆ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಪ್ರಾರಂಭಿಸಿದ್ದಾನೆ. ಹೀಗೇ ಒಂದು ದಿನ ಬಾಲಕಿ ಮೇಲೆ ಅತ್ಯಾಚಾರವನ್ನೂ ಮಾಡಿದ್ದಾನೆ. ಇದಕ್ಕಾಗಿ ಆತ ಆಟೋವನ್ನೇ ಬಳಸಿಕೊಂಡಿದ್ದು, ಆಟೋ ಮೇಲೆ ಟಾರ್ಪಲ್‌ ಹಾಕಿ ಯಾರಿಗೂ ಕಾಣದಂತೆ ಮಾಡಿ ಅತ್ಯಾಚಾರ ನಡೆಸಿದ್ದಾನೆ ಎಂದು ಬಾಲಕಿ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ.

ಇದನ್ನೂ ಓದಿ | sexual harrassment | ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಕಾಮುಕ ಅರೆಸ್ಟ್‌

ದಿನೇ ದಿನೆ ಆತನ ಕಿರುಕುಳ ಹೆಚ್ಚಾಗಿದ್ದು, ಇದರಿಂದ ನೊಂದ ಬಾಲಕಿಯು ಊರನ್ನೇ ಬಿಡುವ ನಿರ್ಧಾರ ಮಾಡಿ ನಾಪತ್ತೆಯಾಗಿದ್ದಳು. ಆದರೆ, ಈ ಯಾವ ವಿಷಯವೂ ತನಗೆ ಗೊತ್ತೇ ಇಲ್ಲದಂತೆ ಗಿರೀಶ್‌ ಇದ್ದುಬಿಟ್ಟಿದ್ದ. ನಾಪತ್ತೆಗೆ ಮುಂಚೆ ಗಿರೀಶ್‌ ಮೊಬೈಲ್‌ನಿಂದಲೇ ತನ್ನ ಪೋಷಕರಿಗೆ ಕರೆ ಮಾಡಿ ಬಾಲಕಿ ಮಾತನಾಡಿದ್ದಳು. ಈ ಹಿನ್ನೆಲೆಯಲ್ಲಿ ಪೋಷಕರು ಗಿರೀಶ್‌ ಮೇಲೆಯೇ ಅನುಮಾನ ವ್ಯಕ್ತಪಡಿಸಿದ್ದರು. ಪೊಲೀಸರು ಗಿರೀಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರೆ ತನಗೆ ಏನೂ ಗೊತ್ತೇ ಇಲ್ಲದಂತೆ ನಟಿಸಿದ್ದ.

ತುಮಕೂರಲ್ಲಿ ಪತ್ತೆ
ತನಿಖೆ ನಡೆಸಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಆಗ, ಶಾಲೆಯಿಂದ ವಾಪಸ್ ಬಂದು ರಸ್ತೆಯೊಂದರಲ್ಲಿ ಏಕಾಂಗಿಯಾಗಿ ನಿಂತಿರುವುದು ಪತ್ತೆಯಾಗಿತ್ತು. ಅಣತಿ ಶಾಲೆ ಬಳಿಯಿಂದ ಕಾರೆಹಳ್ಳಿಗೆ ಆಟೋದಲ್ಲಿ ಹೋಗಿ ಅಲ್ಲಿಂದ ತುಮಕೂರು ಬಸ್‌ ಹತ್ತಿದ್ದಳು. ಹಾಗೇ ತಿಪಟೂರಿಗೆ ಬಂದಿದ್ದಳು. ಬಸ್‌ನಲ್ಲಿ ಅಳುತ್ತಿದ್ದ ಬಾಲಕಿಯನ್ನು ಕಂಡಿದ್ದ ಸಹ ಪ್ರಯಾಣಿಕ ಮಹಿಳೆಯೊಬ್ಬರು ಆಕೆಯನ್ನು ತಮ್ಮ ಮನೆಗೆ ಕರೆದೊಯ್ದಿದ್ದರು. ಈ ವೇಳೆ ತನಗೆ ಯಾರೂ ಇಲ್ಲ, ತಾನೊಬ್ಬಳು ಅನಾಥೆಯಂದು ಬಾಲಕಿ ಹೇಳಿಕೊಂಡಿದ್ದಳಂತೆ. ಕೊನೆಗೆ ಆಕೆಯನ್ನು ಕ್ರೈಸ್ತ ಮಷಿನರಿಯೊಂದಕ್ಕೆ ಸೇರಿಸಲಾಗಿತ್ತು. ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆ ತುಮಕೂರಿನಿಂದ ಪೊಲೀಸರಿಗೆ ಮಾಹಿತಿ ದೊರೆತಿದ್ದು, ಆಕೆಯನ್ನು ರಕ್ಷಣೆ ಮಾಡಿ ಕರೆದೊಯ್ಯಲಾಗಿತ್ತು.

ಗಿರೀಶ್‌ನ ಹೇಯ ಕೃತ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಆರೋಪಿ ಗಿರೀಶ್‌ ವಿರುದ್ಧ ಪೋಕ್ಸೋ ಕಾಯ್ದೆಯನ್ನು ದಾಖಲಿಸಲಾಗಿದೆ.

ಇದನ್ನೂ ಓದಿ | Sexual Harrassment| 13 ವರ್ಷದ ಬಾಲಕಿಯ 25 ವಾರಗಳ ಗರ್ಭಪಾತಕ್ಕೆ ಹೈಕೋರ್ಟ್‌ ಅನುಮತಿ, ಭ್ರೂಣ ಸಂರಕ್ಷಣೆಗೆ ಸೂಚನೆ

Exit mobile version